ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ 3 ತಿಂಗಳ ಜೀವದಾನ !

By Staff
|
Google Oneindia Kannada News

ಬೆಂಗಳೂರು : ತೀವ್ರ ವಿರೋಧಗಳ ನಡುವೆಯೂ ರಾಜ್ಯ ಸರಕಾರ ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ ಮುಂದುವರಿಸಲು ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಗೆ ಮೂರು ತಿಂಗಳ ಅನುಮತಿ ನೀಡಲು ಸಮ್ಮತಿಸಿದೆ.

ಈ ಹಿಂದೆ ರಾಜ್ಯ ಸರಕಾರ ಗಣಿಗಾರಿಕೆಯ ಗುತ್ತಿಗೆಯನ್ನು ತಾತ್ಕಾಲಿಕವಾಗಿ ಮುಂದುವರಿಸಿತ್ತು. ಈ ಗುತ್ತಿಗೆ ಅವಧಿ ಜುಲೈ 24ಕ್ಕೇ ಕೊನೆಗೊಂಡಿದೆ. ಈ ಮಧ್ಯೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್‌. ಅನಂತಮೂರ್ತಿ ಅವರೂ ಸೇರಿದಂತೆ ಪರಿಸರವಾದಿಗಳು - ಬುದ್ಧಿಜೀವಿಗಳು, ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆಗೆ ಅನುಮತಿ ನೀಡದಂತೆ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕುದುರೆಮುಖ ಸಂಸ್ಥೆಯ ಭವಿಷ್ಯ ಡೋಲಾಯಮಾನವಾಗಿತ್ತು.

ಕುದುರೆಮುಖ ಕಂಪನಿಗೆ ಗಣಿಗಾರಿಕೆ ಅವಧಿ ವಿಸ್ತರಿಸಬೇಕೇ? ಬೇಡವೇ? ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಬಗ್ಗೆ ಇತ್ತೀಚೆಗೆ ನಡೆದ ಸಚಿವ ಸಂಪುಟದ ಸಭೆಯೂ ವಿಫಲವಾಗಿತ್ತು. ಉಭಯ ಸದನಗಳಲ್ಲಿ ಪ್ರತಿಪಕ್ಷ ನಾಯಕರು, ಗಣಿಗಾರಿಕೆಗೆ ಅನುಮತಿ ನೀಡದಿದ್ದ ಪಕ್ಷದಲ್ಲಿ, ನವಮಂಗಳೂರು ಬಂದರಿನ ಮೇಲೆ ಉಂಟಾಗುವ ಪರಿಣಾಮ, ಕುದುರೆಮುಖ ಸಂಸ್ಥೆಯ ನೌಕರರ ಭವಿಷ್ಯ ಮೊದಲಾದ ವಿಷಯಗಳ ಬಗ್ಗೆ ಅಧ್ಯಯನ ನಡೆಸುವಂತೆ ಒತ್ತಾಯಿಸಿದ್ದರು.

ಪ್ರತಿಶತ ನೂರರಷ್ಟು ರಫ್ತು ಆಧಾರಿತ ಹಾಗೂ ಲಾಭದಾಯಕ ಉದ್ದಿಮೆಯಾಗಿ, ದೇಶಕ್ಕೆ ವಿದೇಶೀ ವಿನಿಮಯವನ್ನೂ ಗಳಿಸಿಕೊಡುತ್ತಿರುವ ಕುದುರೆಮುಖ ಸಂಸ್ಥೆ ಮುಚ್ಚಲು ಮನಸ್ಸಿಲ್ಲದೆ, ತಿದ್ದುಪಡಿಯಾಗಿರುವ ಗಣಿ ಕಾಯ್ದೆಯ ರೀತ್ಯ ಮೂರು ತಿಂಗಳ ಕಾಲ ಗುತ್ತಿಗೆ ನವೀಕರಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಗೊತ್ತಾಗಿದೆ.

ಗಣಿ ಕಾಯಿದೆ ರೀತ್ಯ ದೀರ್ಘಾವಧಿ ಗುತ್ತಿಗೆ ಮುಗಿದ ತರುವಾಯ ಮೂರು ತಿಂಗಳ ಕಾಲ ಮಾತ್ರ ಗುತ್ತಿಗೆ ಅವಧಿ ಮುಂದುವರಿಸಲು ಅವಕಾಶ ಇದೆ. ಈ ಅವಕಾಶವನ್ನು ಸದ್ಯಕ್ಕೆ ಬಳಸಿಕೊಳ್ಳಲು ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ. (ಬೀಸೋ ದೊಣ್ಣೆ ತಪ್ಪಿಸಿಕೊಂಡರೆ, ಸಾವಿರ ವರ್ಷ ಆಯಸ್ಸು ಅಂತಾರೆ ಹಿರಿಯರು) ಆದರೆ, ಕಂಪನಿ ಹೊಸ ಜಾಗದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಸರಕಾರದ ಉನ್ನತಾಧಿಕಾರಿಗಳ ಮೂಲಗಳು ತಿಳಿಸಿವೆ.

ಎಲ್ಲಕ್ಕಿಂತ ಮಿಗಿಲಾಗಿ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಭವಿಷ್ಯದ ವಿವಾದ ಸರ್ವೋಚ್ಚ ನ್ಯಾಯಾಲಯದಲ್ಲೂ ಇರುವ ಕಾರಣ, ನ್ಯಾಯಾಲಯದ ತೀರ್ಮಾನ ಬರುವವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳದಿರಲು ನಿರ್ಧರಿಸಿರುವ ರಾಜ್ಯ ಸರಕಾರ, ಮೂರು ತಿಂಗಳ ಕಾಲ ಗಣಿಗಾರಿಕೆಗೆ ಅನುಮತಿಸಲು ನಿರ್ಧರಿಸಿದೆ ಎಂದೂ ಮೂಲಗಳು ಹೇಳಿವೆ.

ಹೋರಾಟ : ಸರಕಾರದ ಈ ನಿರ್ಧಾರ ಅಧಿಕೃತವಾಗಿ ಹೊರಬೀಳುವ ಮೊದಲೇ, ತುಂಗಾ ನದಿ ಪಾತ್ರದ 7 ಜಿಲ್ಲೆಗಳಲ್ಲಿ ಬಂದ್‌ ಆಚರಣೆಯ ಸಿದ್ಧತೆ ನಡೆದಿದೆ. ತುಂಗಾ ಮೂಲ ಉಳಿಸಿ ಹೋರಾಟ ತೀವ್ರಗೊಳ್ಳುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X