ಸೆ.6ರ ಕಾವೇರಿ ಸಭೆಯಲ್ಲಿ ಬರಪರಿಸ್ಥಿತಿಯ ವಿವರಣೆ : ಪಾಟೀಲ್
ಬೆಂಗಳೂರು : ತಮಿಳುನಾಡಿನ ಕುರುವೈ ಬೆಳೆಗೆ ನೀರು ಹರಿಸುವ ಸಂಬಂಧ ಸೆಪ್ಟೆಂಬರ್ 6ರ ಗುರುವಾರ ನವದೆಹಲಿಯಲ್ಲಿ ಕರೆಯಲಾಗಿರುವ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ವಿವರಿಸಲಾಗುವುದು ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಅಣೆಕಟ್ಟು ಮತ್ತು ಅಭಿವೃದ್ಧಿ ಕುರಿತ ವಿಚಾರಸಂಕಿರಣದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಮಳೆಯನ್ನೇ ಅವಲಂಬಿಸಿರುವ ರಾಜ್ಯ ಈಬಾರಿ ಭೀಕರ ಬರದಿಂದ ತತ್ತರಿಸಿದೆ.
ರಾಜ್ಯದ ಹಲವಾರು ಜಲಾಶಯಗಳು ಬರಿದಾಗಿದ್ದು, ಕೃಷಿ ಹಾಗೂ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಬಂದೊದಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಸಾಧ್ಯವೇ ಇಲ್ಲದ ಮಾತು ಎಂದು ಅವರು, ಸರಕಾರದ ನಿಲುವನ್ನು ಪುನರುಚ್ಚರಿಸಿದರು.
ಸೆ.6ರಂದು ದೆಹಲಿಯಲ್ಲಿ ನಡೆಯುವ ಸಭೆಗೆ ರಾಜ್ಯದ ಪರವಾಗಿ ಮುಖ್ಯ ಕಾರ್ಯದರ್ಶಿಯವರು ಪಾಲ್ಗೊಳ್ಳುತ್ತಿದ್ದು, ರಾಜ್ಯ ಎದುರಿಸುತ್ತಿರುವ ಬರಗಾಲದ ಪರಿಸ್ಥಿತಿಯ ಬಗ್ಗೆ ವಿವರಿಸುತ್ತಾರೆ ಎಂದೂ ಅವರು ಹೇಳಿದರು. ಕೆ.ಆರ್.ಎಸ್.ನಲ್ಲಿ ನೀರಿನ ಮಟ್ಟ ಕುಸಿದಿದೆ.
ಮಲಪ್ರಭಾ ಅಣೆಕಟ್ಟೆಯಿಂದ ಮುಂಗಾರು ಬೆಳೆಗೆ ನೀರು ಬಿಟ್ಟಿಲ್ಲ. ಈ ಎಲ್ಲ ವಾಸ್ತವ ಸಂಗತಿಗಳನ್ನೂ ಕಾವೇರಿ ನಿರ್ವಹಣಾ ಸಮಿತಿ ಸಭೆಯಲ್ಲಿ ವಿವರಿಸಲಾಗುವುದು ಎಂದರು. ರಾಜ್ಯದ ಬರಪರಿಸ್ಥಿತಿಯ ಬಗ್ಗೆ ಜಯಲಲಿತಾ ಅವರಿಗೂ ಅರಿವಿದ್ದು, ಅವರು ನಮ್ಮ ನಿಲುವಿನೊಂದಿಗೆ ಸ್ಪಂದಿಸುತ್ತಾರೆ ಎಂಬ ಆಶಾಭಾವನೆಯನ್ನೂ ಅವರು ವ್ಯಕ್ತಪಡಿಸಿದರು.
ಮುಖಪುಟ / ಇವತ್ತು... ಈ ಹೊತ್ತು...