ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀತ ಪ್ರಕರಣ ವರದಿ ಮಾಡದ ಗ್ರಾಮ ಪಂಚಾಯಿತಿಗಳ ವಿಸರ್ಜನೆ

By Staff
|
Google Oneindia Kannada News

ಬೆಂಗಳೂರು : ತಮ್ಮ ಆಡಳಿತ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಜೀತ ಪದ್ಧತಿ ಪ್ರಕರಣಗಳನ್ನು ಜಿಲ್ಲಾಧಿಕಾರಿ ಅಥವಾ ಈ ಕೆಲಸಕ್ಕಾಗಿ ನಿಯುಕ್ತಗೊಳಿಸಿದವರಿಗೆ ವರದಿ ಮಾಡದಿರುವ ಗ್ರಾಮ ಪಂಚಾಯಿತಿಗಳನ್ನು ವಿಸರ್ಜಿಸುವ ಅವಕಾಶ ಕಲ್ಪಿಸಿ, ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆಗೆ ತಂದಿರುವ ಮೂರನೇ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಧ್ವನಿಮತದ ಅಂಗೀಕಾರ ನೀಡಿತು.

ಗ್ರಾಮೀಣಾಭಿವೃದ್ಧಿ ಸಹಾಯಕ ಸಚಿವ ಎಂ.ದಿವಾಕರ ಬಾಬು ಶನಿವಾರ ಮಂಡಿಸಿದ ಮಸೂದೆಯ ಕುರಿತು ವ್ಯಾಪಕ ಚರ್ಚೆಗಳಾದವು. ನಂತರ ಇದಕ್ಕೆ ಅಂಗೀಕಾರ ದೊರೆಯಿತು.

ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆ 2000 (3ನೇ ತಿದ್ದುಪಡಿ) ದ ಪ್ರಕಾರ, ಪ್ರತಿ ಗ್ರಾಮ ಪಂಚಾಯಿತಿ ತನ್ನ ಆಡಳಿತ ವ್ಯಾಪ್ತಿಯ ಜೀತ ಪ್ರಕರಣಗಳನ್ನು ಜಿಲ್ಲಾಧಿಕಾರಿ ಅಥವಾ ಈ ಕೆಲಸಕ್ಕಾಗಿ ನಿಯುಕ್ತಗೊಳಿಸಿದವರಿಗೆ ಕಡ್ಡಾಯವಾಗಿ ವರದಿ ಮಾಡಬೇಕು. ಈ ನಿಟ್ಟಿನಲ್ಲಿ ವಿಫಲವಾದಲ್ಲಿ 268ನೇ ಪ್ರಕರಣದ ಅಡಿಯಲ್ಲಿ ಗ್ರಾಮ ಪಂಚಾಯಿತಿ ಕರ್ತವ್ಯ ಚ್ಯುತಿ ಎಂದು ಪರಿಗಣಿಸಲಾಗುವುದು. ಹೀಗಾದಾಗ ಅಂಥಾ ಗ್ರಾಮ ಪಂಚಾಯಿತಿಗಳನ್ನು ವಿಸರ್ಜಿಸಬಹುದು.

ರಾಜಕೀಯ ಪುಡಾರಿಗಳ ಕುಮ್ಮಕ್ಕು : ಈ ವಿಧೇಯಕ ಕುರಿತ ಚರ್ಚೆ ಪ್ರಾರಂಭಿಸಿದ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ಹಂಗರಹಳ್ಳಿ ಜೀತ ಪ್ರಕರಣವನ್ನು ಉದಾಹರಿಸಿ ಇಂಥಾ ಇನ್ನೂ ಅದೆಷ್ಟು ಪ್ರಕರಣಗಳು ಹಳ್ಳಿಗಳಲ್ಲಿ ನಡೆಯುತ್ತಿವೆಯೋ? ರಾಜಕೀಯ ಪುಡಾರಿಗಳ ಕುಮ್ಮಕ್ಕಿನಿಂದ ಅವುಗಳ ಪತ್ತೆ ಸಾಧ್ಯವಾಗಿಲ್ಲ ಎಂದು ಹೇಳಿದರು.

ಈ ಮಸೂದೆ ರಾಜಕೀಯ ಕಲಹದ ಅಸ್ತ್ರ : ಸಂಯುಕ್ತ ಜನತಾದಳದ ಮುಖಂಡ ಪಿ.ಜಿ.ಆರ್‌. ಸಿಂಧ್ಯ ಹಾಗೂ ಜಾತ್ಯತೀತ ಜನತಾ ದಳದ ಕೃಷ್ಣಮೂರ್ತಿ ಮಸೂದೆಯನ್ನು ವಿರೋಧಿಸಿದರು. ಈ ವಿಧೇಯಕ ಸ್ಥಳೀಯ ರಾಜಕಾರಣಿಗಳ ಜಗಳದ ಅಸ್ತ್ರವಾಗುತ್ತದೆ. ರಾಜಕೀಯ ವೈಷಮ್ಯ ಇರುವವರು, ತಾವು ವಿರೋಧಿಸುವವರ ವಿರುದ್ಧ ವಿನಾ ಕಾರಣ ಜೀತದಾರೋಪ ಹೊರಿಸುವ ಸಂಭವವೂ ಇಲ್ಲದಿಲ್ಲ. ಹೀಗಾಗಿ ಜೀತ ಪ್ರಕರಣಗಳ ಮೊದಲ ಪಟ್ಟಿಯೇ ಅಂತಿಮವಾಗಬಾರದು ಎಂದು ಸಿಂಧ್ಯ ಹೇಳಿದರು. ಕೃಷ್ಣಮೂರ್ತಿ ಇದನ್ನು ಸಮರ್ಥಿಸಿದರು.

ಜೀತ ಪತ್ತೆಗೆ ಪಂಚಾಯಿತಿಯೇ ಸರಿ : ಸಚಿವ ಕಾಗೋಡು ತಿಮ್ಮಪ್ಪ ಈ ಮಸೂದೆಯನ್ನು ಸಮರ್ಥಿಸಿದರು. ಹಳ್ಳಿಗಳಲ್ಲಿ ನಡೆಯುತ್ತಿರುವ ಜೀತ ಪ್ರಕರಣಗಳ ಪತ್ತೆ ಮಾಡುವುದು ಗ್ರಾಮ ಪಂಚಾಯಿತಿಗಳಿಗೆ ಸುಲಭದ ಕೆಲಸ ಎಂದರು. ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ 1976ರಲ್ಲಿ ಜಾರಿಗೆ ಬಂತು. ಗ್ರಾಮ ಪಂಚಾಯಿತಿಗಳು ಸ್ಥಳೀಯ ಸಮಾಜದ ಸ್ಥಿತಿ- ಗತಿಗಳನ್ನು ಚೆನ್ನಾಗಿ ಬಲ್ಲವಾದ್ದರಿಂದ ಜೀತ ಪ್ರಕರಣಗಳ ಪತ್ತೆ ಮಾಡುವುದು ಅವುಗಳಿಗೆ ಸುಲಭ. ಇದು ರಾಜಕೀಯ ವೈಷಮ್ಯಕ್ಕೆ ಕಾರಣವಾಗುವುದಿಲ್ಲ. ಗ್ರಾಮ ಪಂಚಾಯಿತಿಗಳನ್ನು ವಿಸರ್ಜಿಸಲೂ ಕಟ್ಟುನಿಟ್ಟು ನಿಯಮಗಳಿವೆ. ಇದು ಚಿಟಿಕೆ ಹೊಡೆಯುವಷ್ಟರಲ್ಲಿ ಆಗುವ ಕೆಲಸವಲ್ಲ ಎಂದು ದಿವಾಕರ ಬಾಬು ಸ್ಪಷ್ಟಪಡಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X