ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒರಿಸ್ಸಾ :ನೆರೆ ನುಂಗಿಕೊಂಡದ್ದು 70 ಮಂದಿ,10 ಸಾವಿರ ಹಸುಗಳನ್ನು

By Staff
|
Google Oneindia Kannada News

ಭುವನೇಶ್ವರ : ಎದೆ ಬಿರಿವಂತೆ ನುಗ್ಗುವ ನೀರಿನ ನಡುವೆಯೂ ಕಳೆದುಹೋದ ತಮ್ಮವರ ಹುಡುಕಾಟ. ಸತ್ತಿದ್ದು ಖರೆ; ಹೆಣ ಮಾತ್ರ ಸಿಗಲೇ ಇಲ್ಲ. ಹಾಗಂತ ಹುಡುಕಾಟ ನಿಲ್ಲಿಸಲಾದೀತೆ ? ಕಳೆದ 7 ದಿನಗಳಿಂದ ಜಗತ್ತಿನ ಸಂಪರ್ಕ ಕಳಕೊಂಡಿರುವ ಪಶ್ಚಿಮ ಒರಿಸ್ಸಾದ 22 ಜಿಲ್ಲೆಗಳಲ್ಲಿ ಕಾಣುತ್ತಿರುವ ದೃಶ್ಯಗಳ ನಮೂನೆ ಇವು.

ಎಪ್ಪತ್ತು ಜನ ಸತ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ತುರುಗಳು ಇನ್ನಿಲ್ಲ. 13 ಸಾವಿರ ಹಳ್ಳಿಗಳ ಸುಮಾರು 76 ಲಕ್ಷ ಜನರ ಅರ್ಧ ದೇಹ ಸದಾ ನೀರಲ್ಲೇ ಮುಳುಗಿರಬೇಕಾದ ಪರಿಸ್ಥಿತಿ. 32 ಕೋಟಿ ರುಪಾಯಿ ಬೆಲೆಯ ಬೆಳೆ ಕೆಸರಾಗಿದೆ. 1 ಲಕ್ಷದ 75 ಸಾವಿರ ಮನೆಗಳು ನೀರಲ್ಲಿ ಕರಗಿಹೋಗಿವೆ ; ಮುರಿದು ಬಿದ್ದಿವೆ. ಒರಿಸ್ಸಾ ಸರ್ಕಾರ ಸೋಮವಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿರುವ ನೆರೆ ಹೊಡೆತ ಕುರಿತ ಮಧ್ಯಂತರ ವರದಿಯ ಮುಖ್ಯ ಅಂಕಿ- ಅಂಶಗಳಿವು.

ಕೆರಳಿದ ಮಹಾನದಿ ಝಾರ್‌ಸುಗುಡ, ಸಂಭಾಲ್‌ಪುರ, ಸೋನೆಪುರ ಹಾಗೂ ಬೌಧ್‌ ಜಿಲ್ಲೆಗಳ ಜನರ ಪಾಲಿಗಂತೂ ಅಕ್ಷರಶಃ ನರಕ ಸೃಷ್ಟಿಸಿದೆ. ಸಂಭಾಲ್‌ಪುರದ ರೈಲ್ವೆ ನಿಲ್ದಾಣ ಯದ್ವಾತದ್ವಾ ಹಾಳಾಗಿದೆ. 12 ಕಿ.ಮೀ. ದೂರದಲ್ಲಿರುವ ಹಿರಾಕುಡ್‌ ಅಣೆಕಟ್ಟೆಯಿಂದ ನುಗ್ಗುತ್ತಿರುವ ನೀರಿನ ಪ್ರಭಾವ- ನಗರಿ 7 ದಿನಗಳಿಂದ ನೀರಿನಲ್ಲಿ ಮುಳುಗಿಹೋಗಿದೆ. ಪರಿಹಾರ ಕಾರ್ಯಗಳ ವೇಗ ಸಾಲದು ಎಂಬುದು ಜನಾಭಿಪ್ರಾಯ. ನಾವು ಜಿಲ್ಲಾವಾರು ಪಕ್ಷಪಾತ ಧೋರಣೆ ತಳೆಯದೆ ಸರ್ಕಾರದ ವತಿಯಿಂದ ಏನು ಮಾಡಬಹುದೋ, ಎಲ್ಲಾ ಮಾಡುತ್ತಿದ್ದೇವೆ ಎನ್ನುತ್ತಾರೆ ಕಂದಾಯ ಸಚಿವ ಬಿ.ಬಿ.ಹರಿಚಂದ್ರನ್‌.

ಪಶ್ಚಿಮದ ಜಿಲ್ಲೆಗಳಾಯಿತು. ಈಗ ಉತ್ತರ ಒರಿಸ್ಸಾದಲ್ಲಿ ಆತಂಕದ ಮೋಡ ಸರಿದಾಡುತ್ತಿದೆ. ಮಹಾನದಿಯ ಮುಂದಿನ ಕರಾಳ ಪಯಣ ಇಲ್ಲಿಗೇ ಸಾಗಲಿದೆ ಎಂಬುದು ಹವಾಮಾನ ಇಲಾಖೆಯವರ ಲೆಕ್ಕಾಚಾರ. ಬ್ರಾಹ್ಮಣಿ ಮತ್ತು ಬೈಲ ರಾಣಿ ನದಿಗಳ ಕಂಠ ಪೂರ್ತಿಯಾಗಿದ್ದು, ಯಾವಾಗ ಕಿಯೋಂಝರ್‌ ಮತ್ತು ಜೈಪುರ್‌ ಜಿಲ್ಲೆಗಳತ್ತ ನುಗ್ಗುತ್ತದೋ ಎಂಬ ಭಯ ಜನರಲ್ಲಿ. ರಾಜಧಾನಿ ಭುವನೇಶ್ವರದಲ್ಲೂ ನೆರೆಯ ಆತಂಕದ ನೊರೆ ಹೆಪ್ಪುಗಟ್ಟಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X