ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್‌ ನಲ್ಲಿ ಕಸ್ತೂರಿ ಕನ್ನಡ ...!

By Staff
|
Google Oneindia Kannada News

ಬೆಂಗಳೂರು : ಕಂಪ್ಯೂಟರ್‌ ಬಳಸುವ ಕನ್ನಡಿಗರಿಗೊಂದು ಸಂತಸದ ಸುದ್ದಿ. ಮೈಕ್ರೋಸಾಫ್ಟ್‌ ವಿಂಡೋಸ್‌ನಲ್ಲಿ ಈಗ ಕನ್ನಡವೂ ಸೇರಲಿದೆ. ಕಂಪ್ಯೂಟರ್‌ ದೊರೆ ಬಿಲ್‌ಗೇಟ್ಸ್‌ ಅವರ ಮೈಕ್ರೋಸಾಫ್ಟ್‌ ಕಂಪನಿ ತನ್ನ ವಿಂಡೋಸ್‌ ಹೊಸ ಆವೃತ್ತಿಯಲ್ಲಿ ಕನ್ನಡವೂ ಸೇರಿದಂತೆ 9 ಭಾರತೀಯ ಭಾಷೆಗಳನ್ನು ಅಳವಡಿಸುತ್ತಿದೆ.

ಇನ್ನು ಮುಂದೆ ಕನ್ನಡ ಸಾಫ್ಟ್‌ವೇರ್‌ಗಾಗಿ ಪರಿತಪಿಸುವ ಅಗತ್ಯ ಇಲ್ಲ. ವಿಂಡೋಸ್‌ (Office XP) ಇನ್‌ಸ್ಟಾಲ್‌ ಮಾಡಿದಾಗ, ಇಂಗ್ಲಿಷ್‌ನ ಟೈಮ್ಸ್‌ ರೋಮನ್‌, ಏರಿಯಲ್‌ ಇತ್ಯಾದಿ ಫಾಂಟ್‌ಗಳು ದೊರಕುವಂತೆಯೇ ಕನ್ನಡದ ಸಾಫ್ಟ್‌ವೇರ್‌ ಹಾಗೂ ಫಾಂಟ್‌ ದೊರಕಲಿದೆ.

ಇದರಿಂದಾಗಿ ಕನ್ನಡದಲ್ಲಿಯೇ ಇ-ಮೇಲ್‌ ಕಳುಹಿಸುವ ಹಲವು ದಿನಗಳ ಹೆಬ್ಬಯಕೆ ಈಡೇರುವ ಕಾಲ ಹತ್ತಿರವಾದಂತೆ. ಬಿಲ್‌ಗೇಟ್ಸ್‌ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ನಡುವೆ ನಡೆದಿದ್ದ ಮಾತುಕತೆಯ ಫಲಶ್ರುತಿಯಿಂದಾಗಿ ಕನ್ನಡ ತಂತ್ರಾಂಶ ವಿಂಡೋಸ್‌ ಎಕ್ಸ್‌.ಪಿ.ಯಲ್ಲಿ ಸೇರ್ಪಡೆಯಾಗಿದೆ.

ಈಗಾಗಲೇ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಹೆಸರು ಮಾಡಿರುವ ಕರ್ನಾಟಕ, ಕನ್ನಡದಲ್ಲೂ ಹೆಚ್ಚಿನ ಸಾಧನೆ ಮಾಡಲು ಈ ಕನ್ನಡ ತಂತ್ರಾಂಶ ನೆರವಾಗಲಿದೆ. ವಿಂಡೋಸ್‌ನಲ್ಲಿ ಕನ್ನಡ ವಿಶ್ವಾದ್ಯಂತ ದೊರಕುವ ಕಾರಣ ಕನ್ನಡಕ್ಕೆ ವಿಶ್ವವ್ಯಾಪಿ ಮಾನ್ಯತೆ ದೊರಕಲಿದೆ.

ಆಗಸ್ಟ್‌ 25ರಂದು ಬೆಂಗಳೂರಿನ ವಿಂಡ್ಸರ್‌ ಮ್ಯಾನರ್‌ನಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಮೈಕ್ರೋ ಸಾಫ್ಟ್‌ ವಿಂಡೋಸ್‌ಗೆ ಕನ್ನಡ ಲಿಪಿಯನ್ನು ವಿಧ್ಯುಕ್ತವಾಗಿ ಅಳವಡಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಅವರು ಭಾಗವಹಿಸುತ್ತಿದ್ದಾರೆ.

ತಾಂತ್ರಿಕ ತೊಡಕು : ಮೈಕ್ರೋಸಾಫ್ಟ್‌ ವಿಂಡೋಸ್‌ನಲ್ಲಿ ಕನ್ನಡ ತಂತ್ರಾಂಶ ಸೇರ್ಪಡೆಯಾಗುತ್ತಿದ್ದರೂ, ಏಕರೂಪತೆಯ ನಿಟ್ಟಿನಲ್ಲಿ ಇನ್ನೂ ಕೆಲವು ತಾಂತ್ರಿಕ ತೊಡಕುಗಳಿದ್ದು, ಅದನ್ನು ನಿವಾರಿಸಲು ಹಾಗೂ ಇಂಟರ್‌ನೆಟ್‌ನಲ್ಲಿ ಕನ್ನಡದ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊಸ ಯೋಜನೆಯಾಂದನ್ನು ರೂಪಿಸುತ್ತಿದೆ. ಏಕರೂಪದ ತಂತ್ರಾಂಶವನ್ನು ಅಳವಡಿಸುವ ಬಗ್ಗೆ ಕೂಡ ಚರ್ಚೆ ನಡೆದಿದೆ.

ಆಗಸ್ಟ್‌ 25ರಂದು ನಡೆಯುವ ಕಾರ್ಯಕ್ರಮಾ ನಂತರ ಸಮಾನಲಿಪಿ ತಂತ್ರಾಂಶವನ್ನು ಪ್ರದರ್ಶಿಸಲಾಗುತ್ತಿದೆ. ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಗಣಕಪರಿಷತ್ತಿನ ಸಹಯೋಗದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಪ್ರದರ್ಶನ ಏರ್ಪಡಿಸಿದೆ ಎಂದು ಬರಗೂರು ರಾಮಚಂದ್ರಪ್ಪ ಕನ್ನಡ.ಇಂಡಿಯಾಇನ್‌ಫೋ.ಕಾಂಗೆ ತಿಳಿಸಿದ್ದಾರೆ.

ವಿಂಡೋಸ್‌ನಲ್ಲಿ ಕನ್ನಡದ ಜತೆಗೆ ತೆಲುಗು, ತಮಿಳು, ಬಂಗಾಳಿ, ಮಲೆಯಾಳಂ, ಹಿಂದಿ, ಸಂಸ್ಕೃತ, ಮರಾಠಿ, ಗುಜರಾತಿ, ಗುರುಮುಖಿ ಮತ್ತು ಕೊಂಕಣಿ ಕೂಡ ಸೇರಿವೆ.

ವಿಶ್ವಾದ್ಯಂತ ಕನ್ನಡ ಕಹಳೆ : ಕನ್ನಡ ತಂತ್ರಾಂವನ್ನು ಸಮಾನ ಲಿಪಿಯಡಿ ತಂದು ಏಕ ರೂಪದ ತಂತ್ರಾಂಶ ರೂಪಿಸಲು ಸರಕಾರ ಸೂಚಿಸಿದ್ದ ಗುಣಮಟ್ಟವನ್ನು ಬರಹ ತಂತ್ರಾಂಶವನ್ನು ಕನ್ನಡಿಗರಿಗೆ ತಲುಪಿಸಿದ ಶೇಷಾದ್ರಿ ವಾಸು ಅವರು, ತಮ್ಮ ಇತ್ತೀಚಿನ ತಂತ್ರಾಂಶ ಬರಹ 4.0ಯಲ್ಲಿ ಸಾಧಿಸಿದ್ದಾರೆ.

ಈಗ ಬರಹ ಮತ್ತು ಕಲಿತಾ ತಂತ್ರಾಂಶಗಳನ್ನು ಏಕಕಾಲದಲ್ಲಿ ಬಳಸುವ ಅವಕಾಶ ದೊರಕಲಿದೆ. ಅಂದರೆ, ಫಾಂಟ್‌ ಬದಲಿಸಬೇಕಾದರೆ, ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವ ಅಗತ್ಯ ಇಲ್ಲ. ಈ ಸೌಲಭ್ಯ ಕನ್ನಡದ ಇತರೆ ಎಲ್ಲ ತಂತ್ರಾಂಗಳಿಗೂ ಅನ್ವಯಿಸಬೇಕಾಗಿದೆ. ಸುರಭಿ, ಶ್ರೀ ಲಿಪಿ, ಲೀಪ್‌ ಆಫಿಸ್‌, ಆಕೃತಿ, ಪ್ರಕಾಶಕ್‌, ಐಲಿಪ್‌ ಮೊದಲಾದವು ಈ ವ್ಯಾಪ್ತಿಯಾಳಗೆ ಸೇರಿದರೆ, ಕನ್ನಡ ವಿಶ್ವವನ್ನೇ ಗೆದ್ದಂತೆಯೇ ಎನ್ನುತ್ತಾರೆ ಗಣಕಪರಿಷತ್ತಿನ ಸಿ.ವಿ. ಶ್ರೀನಾಥ ಶಾಸ್ತ್ರೀ.

ವಿಶ್ವಕನ್ನಡ.ಕಾಂ ನ ಡಾ. ಪವನಜ ಅವರು, ವಿಂಡೋಸ್‌ ಎಕ್ಸ್‌.ಪಿ.ಗಾಗಿ ಸಿದ್ಧಪಡಿಸಿರುವ ಬೀಟಾ ವರ್ಷನ್‌ ಅನ್ನು ಶನಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದರ್ಶಿಸುವರು.

ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X