• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರ್ಯಾಟ್‌ ಫೀವರ್‌ ಎಂದರೇನು ?

By Staff
|

Ratಬೆಂಗಳೂರು : ರ್ಯಾಟ್‌ ಫೀವರ್‌ ಅರ್ಥಾತ್‌ ಇಲಿ ಜ್ವರ, ಇಲಿ ಅಥವಾ ಹೆಗ್ಗಣಗಳ ಮೂತ್ರದಲ್ಲಿರುವ LEPTOSPIRA ಎಂಬ ಬ್ಯಾಕ್ಟೀರಿಯಾಗಳ ಮೂಲಕ ಮನುಷ್ಯನ ದೇಹ ಪ್ರವೇಶಿಸಿ, ಕಾಡುವ ಮಾರಕ ರೋಗ. ಹೆಚ್ಚಾಗಿ ಗದ್ದೆಗಳಲ್ಲಿ, ಹೊಲಗಳಲ್ಲಿ ಕೆಲಸ ಮಾಡುವವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ.

ನಿಂತ ನೀರಿನಲ್ಲಿ ಸ್ನಾನ ಮಾಡುವುದರಿಂದ, ಇಲಿಯ ಮೂತ್ರ ಬೆರೆತ ನೀರು ಕುಡಿಯುವುದರಿಂದ, ಕೆಲವೊಮ್ಮೆ ಸಾಕು ಪ್ರಾಣಿಗಳ ಸಂಪರ್ಕದಿಂದಲೂ ಈ ವ್ಯಾಧಿ ಹರಡುತ್ತದೆ ಎನ್ನುತ್ತಾರೆ ವೈದ್ಯರು. ಗಾಯಗಳಾಗಿದ್ದಾಗ ನೀರಿನಲ್ಲಿರುವ ಇಲಿ ಮೂತ್ರದ ಬ್ಯಾಕ್ಟೀರಿಯಾಗಳು ಮಾನವನ ಶರೀರವನ್ನು ಸುಲಭವಾಗಿ ಪ್ರವೇಶಿಸುತ್ತವೆ.

ಗದ್ದೆ, ಹೊಲಗಳಲ್ಲಿ ಇಲಿ - ಹೆಗ್ಗಣಗಳು ಇದ್ದೇ ಇರುತ್ತವೆ. ಇವುಗಳ ಮೂತ್ರ ಕೆಸರುಗದ್ದೆಯಲ್ಲಿ ನಿಂತ ನೀರಿನಲ್ಲಿ ಬೆರೆತಿರುತ್ತದೆ. ಕಾಲು ಗಾಯ ಮಾಡಿಕೊಂಡವರು ಈ ನೀರಿನಲ್ಲಿ ಓಡಾಡಿದರೂ ರ್ಯಾಟ್‌ ಫೀವರ್‌ ಸೋಂಕು ತಗುಲುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಚರಂಡಿ - ಒಳಚರಂಡಿಗಳಲ್ಲಿ ಕೆಲಸ ಮಾಡುವವರಿಗೂ ಈ ರೋಗ ಬರುವ ಸಾಧ್ಯತೆಗಳು ಹೆಚ್ಚು.

1999ರಲ್ಲಿ ಪಾವಂಜೆ ನದಿ ಪಾತ್ರದಲ್ಲಿ ಕಾಣಿಸಿಕೊಂಡ ಇಲಿ ಜ್ವರಕ್ಕೆ ನೀರಿನಲ್ಲಿ ಇಲಿ ಮೂತ್ರ ಬೆರೆತಿರುವುದೇ ಕಾರಣ ಎಂದು ಸಾಬೀತಾಗಿತ್ತು. ಆ ಅಧ್ಯಯನ ಕಾರ್ಯದಲ್ಲಿ ಪಾಲ್ಗೊಂಡಿದ್ದ ತಜ್ಞ ವೈದ್ಯ ಡಾ. ಕಕ್ಕಿಲ್ಲಾಯ ಅವರು ದಿನ ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಇಲಿ ಜ್ವರಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಹೆಚ್ಚು ಉತ್ಪತ್ತಿಯಾಗುವ ಕಾರಣ ಈ ಅವಧಿಯಲ್ಲಿ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೀರಿನಲ್ಲಿ ಇಲಿ ಮೂತ್ರ ಬೆರೆತಿರುವುದು ಪರೀಕ್ಷೆಯಿಂದ ತಿಳಿದರೆ, ಆ ನೀರಿನ ಬಳಕೆ ನಿಲ್ಲಿಸುವುದರಿಂದ ರೋಗವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಅವರು.

ಕಿಡ್ನಿಗೆ ಅಪಾಯ : ಇಲಿ ಜ್ವರದ ಪರಿಣಾಮವಾಗಿ ಜ್ವರತ ತೀವ್ರತೆ ಹೆಚ್ಚಾಗಿ, ಅದನ್ನು ನಿಯಂತ್ರಿಸುವುದು ವಿಳಂಬವಾದರೆ, ಮೂತ್ರಕೋಶ ಹಾಗೂ ಮೂತ್ರ ಪಿಂಡದ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ಮೆದುಳಿನಲ್ಲಿ ರಕ್ತಸ್ರಾವ, ಅರಿಶಿನ ಕಾಮಾಲೆ (ಹೆಪಟೈಟಿಸ್‌ -ಬಿ)ಗೂ ಇದು ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಆರಂಭದಲ್ಲೇ ಇಲಿ ಜ್ವರವನ್ನು ಪತ್ತೆ ಹಚ್ಚದಿದ್ದರೆ, ಅದು ದೇಹದ ಬೇರೆ ಬೇರೆ ಭಾಗಗಳಿಗೆ ಹರಡಿ, ಪತ್ತೆಹಚ್ಚಲು ಅಸಾಧ್ಯವಾದಂತಹ ಪರಿಣಾಮ ಉಂಟು ಮಾಡುತ್ತದೆ ಎಂದು ಡಾ. ಶ್ರೀನಿವಾಸ ಕಕ್ಕಿಲ್ಲಾಯ ತಿಳಿಸಿದ್ದಾರೆ. ಈ ಕಾರಣದಿಂದಾಗಿಯೇ ಅಂಕೋಲ, ಶಿರಸಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಸತ್ತವರು ಇಲಿ ಜ್ವರದಿಂದಲೇ ಸತ್ತರೆಂದು ನಿರ್ದಿಷ್ಟವಾಗಿ ಹೇಳಲು ಅಂಜಿಕೆ ಉಂಟುಮಾಡಿದೆ ಎಂದು ಅವರು ತಿಳಿಸಿದರು.

ಸೌಲಭ್ಯದ ಕೊರತೆ : ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲೂ ಇಲಿಜ್ವರದ ರಕ್ತ ಪರೀಕ್ಷೆ ಮಾಡುವ ಅನುಕೂಲ ಇಲ್ಲದ್ದೂ ಈರೀತಿಯ ಶಂಕೆಗಳಿಗೆ ಕಾರಣವಾಗಿದೆ ಎಂಬುದು ಅವರ ಅನಿಸಿಕೆ. ಜನ ಜ್ವರವನ್ನು ಸಾಮಾನ್ಯ ಜ್ವರ ಎಂದು ಉಪೇಕ್ಷಿಸುತ್ತಾರೆ. ಅದು ಇಲಿ ಜ್ವರವಾಗಿದ್ದರೆ, ರೋಗಪೀಡಿತರು ಆಸ್ಪತ್ರೆಗೆ ಬರುವ ಹೊತ್ತಿಗೆ ಅದು ಶರೀರದ ಎಲ್ಲ ಭಾಗವನ್ನೂ ಆವರಿಸಿಬಿಟ್ಟಿರುತ್ತದೆ.

ಮಳೆಗಾಲದ ನಂತರ ಮಲೇರಿಯಾ, ಪೈಲೇರಿಯಾ, ಡೆಂಗ್ಯೂ ಮುಂತಾದ ಜ್ವರಗಳೂ ಕಾಡುತ್ತವೆ. ಹೀಗಾಗಿ ಸಾರ್ವಜನಿಕರು ಜ್ವರವನ್ನು ಸಾಮಾನ್ಯ ಜ್ವರ ಎಂದು ತಾವೇ ನಿರ್ಧರಿಸದೆ ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸುವ ಮೂಲಕ ಅಪಾಯದಿಂದ ಪಾರಾಗಬಹುದು. ಮುನ್ನಚ್ಚರಿಕೆಯಿಂದ ಮಾತ್ರ ರೋಗ ನಿಯಂತ್ರಣ ಸಾಧ್ಯ ಎಂದು ಅವರು ಹೇಳುತ್ತಾರೆ.

ಇತಿಹಾಸ : ರಾಜ್ಯದಲ್ಲಿ ಇಲಿ ಜ್ವರದ ಬಗ್ಗೆ ನಿಖರವಾದ ಇತಿಹಾಸ ಇಲ್ಲವಾದರೂ, 15 ವರ್ಷಗಳ ಹಿಂದೆ ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ಈ ರೋಗ ಪತ್ತೆಯಾದ ಬಗ್ಗೆ ಮಾಹಿತಿ ಇದೆ. ಈ ರೋಗದ ಬಗ್ಗೆ ಆಮೂಲಾಗ್ರ ಸಂಶೋಧನೆ ನಡೆಸಿದ ತಜ್ಞರು ಈ ರೋಗಕ್ಕೆ ಇಲಿಯ ಮೂತ್ರದಲ್ಲಿರುವ ಬ್ಯಾಕ್ಟೀರಿಯಾಗಳೇ ಕಾರಣ ಎಂಬುದನ್ನು ಪತ್ತೆ ಹಚ್ಚಿದರು ಎಂದು ಅವರು ತಿಳಿಸಿದ್ದಾರೆ.

ಇಲಿಗಳನ್ನು ಕೊಲ್ಲುವುದರಿಂದ, ನಿಂತ ನೀರನ್ನು ಕುಡಿಯದಿರುವುದರಿಂದ, ನಿಂತ ನೀರಿನಲ್ಲಿ ಸ್ನಾನ ಮಾಡುವುದನ್ನು ತಡೆಯುವುದರಿಂದ ಮಿಗಿಲಾಗಿ ಜ್ವರವನ್ನು ಸಾಧಾರಣ ಜ್ವರ ಎಂದು ಉಪೇಕ್ಷಿಸದೇ ತಪಾಸಣೆ ಮಾಡಿಸಿಕೊಳ್ಳುವುದರಿಂದ ಈ ರೋಗವನ್ನು ನಿಯಂತ್ರಿಸಬಹುದಾಗಿದೆ.

ವಾರ್ತಾ ಸಂಚಯ:
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X