ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೋಲಾಯಮಾನದಲ್ಲಿ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಕಾರ್ಮಿಕರ ಭವಿಷ್ಯ

By Staff
|
Google Oneindia Kannada News

* ರಾಜು ಮಹತಿ

ಮಂಗಳೂರು : ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಗಣಿಗಾರಿಕೆಗೆ ಅನುಮತಿ ವಿಸ್ತರಿಸುವುದಕ್ಕೆ ವಿರೋಧ ವ್ಯಕ್ತವಾಗುವುದರ ಬೆನ್ನಲ್ಲೇ ಸಂಸ್ಥೆಯ ಕಾರ್ಮಿಕ ವಲಯದಲ್ಲಿ ಕಳವಳದ ವಾತಾವರಣ ಉಂಟಾಗಿದೆ. ಪರಿಸರವಾದಿಗಳ ಚಳವಳಿ ಪ್ರಬಲಗೊಳ್ಳುತ್ತಿರುವುದರಿಂದ ಸರಕಾರ ಕೂಡ ಅವರ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿರುವುದರಿಂದ ಜುಲೈ 24ರ ನಂತರ ಕುದುರೆಮುಖ ಸಂಸ್ಥೆಯ ಭವಿಷ್ಯ ಏನು ಎಂಬ ಚಿಂತೆ ಅವರನ್ನು ಕಾಡತೊಡಗಿದೆ.

ಏಷ್ಯಾದಲ್ಲೇ ಅತಿ ಉದ್ದದ ಕಬ್ಬಿಣ ಅದಿರು ಸಾಗಾಟ ಕೊಳವೆ ಮಾರ್ಗ ಹೊಂದಿರುವ ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆ ನವಮಂಗಳೂರು ಬಂದರಿನಲ್ಲಿ ಪ್ರತ್ಯೇಕ ಜೆಟ್ಟಿಯನ್ನು ಹೊಂದಿದೆ. 67 ಕಿ.ಮೀ. ಉದ್ದದ ಕೊಳವೆ ಮಾರ್ಗದಲ್ಲಿ ಹಾದು ಬರುವ ಕಬ್ಬಿಣ ಅದಿರು ಇಲ್ಲಿ ಅತ್ಯಾಧುನಿಕ ಸಲಕರಣೆಗಳ ಮೂಲಕ ಹಡಗಿಗೆ ತುಂಬಲ್ಪಟ್ಟು ರಫ್ತಾಗುತ್ತದೆ. ಕುದುರೆಮುಖ ಸಂಸ್ಥೆ ವಾರ್ಷಿಕ 7.5 ಮಿಲಿಯನ್‌ ಟನ್‌ ಕಬ್ಬಿಣದ ಅದಿರು ಸಂಸ್ಕರಣ ಸಾಮರ್ಥ್ಯ ಹೊಂದಿದ್ದು ಅದು ವಾರ್ಷಿಕ 6 ಮಿಲಿಯನ್‌ ಟನ್‌ ಕಬ್ಬಿಣದ ಅದಿರು ಸಂಸ್ಕರಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 580 ಕೋಟಿ ವಿದೇಶೀ ವಿನಿಮಯವನ್ನು ಅದು ಗಳಿಸಿದೆ.

ಕೋಟ್ಯಂತರ ಬಂಡವಾಳ ಹೂಡಿಕೆ, ಸಾವಿರಾರು ಜನರಿಗೆ ಅನ್ನ
ಕಳೆದ ವರ್ಷವಷ್ಟೇ ಸಂಸ್ಥೆಯು 300 ಕೋಟಿ ರೂಪಾಯಿ ವೆಚ್ಚದಲ್ಲಿ ಕುದುರೆಮುಖ ಕಬ್ಬಿಣ ಮತ್ತು ಉಕ್ಕು ಕಂಪೆನಿಯನ್ನು ಬೈಕಂಪಾಡಿಯಲ್ಲಿ ಸ್ಥಾಪಿಸಿದೆ. ಇದು ವಾರ್ಷಿಕ 2..27 ಲಕ್ಷ ಟನ್‌ ಬೀಡು ಕಬ್ಬಿಣ ತಯಾರಿಕಾ ಸಾಮರ್ಥ್ಯ ಹೊಂದಿದೆ. ಅದಿರು ಸಂಸ್ಥೆ ಮತ್ತು ಉಕ್ಕು ತಯಾರಿಕಾ ಘಟಕ ಸೇರಿದರೆ ಒಟ್ಟು 2,500 ಮಂದಿಗೆ ಇಲ್ಲಿ ಉದ್ಯೋಗ ದೊರೆತಿದೆ.

1976ರಲ್ಲಿ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಆರಂಭಗೊಂಡರೂ ಅದರ ಕಾರ್ಯಚಟುವಟಿಕೆ ಆರಂಭಗೊಂಡಿದ್ದು, ಮೂರುವರೆ ವರ್ಷಗಳ ನಂತರ. ಈ ಕಾಲಾವಧಿಯಲ್ಲಿ ಕುದುರೆಮುಖದಲ್ಲಿ ನಿರ್ಮಾಣ ಕಾಮಗಾರಿ ನಡೆಯಿತು. ಕಳೆದ ಎರಡು ದಶಕಗಳಿಂದ ಅದು ನಿರಂತರ ಗಣಿಗಾರಿಕೆ ನಡೆಸಿಕೊಂಡು ಬಂದಿದೆ.

ಪರಿಸರ ಸಂರಕ್ಷಣೆಗೂ ಆದ್ಯತೆ ?

ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಿದೆ ಎನ್ನುತ್ತಾರೆ ಸಂಸ್ಥೆಯ ಮಂಗಳೂರು ಘಟಕದಲ್ಲಿರುವ ಅಧಿಕಾರಿಗಳು. ಸಂಸ್ಥೆ ಗಣಿಗಾರಿಕೆ ನಡೆಸುತ್ತಿರುವ ಪ್ರದೇಶ 900 ಹೆಕ್ಟೇರ್‌ ಮತ್ತು ಲಖ್ಯಾ ಡ್ಯಾಂ, ಟೌನ್‌ ಶಿಪ್‌ ಸೇರಿದರೆ, ಕುದುರೆಮುಖ ಸಂಸ್ಥೆಯ ವಿಸ್ತಾರ 3705 ಹೆಕ್ಟೇರ್‌ ಎನ್ನುತ್ತವೆ ಅಧಿಕೃತ ಮೂಲಗಳು.

ಈಗ ಗಣಿಗಾರಿಕೆ ನಡೆಯುತ್ತಿರುವುದು ಭದ್ರಾ ನದಿ ದಂಡೆಯಲ್ಲಿ . ತುಂಗಾ ನದಿ ಮೂಲಕ್ಕೆ ಇಲ್ಲಿಂದ 17 ಕಿ.ಮೀ. ದೂರವಿದೆ. ಗಂಗಡಿಕಲ್ಲಿನಲ್ಲಿ ಗಣಿಗಾರಿಕೆ ನಡೆಸಿದರೆ ಮಾತ್ರ ತುಂಗಾ ಮೂಲ ಮಾಲಿನ್ಯಗೊಳ್ಳಬಹುದು. ಸದ್ಯಕ್ಕೆ ಗಂಗಡಿಕಲ್ಲಿನಲ್ಲಿ ಗಣಿಗಾರಿಕೆಗೆ ಅನುಮತಿ ಇಲ್ಲ ಎಂಬುದು ಈ ಮೂಲಗಳ ಸಮಜಾಯಿಶಿ.

ಒಟ್ಟಿನಲ್ಲಿ ಜುಲೈ 24ಕ್ಕೆ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಬೃಹತ್‌ ಗಾತ್ರದ ಯಂತ್ರೋಪಕರಣಗಳ ಸದ್ದು ನಿಲ್ಲಲಿದೆ. ಜುಲೈ 26ರಂದು ನ್ಯಾಯಾಲಯದಲ್ಲಿ ಈ ಸಂಸ್ಥೆ ಸಂಬಂಧ ಅರ್ಜಿ ವಿಚಾರಣೆ ನಡೆಯಲಿದ್ದು, ಸಂಸ್ಥೆಯ ಭವಿಷ್ಯ ಇದನ್ನು ಅವಲಂಬಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X