Get Updates
Get notified of breaking news, exclusive insights, and must-see stories!

ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಈಗ ಎನ್‌.ಡಿ.ಎ. ಪ್ಯಾಕೇಜ್‌ ಸರದಿ

ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರಕಾರ ಅಗತ್ಯ ಹಣಕಾಸಿನ ನೆರವು ನೀಡಲಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಶುಕ್ರವಾರ ಇಲ್ಲಿ ತಿಳಿಸಿದರು. ಎರಡು ದಿನಗಳ ಅಧಿಕೃತ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಅವರು, ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಬೆಂಗಳೂರಿನಿಂದ ಹಂಪಿ ಎಕ್ಸ್‌ಪ್ರೆಸ್‌ನಲ್ಲಿ ಬೆಳಗ್ಗೆ 6.10ಕ್ಕೆ ಬಳ್ಳಾರಿಗೆ ಬಂದಿಳಿದ ಸುಷ್ಮಾ ಅವರನ್ನು ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ರೈಲ್ವೆ ನಿಲ್ದಾಣದಲ್ಲಿ ಅದ್ಧೂರಿಯಿಂದ ಸ್ವಾಗತಿಸಿದರು. ಭಾರತೀಯ ಜನತಾಪಕ್ಷದ ಕಾರ್ಯಕರ್ತರು ಮೆರವಣಿಗೆಯ ರೀತಿಯಲ್ಲಿ ಸಚಿವೆಯವರನ್ನು ಅತಿಥಿಗೃಹಕ್ಕೆ ಕರೆದೊಯ್ದರು.

ಆಗ್ರಾ ಶೃಂಗಸಭೆ : ಅತಿಥಿಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತ-ಪಾಕಿಸ್ತಾನಗಳು ಕೇವಲ ಜಂಟಿ ಘೋಷಣೆ /ಹೇಳಿಕೆ ನೀಡಲಿಲ್ಲ ಎಂದ ಮಾತ್ರಕ್ಕೆ ಆಗ್ರಾಶೃಂಗಸಭೆ ವಿಫಲವಾಯಿತು ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು.

ಈ ಎರಡು ರಾಷ್ಟ್ರಗಳ ನಾಯಕರು 6 ಗಂಟೆಗೂ ಹೆಚ್ಚು ಕಾಲ ಕುಳಿತು - ಕಲೆತು ಮಾತನಾಡಿದ್ದೇ ಒಂದು ಸಾಧನೆ ಎಂದರು. ತಾವೂ ಸೇರಿದಂತೆ, ವಿದೇಶಾಂಗ ವ್ಯವಹಾರಗಳ ಖಾತೆ ಸಚಿವರು ಹಾಗೂ ಎಲ್ಲರೂ ಕಾಶ್ಮೀರ ಬಗೆಗಿನ ಭಾರತದ ಸ್ಪಷ್ಟ ನಿಲುವಿನ ವ್ಯಾಪ್ತಿಯಲ್ಲೇ ಪ್ರತಿಕ್ರಿಯಿಸಿದ್ದಾಗಿ ಸ್ಪಷ್ಟಪಡಿಸಿದರು.

ಎನ್‌.ಡಿ.ಎ. ಪ್ಯಾಕೇಜ್‌ : ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರಕಾರ ಅಗತ್ಯ ಹಣಕಾಸು ನೆರವು ನೀಡಲಿದೆ ಎಂದು ಸುಷ್ಮಾ ಪ್ರಕಟಿಸಿದರು. ಪತ್ರಕರ್ತರೊಬ್ಬರು, ಏನು ಬಳ್ಳಾರಿ ಅಭಿವೃದ್ಧಿಗೆ ನೀವೂ ಸೋನಿಯಾ ಪ್ಯಾಕೇಜ್‌ ಮಾದರಿಯಲ್ಲಿ ಸುಷ್ಮಾ ಪ್ಯಾಕೇಜ್‌ ಪ್ರಕಟಿಸುತ್ತೀರಾ ಎಂದು ಪ್ರಶ್ನಿಸಿದಾಗ ‘ಕೇಂದ್ರ ಸರಕಾರ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುತ್ತದೆ. ಅದು ಸೂಕ್ತ ರೀತಿಯಲ್ಲಿ ಸದ್ಬಳಕೆ ಆಗುವಂತೆ ನಾವು ನೋಡಿಕೊಳ್ಳುತ್ತೇವೆ’ ಎಂದು ಸುಷ್ಮಾ ಉತ್ತರಿಸಿದರು.

ಇದು ಎನ್‌.ಡಿ.ಎ. ಪ್ಯಾಕೇಜ್‌ ಆಗಿರುತ್ತದೆಯೇ ವಿನಾ ಸುಷ್ಮಾ ಪ್ಯಾಕೇಜ್‌ ಆಗುವುದಿಲ್ಲ ಎಂದರು. ಭೀಕರ ಬರದಿಂದ ತತ್ತರಿಸುತ್ತಿರುವ ಕರ್ನಾಟಕ್ಕೆ ಅಗತ್ಯ ಇರುವಷ್ಟು ಕೂಲಿಗಾಗಿ ಕಾಳು ನೀಡಲು ಕೇಂದ್ರ ಸಿದ್ಧವಿದೆ. ಈ ವಿಷಯವನ್ನು ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಅವರೇ ತಿಳಿಸಿದ್ದಾರೆ ಎಂದರು.

ಸಾಮೂಹಿಕ ವಿವಾಹ : ನಿಗದಿತ ಕಾರ್ಯಕ್ರಮದಂತೆ ಇಲ್ಲಿನ ಬಿಡಿಎಎ ಮೈದಾನದಲ್ಲಿ ಎನ್ನೋಬಲ್‌ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಬಳ್ಳಾರಿ ಬಿ.ಜೆ.ಪಿ. ಘಟಕ ಏರ್ಪಡಿಸಿದ್ದ 151 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡರು. ವಿವಾಹವೆಂಬುದು ಹೆಣ್ಣಿನ ಬದುಕಿನಲ್ಲಿ ಮರೆಯಲಾಗದ ಘಟ್ಟ. ಪವಿತ್ರ ಬಂಧನ. ಗಂಡನಿಗೆ ತಕ್ಕ ಹಾಗೂ ಆದರ್ಶ ಪತ್ನಿಯಾಗಿ ಮತ್ತು ಅತ್ತೆಗೆ ತಕ್ಕ ಸೊಸೆಯಾಗಿ ಬಾಳುವಂತೆ ಕರೆ ನೀಡಿದರು.

ವರದಕ್ಷಿಣೆ ಕಿರುಕುಳ ತಪ್ಪಿಸಲು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸಾಮೂಹಿಕ ವಿವಾಹಗಳು ನಡೆಯಬೇಕು ಎಂದರು. ಆದರ್ಶ ದಂಪತಿಗಳಾಗಿ ಬಾಳಿ ಎಂದು ನವವಧೂವರರನ್ನು ಆಶೀರ್ವದಿಸಿದರು.

ವರಮಹಾಲಕ್ಷ್ಮೀ ಪೂಜೆ : ಪ್ರತಿವರ್ಷ ಬಳ್ಳಾರಿಯಲ್ಲೇ ವರಮಹಾಲಕ್ಷ್ಮೀ ಪೂಜೆ ನೆರವೇರಿಸುವುದಾಗಿ ಹೇಳಿದ್ದ ಸುಷ್ಮಾ ಅವರು, ಈ ವರ್ಷವೂ ಇಲ್ಲಿನ ಪ್ರಖ್ಯಾತ ವೈದ್ಯ ಡಾ. ಬಿ.ಕೆ. ಶ್ರೀನಿವಾಸ ಮೂರ್ತಿ ಅವರ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ಮಾಡಿದರು. ಕಳೆದ ವರ್ಷ ಸಹ ಸುಷ್ಮಾ ಅವರು, ಡಾ. ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿಯೇ ವರಮಹಾಲಕ್ಷ್ಮೀ ಪೂಜೆ ಮಾಡಿದ್ದರು.

ಸ್ತ್ರೀಶಕ್ತಿ :ಆನಂತರ ಜೋಳದರಾಶಿ ದೊಡ್ಡನಗೌಡರ ರಂಗಮಂದಿರದಲ್ಲಿ ಮಹಿಳಾ ಸಶಕ್ತೀಕರಣ ವರ್ಷಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಲಿಂಗ ತಾರತಮ್ಯ ನೀಗಿಸಲು ಬಾಲಕಿಯರ ಸಶಕ್ತೀಕರಣಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದರು.

ಗರ್ಭದಲ್ಲಿ ಇರುವುದು ಹೆಣ್ಣು ಭ್ರೂಣ ಎಂದು ತಿಳಿದೊಡನೆ ಗರ್ಭಪಾತ ಮಾಡಿಸುತ್ತಾರೆ. ಹೆಣ್ಣು ಭ್ರೂಣವನ್ನು ಯಾವುದೇ ಕಾರಣಕ್ಕೂ ಹತ್ಯೆ ಮಾಡುವುದಿಲ್ಲ ಎಂದು ಸಂಕಲ್ಪ ಮಾಡುವಂತೆ ಕರೆ ನೀಡಿದರು. ದೇಶದ ಜನಸಂಖ್ಯೆಯಲ್ಲಿ ಶೇ. 50ರಷ್ಟಿರುವ ಮಹಿಳೆಯರು ಸಬಲರಾಗಬೇಕು ಎಂದು ಅಭಿಪ್ರಾಯಪಟ್ಟರು.

ಪೌರ ಸನ್ಮಾನ : ಭ್ರಷ್ಟ ರಾಜಕಾರಣಕ್ಕೆ ಬಲಿಯಾಗದೆ ಜನತೆಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಚುನಾಯಿತ ಪ್ರತಿನಿಧಿಗಳು ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಹೇಳಿದ ಸುಷ್ಮಾ ಸ್ವರಾಜ್‌ ರಾಘವ ಕಲಾಮಂದಿರದಲ್ಲಿ ನಗರಸಭೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪೌರ ಸನ್ಮಾನ ಸ್ವೀಕರಿಸಿದರು. ಮತ್ತೊಮ್ಮೆ ಕನ್ನಡ ಭಾಷಣ ಮಾಡಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+