ಸಂಪುಟ ಸಭೆಯಲ್ಲಿ ವಿರೋಧ : ವಿದ್ಯುತ್ ದರ ಏರಿಕೆಗೆ ತಾತ್ಕಾಲಿಕ ತಡೆ
ಬೆಂಗಳೂರು : ಕೈಗಾರಿಕೆ, ನೀರಾವರಿ, ಗೃಹಬಳಕೆ ಸೇರಿದಂತೆ ಎಲ್ಲ ವಲಯದ ವಿದ್ಯುತ್‌ಗೂ ಸೆಪ್ಟೆಂಬರ್ ತಿಂಗಳಿನಿಂದ ಮೀಟರ್ ಕಡ್ಡಾಯಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ಈ ವಿಷಯವನ್ನು ರಾಜ್ಯ ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ತಿಳಿಸಿದ್ದಾರೆ.
ಸಂಪುಟ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವಿತರಣೆ ಹಾಗೂ ಸರಬರಾಜಿನಲ್ಲಿ ಆಗುತ್ತಿರುವ ನಷ್ಟ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ವಿತರಣೆ ಜಾಲದಲ್ಲಿ ಶೇಕಡಾ 33ರಷ್ಟು ವಿದ್ಯುತ್ ಸೋರಿಕೆ ಆಗುತ್ತಿದ್ದು, ಇದರ ತಡೆಗೆ ಸೆ.5ರಂದು ವಿಶೇಷ ಸಭೆ ಕರೆದು ಚರ್ಚಿಸಲಾಗುವುದೆಂದರು.
ವಿದ್ಯುತ್ ವಿತರಣೆ ಹಾಗೂ ಸರಬರಾಜಿನಲ್ಲಿ ಕನಿಷ್ಠ ಶೇ. 1ರಷ್ಟು ನಷ್ಟ ತಡೆಗಟ್ಟಿದರೂ ನಿಗಮಕ್ಕೆ ಕೋಟ್ಯಂತರ ರುಪಾಯಿ ನಷ್ಟ ಕಡಿಮೆ ಆಗುತ್ತದೆ. ಪ್ರಸ್ತುತ ವಿದ್ಯುತ್‌ನಷ್ಟ ಶೇ.33ರಷ್ಟಿದ್ದು, ಮುಂದಿನ 2-3 ವರ್ಷದೊಳಗೆ ವಿದ್ಯುತ್ ನಷ್ಟವನ್ನು ಶೇ. 20ಕ್ಕೆ ಇಳಿಸಲು ನಿಗಮ ಬದ್ಧವಾಗಿದೆ ಎಂದರು. ಸದ್ಯದ ಪರಿಸ್ಥಿತಿಯಲ್ಲಿ ವಿದ್ಯುತ್ ದರ ಏರಿಸುವ ಯಾವುದೇ ಯೋಚನೆ ಸರಕಾರದ ಮುಂದಿಲ್ಲ ಎಂದೂ ಅವರು ತಿಳಿಸಿದರು.
ಉನ್ನತ ಮೂಲಗಳ ಪ್ರಕಾರ ವಿದ್ಯುತ್ ದರ ಏರಿಸುವ ಪ್ರಸ್ತಾಪ ಸಚಿವ ಸಂಪುಟದ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ವಿದ್ಯುತ್ ದರ ಏರಿಕೆಗೆ ವಿರೋಧವೂ ವ್ಯಕ್ತವಾಯಿತು. ರಾಜ್ಯದ ಜನತೆ ಭೀಕರ ಬರದಿಂದ ತತ್ತರಿಸಿರುವಾಗ ಸರಕಾರ ವಿದ್ಯುತ್ ದರ ಏರಿಕೆ ಷಾಕ್ ನೀಡುವುದು ತರವಲ್ಲ ಎಂದು ಹಲವು ಸಚಿವರು ಅಭಿಪ್ರಾಯಪಟ್ಟರು.
ದರ ಏರಿಕೆಯ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ದರ ಏರಿಸದಿರಲು ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಆದರೆ, ಎಲ್ಲ ವಲಯದ ವಿದ್ಯುತ್‌ಗೂ ಮೀಟರ್ ಕಡ್ಡಾಯಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು.
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications