ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಸ್ವಾತಂತ್ರ್ಯೋತ್ಸವ : ಬರದ ನಡುವೆ ಹಾರಾಡಿದ ಬಾವುಟ

By Staff
|
Google Oneindia Kannada News

ಬೆಂಗಳೂರು : ಮಂಗಳೂರು, ಧಾರವಾಡ, ಶಿವಮೊಗ್ಗ, ಬಳ್ಳಾರಿ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸ್ವಾತಂತ್ರ್ಯೋತ್ಸವವನ್ನು ವೈಭವದಿಂದ ಆಚರಿಸಿದ ವರದಿಗಳು ನಮ್ಮ ಕಚೇರಿ ತಲುಪಿವೆ.

ಬೆಂಗಳೂರು ವರದಿ :
ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪ್ರಕಟಿಸಿದ್ದಾರೆ. ಅವರು ಬುಧವಾರ ಬೆಳಗ್ಗೆ ನಗರದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡುತ್ತಿದ್ದರು.

ಕಾಂಗ್ರೆಸ್‌,ಬಿಜೆಪಿ, ಜಾ.ಜನತಾದಳ ಕಚೇರಿಗಳಲ್ಲಿ ಆಚರಣೆ
ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಅಲ್ಲಂ ವೀರಭದ್ರಪ್ಪ ರಾಷ್ಟ್ರ ಧ್ವಜಾರೋಹಣ ಮಾಡಿದರು. ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವಲ್ಲಿ ತಮ್ಮ ಪಕ್ಷದ ಸರ್ಕಾರ ಯಶಸ್ಸು ಕಂಡಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ಜಾತ್ಯತೀತ ಜನತಾದಳದ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಎಸ್‌.ಸಿದ್ಧರಾಮಯ್ಯ ಧ್ವಜಾರೋಹಣ ಮಾಡಿದರೆ, ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಪಕ್ಷದ ಹಿರಿಯ ಮುಖಂಡ ಬಿ.ಎಸ್‌.ಯಡಿಯೂರಪ್ಪ ಧ್ವಜಾರೋಹಣ ಮಾಡಿದರು.

ಮಂಗಳೂರಿನಲ್ಲಿ ಮಳೆಯಲ್ಲಿ ಸ್ವಾತಂತ್ರ ್ಯ ಸಂಭ್ರಮ

ಬುಧವಾರ ಬೆಳಗ್ಗೆಯಿಂದಲೇ ಕಾಣಿಸಿಕೊಂಡ ಮಳೆ ಸ್ವಾತಂತ್ರ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬಿರುಸಾದರೂ, ಜನರ ಉತ್ಸಾಹ ಕುಗ್ಗಲಿಲ್ಲ . ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ರಾಷ್ಟ್ರಧ್ವಜ ಆರೋಹಣ ಮಾಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಡೆದ ಕವಾಯತಿನಲ್ಲಿ ಜಿಲ್ಲೆಯ 17 ತಂಡಗಳು ಭಾಗವಹಿಸಿದ್ದವು.

ಧಾರವಾಡದಲ್ಲಿ ಮಳೆಯ ನಡುವೆ ಹಾರಿದ ಬಾವುಟ

ನಗರದ ಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿದ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಿಂಡಸಗೇರಿ ಧ್ವಜಾರೋಹಣ ಮಾಡಿದರು. ಧಾರವಾಡದಲ್ಲಿ ಬುಧವಾರ ಬೆಳಗ್ಗೆಯಿಂದ ಮಳೆ ಕಾಣಿಸಿಕೊಂಡಿದ್ದರೂ, ಆಚರಣೆಗೆ ಯಾವುದೇ ಅಡ್ಡಿಯಾಗಿಲ್ಲ .

ಶಿವಮೊಗ್ಗದಲ್ಲಿ ಪ್ರತಿಭಟನೆ, ಮಹಿಳೆಯರ ಬಂಧನ

ಪಟ್ಟಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಧ್ವಜಾರೋಹಣ ಮಾಡಿದರು. ಇದೇ ಸಂದರ್ಭದಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರದ ನಿರ್ಧಾರವನ್ನು ಪ್ರತಿಭಟಿಸಿ ಪ್ರದರ್ಶನ ನಡೆಸಿದ ಮಹಿಳೆಯರನ್ನು ಪೊಲೀಸರು ಬಂಧಿಸಿದರು.

ಬಳ್ಳಾರಿ: 7 ಖೈದಿಗಳಿಗೆ ಸ್ವಾತಂತ್ರ್ಯ!

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಬಳ್ಳಾರಿ ಜೈಲಿನಲ್ಲಿ ಸೆರೆಮನೆ ವಾಸ ಅನುಭವಿಸುತ್ತಿದ್ದ 7 ಖೈದಿಗಳನ್ನು ಬಿಡುಗಡೆ ಮಾಡಲಾಯಿತು. ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕೆಲವು ಖೈದಿಗಳನ್ನು ಬಿಡುಗಡೆ ಮಾಡುವುದು ಸಂಪ್ರದಾಯ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X