ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೌಚಾಲಯಗಳು ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮಾರಕವಾಗುವ ದಿನ ಬಂತೇ?

By Staff
|
Google Oneindia Kannada News

ಕನಕಪುರ : ಇಲ್ಲಿನ ನೆಲದಲ್ಲಿ 67 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು ಎನ್ನುವ ನೆನಪನ್ನು ಅಲ್ಲಿನ ನಿವಾಸಿಗಳೇ ಮರೆತಿದ್ದರೂ, ಊರಿನ ಶಾಲಾ ಮಕ್ಕಳು ಮಾತ್ರ ಸಮ್ಮೇಳನವನ್ನು ಹಾಗೂ ಅದರ ಸಂಘಟಕರನ್ನು ಆಗಾಗ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಮಕ್ಕಳು ಮರೆತೇವೆಂದರೂ ಶಾಲೆಯ ಶೌಚಾಲಯಗಳು ಸುಮ್ಮನಿರುವುದಿಲ್ಲ ! ನೆನಪಿಸುವ ಕೆಲಸವನ್ನು ಮಾಡುತ್ತಲೇ ಇರುತ್ತವೆ.

ಸಮ್ಮೇಳನದ ಸ್ಮಾರಕಗಳಂತೆ ಉಳಿದಿರುವ ಶೌಚಾಲಯಗಳಿಗೂ ಸಾಹಿತ್ಯ ಸಮ್ಮೇಳನಕ್ಕೂ ಎತ್ತಣಿಂದೆತ್ತಣ ಸಂಬಂಧವಯ್ಯ ಎಂದು ಆಶ್ಚರ್ಯ ಚಕಿತರಾಗುವುದೋ, ಕನ್ನಡದ ಸಾಹಿತ್ಯ ‘ಶೌಚಾಲಯ ಸಾಹಿತ್ಯ’ವಾಯಿತೆ ಎಂದು ಖಿನ್ನರಾಗುವುದೋ ಬೇಡ . ಈ ಶೌಚಾಲಯಗಳು 67 ನೇ ಸಾಹಿತ್ಯ ಸಮ್ಮೇಳನದ ನೆನಪುಗಳಾಗಿ ಅಲ್ಲಿನ ಶಾಲಾ ಮಕ್ಕಳಿಗೆ ಉಳಿದಿವೆ ಅನ್ನುವುದಷ್ಟೇ ಇಲ್ಲಿನ ಸಂಗತಿ. ವಿಷಯದಲ್ಲಿನ ಚೋದ್ಯವೆಂದರೆ, ಶೌಚಾಲಯಗಳನ್ನು ನೋಡುವಷ್ಟರ ಮಟ್ಟಿಗೆ ಮಾತ್ರ ಮಕ್ಕಳು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಅವು ಬಳಸುವ ಸ್ಥಿತಿಯಲ್ಲಿಲ್ಲ ವಾದ್ದರಿಂದ ಮಕ್ಕಳು ಶೌಚಾಲಯಕ್ಕಿಂಥ ಬಯಲೇ ಚೆನ್ನ ಎನ್ನುತ್ತಿದ್ದಾರೆ.

ಈ ಸಾಹಿತ್ಯ ಸಮ್ಮೇಳನ ನಡೆದದ್ದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮಕ್ಕಳ ರಾಜಕೀಯ ಜೀವನದ ಉಚ್ಛ್ರಾಯ ಸ್ಥಿತಿಯ ಕಾಲದಲ್ಲಿ . ಸಮ್ಮೇಳನದ ಸಮಸ್ತ ಹೊಣೆಯನ್ನೂ ಗೌಡರ ಕುಟುಂಬವೇ ಹೊತ್ತುಕೊಂಡಿತ್ತು . ಪರಿಣಾಮವಾಗಿ ಕನಕಪುರಕ್ಕೆ ಆಗಮಿಸುವ ಅತಿಥಿಗಳಿಗೆ ಹಿಂದೆಂದೂ, ಯಾವ ಸಮ್ಮೇಳನಗಳಲ್ಲೂ ಕಾಣದ ಅದ್ದೂರಿ ಸ್ವಾಗತ.

ಕುಂದು ಕೊರೆ ಅನ್ನುವ ಸೊಲ್ಲೇ ಇರಬಾರದು ಅನ್ನುವುದು ಸಂಘಟಕರ ಆಸೆ. ಅದಕ್ಕೇ ತಂಗುದಾಣಗಳಾದ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಯಿತು. ಸಮ್ಮೇಳನದ ನಂತರವೂ ಮಕ್ಕಳಿಗೆ ಅನುಕೂಲವಾಗುವಂತೆ ಶಾಶ್ವತ ಶೌಚಾಲಯಗಳನ್ನು ನಿರ್ಮಿಸುವಂತೆ ತುಂಡು ಗುತ್ತಿಗೆ ನೀಡಲಾಯಿತು. ಆದರೆ, ಗುತ್ತಿಗೆದಾರ ಏನಂದುಕೊಂಡನೋ.. ಸಮ್ಮೇಳನ ಮುಗಿದ ನಂತರ ಶೌಚಾಲಯಗಳ ಬಾಗಿಲುಗಳನ್ನು ಕಿತ್ತು ಕೊಂಡೊಯ್ದ . ಪರಿಣಾಮವಾಗಿ ಈಗುಳಿದಿರುವುದು ಶೌಚಾಲಯಗಳ ಪಳೆಯುಳಿಕೆಗಳು ಮಾತ್ರ.

ಸಾಹಿತ್ಯ ಸಮ್ಮೇಳನ ಜರುಗಿದ ನೆನಪಿಗಾಗಿ ಕನಕಪುರದಲ್ಲಿ ಕನ್ನಡ ಭವನವನ್ನು ನಿರ್ಮಿಸುವುದಾಗಿ ಸಮ್ಮೇಳನದ ಉಸ್ತುವಾರಿ ಹೊತ್ತವರು ವೇದಿಕೆಯಲ್ಲಿ ಘೋಷಿಸಿದ್ದರು. ಈವರೆಗೂ ಕನ್ನಡ ಭವನ ನಿರ್ಮಾಣವಾಗಿಲ್ಲ . ಶೌಚಾಲಯಗಳು ದುರಸ್ಥಿಗೊಂಡಿಲ್ಲ . ಪಾತ್ರಗಳೂ ಬದಲಾಗಿವೆ. ಏನ ಮಾಡುವುದು ನೀವೇ ಹೇಳಿ...?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X