ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಪೇಟೆಯ ದೊಡ್ಡ ಗಣಪ

By Staff
|
Google Oneindia Kannada News

*ಟಿ. ಎಂ. ಸತೀಶ್‌

ಗಣೇಶನ ಮಹಿಮೆ, ಗಣೇಶನ ಮದುವೆ ಚಿತ್ರಗಳಲ್ಲೂ ಗೆಸ್ಟ್‌ ಅಪಿಯರೆನ್ಸ್‌ ಕೊಟ್ಟಿರುವ ಈ ಗಣಪ ಶತ ಚಿತ್ರ ನಟ. ಶತವೇನು, ಅರ್ಧ ಸಹಸ್ರ ಚಿತ್ರ ನಟ ಎಂದರೂ ಅಚ್ಚರಿಯಿಲ್ಲ. ಬಸವನಗುಡಿಯಲ್ಲಿರುವ ಬಸವಣ್ಣನ ಗುಡಿ ಬೀದಿ ಅರ್ಥಾತ್‌ ಬುಲ್‌ ಟೆಂಪಲ್‌ ರಸ್ತೆಯ ಮಗ್ಗುಲಿನಲ್ಲೇ ಇರುವ ದೊಡ್ಡ ದೇಗುಲದಲ್ಲಿ ಭಕ್ತರನ್ನು ಅನುಗ್ರಹಿಸಲು ನೆಲೆಸಿಹ ಈ ಗಣಪ ಸಾಮಾನ್ಯನಲ್ಲ. ಇವ ದೊಡ್ಡ ಗಣಪ.

ಬೆಂಗಳೂರು ನಗರದ ಪುರಾತನ ದೇವಾಲಯಗಳಲ್ಲಿ ಒಂದಾದ ದೊಡ್ಡ ಗಣಪನ ದೇಗುಲದಲ್ಲಿರುವ 8 ಅಡಿ ಎತ್ತರ ಹಾಗೂ 12 ಅಡಿ ಅಗಲವುಳ್ಳ (ಕುಳಿತಿರುವ) ಈ ಗಣಪನ ಅಂದವೇ ಅಂದ. ಆಸ್ತಿಕರನ್ನೂ - ನಾಸ್ತಿಕರನ್ನೂ ತನ್ನ ಸೊಬಗಿನಿಂದ ಆಕರ್ಷಿಸುವ ಈ ಗಣಪ, ಕನ್ನಡ, ತೆಮಿಳು, ತೆಲುಗು ಇಷ್ಟೇಕೆ ಹಿಂದಿ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾನೆ.

ಬ್ಯೂಗಲ್‌ರಾಕ್‌ ಉದ್ಯಾನಕ್ಕೆ ಹೊಂದಿಕೊಂಡಿರುವ ಪುಟ್ಟ ಬೆಟ್ಟಗಳ ಅಂಚಿನ ಮುಖ್ಯರಸ್ತೆಯಲ್ಲಿ ಇರುವ ದೊಡ್ಡ ಗಣೇಶನನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ. ಈ ಗಣೇಶನನ್ನು ಉದ್ಭವ ಮೂರ್ತಿ ಎಂದೂ ಹಿರಿಯರು ಹೇಳುತ್ತಾರೆ. ಸುಮಾರು 400ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಯಲಹಂಕ ಭೂಪಾಲನಾದ ಮೊದಲನೇ ಕೆಂಪೇಗೌಡ ಕಟ್ಟಿಸಿದ್ದು. ಇದಕ್ಕೆ ಶಾಸನಗಳ ಬೆಂಬಲವೂ ದೊರಕುತ್ತದೆ. 1973ಕ್ಕೆ ಮೊದಲು ಇಲ್ಲಿ ಕೇವಲ ಹೆಂಚಿನ ಒಪ್ಪಾರೆ ಮಾತ್ರ ಇತ್ತು. 73ರಲ್ಲಿ ಎಸ್‌.ಎಂ. ಕಣ್ಣಪ್ಪನವರು ದೇವಾಲಯಕ್ಕೆ ಒಂದು ಆವರಣ ಕಟ್ಟಿಸಿದರು.

7-4-1973ರಲ್ಲಿ ಶ್ರೀ ಶ್ರೀ ಶ್ರೀ ಶೃಂಗೇರಿ ಜಗದ್ಗುರುಗಳಾದ ಶ್ರೀಮದಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳ ಅಮೃತ ಹಸ್ತದಿಂದ ದೇವಾಲಯದ ಜೀರ್ಣೋದ್ಧಾರದ ಶಂಕುಸ್ಥಾಪನೆ ಮಹೋತ್ಸವ ಜರುಗಿತ್ತು. ಅಂದು ಸಂಸದರಾಗಿದ್ದ ಟಿ.ಆರ್‌. ಶಾಮಣ್ಣನವರು ಹಾಗೂ ವಿ.ಎಸ್‌. ಕೃಷ್ಣಯ್ಯರ್‌ ಮೊದಲಾದವರು ಸರಕಾರ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ದೇಗುಲದ ಮಹಾದ್ವಾರ ಹಾಗೂ ರಾಜಗೋಪುರ ನಿರ್ಮಾಣ ಕಾರ್ಯ ಕೈಗೊಂಡರು. ಈ ಕಾರ್ಯ 1988ರಲ್ಲಿ ಪೂರ್ಣಗೊಂಡಿತು.

ಪ್ರವಾಸೋದ್ಯಮ ಇಲಾಖೆ ಬೆಂಗಳೂರು ದರ್ಶನದಲ್ಲಿ ದೊಡ್ಡ ಗಣಪನ ದೇಗುಲವನ್ನೂ ಒಂದು ಪ್ರೇಕ್ಷಣೀಯ ಸ್ಥಳ ಎಂದು ಪರಿಗಣಿಸಿದೆ. ದಿನವೂ ಇಲ್ಲಿಗೆ ನೂರಾರು ಭಕ್ತರು ಬರುತ್ತಾರೆ. ದೊಡ್ಡ ಗಣಪ, ಇಲ್ಲಿ ನಿತ್ಯ ಪೂಜಿತ, ಭಕ್ತ ವಂದಿತ. ಹೊಸ ವಾಹನ ಕೊಂಡವರು ತಮ್ಮ ವಾಹನದ ಪೂಜೆಯನ್ನು ಮಾಡಿಸಲು ಇಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ಶಾಲೆ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ತಮ್ಮ ಪ್ರವೇಶ ಪತ್ರಗಳನ್ನು ಗಣೇಶನ ಪದಕಮಲದಲ್ಲಿಟ್ಟು ಪೂಜಿಸಿ, ತಮಗೆ ಜಯ ನೀಡುವಂತೆ ಪ್ರಾರ್ಥಿಸುತ್ತಾರೆ. ಹೇಳಿ ಕೇಳಿ ಗಣಪ ವಿದ್ಯಾಧಿದೇವನಲ್ಲವೆ.

ಬಗೆಬಗೆಯ ಅಲಂಕಾರಗಳಲ್ಲಿ ಕಂಗೊಳಿಸುವ : ಹೆಬ್ಬಂಡೆಯಲ್ಲಿ ಕೆತ್ತಲಾಗಿರುವ ಈ ದೊಡ್ಡ ಗಣಪನಿಗೆ ನೂರಾರು ಬಗೆಯ ಅಲಂಕಾರಗಳನ್ನು ಮಾಡುತ್ತಾರೆ. ಶಾಖಾಂಬರಿ ಅಲಂಕಾರ (ತರಕಾರಿಗಳ ಅಲಂಕಾರ), ಅರಿಶಿನ, ಕುಂಕುಮದ ಅಲಂಕಾರ, ಫಲಪುಷ್ಪಗಳ ಅಲಂಕಾರ, ನಿಂಬೇಹಣ್ಣಿನ ಅಲಂಕಾರ, ವಡೆಸರದ ಅಲಂಕಾರ, ಕಡುಬಿನ ಅಲಂಕಾರ.... ಹೀಗೆ ನೂರಾರು ಬಗೆಯಲ್ಲಿ ಈ ಬೃಹತ್‌ ಗಣಪನ ಆರಾಧಿಸುವವರುಂಟು. ಆದರೆ, ನವನೀತ ಅಂದರೆ ಬೆಣ್ಣೆಯ ಅಲಂಕಾರದಲ್ಲಿ ಈ ಗಣಪನ ನೋಡಲು ಎರಡು ಕಣ್ಣು ಸಾಲದು.

ಈ ಗಣಪನನನ್ನು ಸಂಪೂರ್ಣವಾಗಿ ಬೆಣ್ಣೆಯಲ್ಲಿ ಅಲಂಕರಿಸಲು ಒಂದೆರಡು ಕೆ.ಜಿ. ಬೆಣ್ಣೆ ಸಾಲದು. ಸರಿಯಾಗಿ ಒಂದು ಟನ್‌ ಬೆಣ್ಣೆ ಬೇಕು. ಬೆಣ್ಣೆ ಅಲಂಕಾರ ಒಂದು ಬಾರಿ ಇದ್ದಂತೆ ಮತ್ತೊಂದು ಬಾರಿ ಇರುವುದಿಲ್ಲ ಎನ್ನುವುದು ಇಲ್ಲಿಯ ವಿಶೇಷ. ಪ್ರತಿಬಾರಿಯ ಅಲಂಕಾರದಲ್ಲೂ ವೈವಿಧ್ಯ್ಯತೆಯನ್ನು ಕಾಣಬಹುದು. ಅಂದಹಾಗೆ ಬೆಣ್ಣೆ ಅಲಂಕಾರ ಮಾಡಿಸಲು ಹತ್ತು ಸಾವಿರ ರುಪಾಯಿಗಳು ಬೇಕು. ಬೆಣ್ಣೆ ಅಲಂಕಾರ ಮಾಡಿಸಲು ಮುಜರಾಯಿ ಇಲಾಖೆಗೇ1501 ರುಪಾಯಿಗಳನ್ನು ಪಾವತಿಸಬೇಕು. ಇನ್ನುಳಿದದ್ದು ಬೆಣ್ಣೆ ಕೊಳ್ಳಲು.

ದೊಡ್ಡ ಗಣಪನನ್ನು ಬೆಣ್ಣೆಯಿಂದ ಅಲಂಕರಿಸಲು ಐವರು ಪುರೋಹಿತರಿಗೆ ಸುಮಾರು 6-7 ಗಂಟೆಗಳೇ ಹಿಡಿಯುತ್ತದೆ ಎನ್ನುತ್ತಾರೆ ದೇವಾಲಯದ ಪ್ರಧಾನ ಅರ್ಚಕರಾದ ವಿ. ಗುರುರಾಜ್‌. ಮುಜರಾಯಿ ಇಲಾಖೆಯ ಆಡಳಿತದಲ್ಲಿರುವ ಈ ದೇಗುಲಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ದೊಡ್ಡ ಗಣಪನ ಮಹಿಮೆಯಲ್ಲದೆ ಬೇರೇನೂ ಅಲ್ಲ.

ಈ ಗಣಪನ ನೋಡಿದವರು ಭಕ್ತಿ ಭಾವದಿಂದದಷ್ಟೇ ಅಲ್ಲದೆ, ಆತನ ಸೊಬಗಿಗೂ ಮಾರು ಹೋಗುತ್ತಾರೆ. ಗಣಪ ಆನೆಯ ಮುಖ, ದೊಡ್ಡ ದೇಹ, ಸೊಂಟದಲ್ಲೊಂದು ನಾಗರಹಾವು, ವಕ್ರ ತುಂಡ ಹೊಂದಿದ್ದರೂ ಕೂಡ ಮುದ್ದಾಗಿ ಕಾಣುತ್ತಾನೆ. ಗಣಪನನ್ನು ಬರೆಯುವಷ್ಟು ಸುಲಭವಾಗಿ ಮತ್ತಾವ ದೇವರ ಚಿತ್ರವನ್ನೂ ಬರೆಯಲು ಸಾಧ್ಯವಿಲ್ಲ. ಯಾವುದೇ ಅಲಂಕಾರವಾದರೂ ಗಣಪನಿಗೆ ಸುಂದರವಾಗಿ ಒಪ್ಪುತ್ತದೆ. ಗಣಪನಿಗಿಂತಲೂ ಮುದ್ದಾದ, ಚೆಲುವಾದ ದೇವರು ಮತ್ತೊಂದಿಲ್ಲ. ಈಗ ದೊಡ್ಡ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೊಡ್ಡ ಗಣಪ ಬೆಣ್ಣೆ ಗಣಪನೇ ಆಗಿ ಹೋಗಿದ್ದಾನೆ.

ಬುಲ್‌ ಟೆಂಪಲ್‌ : Nandi of bull temple ಮುಖ್ಯರಸ್ತೆಯ ಮಗ್ಗುಲಲ್ಲೇ ಇರುವ ಗಣಪನಿಗೆ ಮೊದಲು ಪೂಜೆ ಸಲ್ಲಿಸಿ, ಪಕ್ಕದಲ್ಲೇ 40-50 ಮೆಟ್ಟಿಲು ಏರಿದರೆ, ಕೆಂಪೇಗೌಡರು ಕಟ್ಟಿಸಿದ ದೊಡ್ಡ ಬಸವಣ್ಣನ ಗುಡಿ ನೋಡಬಹುದು. ದ್ರಾವಿಡ ವಾಸ್ತುಶಿಲ್ಪ ಹಾಗೂ ಶಿಲ್ಪಕಲೆಯಿಂದ ಸಮೃದ್ಧವಾದ ಈ ದೇಗುಲದಲ್ಲಿ ಏಕಶಿಲೆಯಲ್ಲಿ ಕಡೆದ 4.6 ಮೀಟರ್‌ ಎತ್ತರ ಹಾಗೂ 6.1 ಮೀಟರ್‌ ಉದ್ದವಿರುವ ಬಸವ (ನಂದಿ)ನ ವಿಗ್ರಹವಿದೆ. ಪಕ್ಕದಲ್ಲೇ ಬೇಡರ ಕಣ್ಣಪ್ಪನ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ದೇವಾಲಯ ಹಾಗೂ ಎದರುಗಡೆ ಶ್ರೀರಾಘವೇಂದ್ರ ಸ್ವಾಮಿಗಳ ಮಠವೂ ಇದೆ.

ಸಾಂಸ್ಕೃತಿಕ ಕಾರ್ಯಕ್ರಮ : 1969ರಲ್ಲಿ ದೊಡ್ಡ ಗಣಪತಿ ದೇವಸ್ಥಾನದ ಆಶ್ರಯದಲ್ಲಿ ದಿವಂಗತ ಕೆ. ಸಂಪದ್ಗಿರಿರಾಯರು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಸ್ಥಾಪಿಸಿ ಗಣೇಶೋತ್ಸವ ಕಾರ್ಯಕ್ರಮ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಸತತವಾಗಿ 33 ವರ್ಷಗಳಿಂದಲೂ ಗಣೇಶೋತ್ಸವ ಸಂದರ್ಭದಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿವಿಧ ಕ್ಷೇತ್ರಗಳ ಗಣ್ಯರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X