ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅಣುಶಕ್ತಿ ಪ್ರಗತಿಗೆ ಪಾಶ್ಚಾತ್ಯ ಶಕ್ತಿಗಳ ಅಡ್ಡಗಾಲು- ರಾಜಾರಾಮಣ್ಣ

By Staff
|
Google Oneindia Kannada News

ಮೈಸೂರು : ಭಾರತ ಅಣುಶಕ್ತಿ ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗಿದ್ದರೂ, ಪಾಶ್ಚಾತ್ಯ ಶಕ್ತಿಗಳು ಅಣು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರಗತಿಗೆ ಅಡ್ಡಗಾಲು ಹಾಕುತ್ತಿವೆ ಎಂದು ಹಿರಿಯ ವಿಜ್ಞಾನಿ ಹಾಗೂ ಸಂಸದ ಡಾ. ರಾಜಾರಾಮಣ್ಣ ಆರೋಪಿಸಿದ್ದಾರೆ.

ಅಭಿವೃದ್ಧಿ ಹೊಂದಿದ ದೇಶಗಳು ಅಣುಶಕ್ತಿ ಬಳಕೆಯ ಬಗ್ಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಉಪದೇಶ ನೀಡುತ್ತಿರುವುದು ತಮಾಷೆಯಾಗಿದೆ ಎಂದು ರಾಜಾರಾಮಣ್ಣ ಜಗತ್ತಿನ ಶಕ್ತಿಶಾಲಿ ದೇಶಗಳನ್ನು ಗೇಲಿ ಮಾಡಿದರು. ಭಾರತ ಅಣುಶಕ್ತಿಯನ್ನು ಸದಾ ಶಾಂತಿಯುತ ಉದ್ದೇಶಗಳಿಗಾಗಿ ಮಾತ್ರ ಬಳಸುತ್ತಿದೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ .

ಮೈಸೂರು ವಿಶ್ವ ವಿದ್ಯಾನಿಲಯದ ಕಾರ್ಯಕ್ರಮವೊಂದರಲ್ಲಿ ‘ಭವಿತವ್ಯದಲ್ಲಿ ಅಣುಶಕ್ತಿ ’ ಎನ್ನುವ ವಿಷಯದ ಬಗ್ಗೆ ಶುಕ್ರವಾರ ಉಪನ್ಯಾಸ ನೀಡುತ್ತಿದ್ದ ಅವರು, ಪ್ರಸ್ತುತ ಅಣುಶಕ್ತಿಯಲ್ಲಿ ಭಾರತ ಸ್ವಾವಲಂಬಿಯಾಗಿದ್ದು , ವಿದ್ಯುತ್‌ ಉತ್ಪಾದನೆಯಲ್ಲಿ ಅಣುಶಕ್ತಿಯನ್ನು ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಅಣುಶಕ್ತಿಯಿಂದ ವಿದ್ಯುತ್‌ ಉತ್ಪಾದಿಸುವ ಮೂಲಕ ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆಯನ್ನು ಪೂರೈಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ದೇಶದಲ್ಲಿ ಕಾಯ್ದಿರಿಸಲಾಗಿರುವ 4 ಲಕ್ಷ ಟನ್‌ಗಳಷ್ಟು ಥೋರಿಯಂ ಸಂಪನ್ಮೂಲವನ್ನು ಶಕ್ತಿ ಉತ್ಪಾದನೆಗೆ ಬಳಸಿಕೊಳ್ಳಬಹುದಾಗಿದೆ. ಇದು ಅತ್ಯಂತ ಸುರಕ್ಷಿತ ವಿಧಾನವೂ ಹೌದು. ಡಾ. ಹೋಮಿ ಜಹಂಗೀರ್‌ ಭಾಭಾ ಅವರು 1943 ರಲ್ಲಿಯೇ ಅಣುಶಕ್ತಿಯ ಮೂಲಕ ವಿದ್ಯುತ್‌ ವಲಯದಲ್ಲಿ ಭಾರತ ಸ್ವಾವಲಂಬಿಯಾಗಬಹುದು ಎನ್ನುವ ವಿಷಯವನ್ನು ಪ್ರತಿಪಾದಿಸಿದ್ದರು ಎಂದು ರಾಜಾರಾಮಣ್ಣ ಹೇಳಿದರು.

ಫ್ರಾನ್ಸ್‌ ತನ್ನ ಬೇಡಿಕೆಯ ಪ್ರತಿಶತ 80 ರಷ್ಟು ವಿದ್ಯುತ್ತನ್ನು ಅಣುಶಕ್ತಿ ಬಳಕೆಯಿಂದ ಪೂರೈಸಿಕೊಳ್ಳುತ್ತಿದೆ. ಪ್ರಸ್ತುತ ಕೊರತೆ ಎದುರಿಸುತ್ತಿರುವ ಅಮೇರಿಕಾ ಕೂಡ ಫ್ರಾನ್ಸ್‌ ಹಾದಿಯಲ್ಲಿಯೇ ಇದೆ ಎಂದು ಹೇಳಿದ ಅವರು, ಭಾರತ ಸಮ್ಮಿಶ್ರ ವಿದ್ಯುತ್‌ ನೀತಿಯನ್ನು ಅಳವಡಿಸಿಕೊಳ್ಳಲು ಸೂಚಿಸಿದರು. ಈ ನೀತಿಯಡಿ ಜಲ, ಶಾಖೋತ್ಪನ್ನ ಹಾಗೂ ಅಣು ವಿದ್ಯುತ್‌ ಶಕ್ತಿ ಉತ್ಪಾದನೆಯಿಂದ, ಜನರಿಗೆ ಸುಲಭ ದರದಲ್ಲಿ ವಿದ್ಯುತ್‌ ಪೂರೈಸಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X