Get Updates
Get notified of breaking news, exclusive insights, and must-see stories!

ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಭವಿಷ್ಯ ತೂಗುಯ್ಯಾಲೆಯಲ್ಲಿ

ಬೆಂಗಳೂರು : ರಫ್ತು ಆಧಾರಿತ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (ಕೆ.ಐ.ಓ.ಸಿ.ಎಲ್‌) ಭವಿಷ್ಯ ಈಗ ತೂಗುಯ್ಯಾಲೆಯಲ್ಲಿದೆ. ಮುಂದಿನ ವಾರ ಈ ಸಂಸ್ಥೆಗೆ ನೀಡಲಾಗಿರುವ ಗಣಿಗಾರಿಕೆಯ ಅವಧಿ ಕೊನೆಗೊಳ್ಳುತ್ತಿದೆ. ಈ ಮಧ್ಯೆ ಪರಿಸರವಾದಿಗಳು ಯಾವುದೇ ಕಾರಣಕ್ಕೂ ಗಣಿಗಾರಿಕೆ ಅನುಮತಿ ಮುಂದುವರಿಸದಂತೆ ಹೋರಾಟ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಐಓಸಿಎಲ್‌ ಭವಿಷ್ಯವೇನು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಹಾಗೂ ಪ್ರತಿಶತ ನೂರರಷ್ಟು ರಫ್ತು ಆಧಾರಿತ ಕುದುರೆಮುಖ ಸಂಸ್ಥೆಗೆ ಈಗ ನೀಡಲಾಗಿರುವ ತಾತ್ಕಾಲಿಕ ಗಣಿಗಾರಿಕೆ ಅನುಮತಿ ಜುಲೈ 24ಕ್ಕೆ ಕೊನೆಗೊಳ್ಳುತ್ತಿದೆ. ಸರಕಾರ ಗಣಿಗಾರಿಕೆ ಅನುಮತಿ ಮುಂದುವರಿಸದಿದ್ದರೆ, ಸಂಸ್ಥೆ ಬಹುತೇಕ ಬಾಗಿಲು ಮುಚ್ಚಿದಂತೆಯೇ.

ಇಂತಹ ಮಹತ್ವದ ಸಂದರ್ಭದಲ್ಲಿ ರಾಜ್ಯದ ಪರಿಸರವಾದಿಗಳು, ಬುದ್ಧಿಜೀವಿಗಳು, ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆಗೆ ಅನುಮತಿ ಮುಂದುವರಿಸಬಾರದು ಎಂದು ಸರಕಾರದ ಮೇಲೆ ಒತ್ತಡ ಹೇರಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್‌. ಅನಂತಮೂರ್ತಿ ನೇತೃತ್ವದ ತಂಡ ಈಗಾಗಲೇ ಮುಖ್ಯಮಂತ್ರಿ ಕೃಷ್ಣ ಅವರಿಗೆ ಈ ಸಂಬಂಧ ಮನವಿ ಮಾಡಿದೆ. ಉಗ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದೆ.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ಹಿರಿಯ ನಾಯಕರ ಬೆಂಬಲವೂ ಈ ಪರಿಸರವಾದಿ ಹೋರಾಟಕ್ಕೆ ದೊರಕಿದೆ. ಪಶ್ಚಿಮಘಟ್ಟ ನಾಶವಾದರೆ, ಇಡೀ ದಕ್ಷಿಣ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ ಎಂಬ ಎಚ್ಚರಿಕೆಯನ್ನು ಸರಕಾರಕ್ಕೂ ನೀಡಲಾಗಿದೆ. ಈ ಭಾಗದ ಶಾಸಕರು ಕೂಡ ಗಣಿಗಾರಿಕೆ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಸಭೆ ನಡೆಸಿದ್ದಾರೆ.

ಈ ಮಧ್ಯೆ ರಾಜ್ಯ ಸರಕಾರ ಸಚಿವ ಸಂಪುಟದ ಸಭೆಯಲ್ಲಿ ಗಣಿಗಾರಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಗಿದೆ. ಪಶ್ಚಿಮ ಘಟ್ಟ ಭಾಗದ ಶಾಸಕರ ಅಭಿಪ್ರಾಯಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದೆ. ಆದರೆ, ಈಗ ಉಳಿದಿರುವುದು ಕೇವಲ ಮೂರೇ ದಿನ. ಕುದುರೆಮುಖ ಸಂಸ್ಥೆ ತನ್ನಲ್ಲಿ ಹಾಲಿ ಇರುವ ಸಂಗ್ರಹದ ಮೇಲೆ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಇದೆ. ಸರಕಾರ ಪರಿಸರವಾದಿಗಳ ಒತ್ತಡಕ್ಕೆ ಮಣಿದರೆ, ಸಂಸ್ಥೆ ಪ್ರತಿಕೂಲ ಪರಿಣಾಮ ಎದುರಿಸಲೇ ಬೇಕಾಗುತ್ತದೆ.

3000 ನೌಕರರ ಭವಿಷ್ಯ ಅತಂತ್ರ : ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯಲ್ಲಿ 3000ರಕ್ಕೂ ಹೆಚ್ಚು ನೌಕರರಿದ್ದಾರೆ. ಇವರೆಲ್ಲರ ಭವಿಷ್ಯ ಈಗ ಅತಂತ್ರವಾಗಿದೆ. ನಿರುದ್ಯೋಗದ ಭೀತಿ ಇವರನ್ನು ಕಾಡುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ಮೂಲಭೂತ ಸೌಕರ್ಯಗಳಿಗಾಗಿ ಕೊಟ್ಯಂತರ ರುಪಾಯಿ ವೆಚ್ಚ ಮಾಡಿರುವ ಸಂಸ್ಥೆ, ಈಗಾಗಲೇ ಜಪಾನ್‌ನೊಂದಿಗೆ ಮಾಡಿಕೊಂಡಿರುವ ರಫ್ತು ಕರಾರಿನ ಬಗ್ಗೆ ಚಿಂತಾಕ್ರಾಂತವಾಗಿದೆ.

ಕುದುರೆಮುಖ ಸಂಸ್ಥೆ ಲಾಭಗಳಿಸುತ್ತಿರುವುದಷ್ಟೇ ಅಲ್ಲದೆ, ವಿದೇಶೀ ವಿನಿಮಯವನ್ನೂ ಗಳಿಸಿಕೊಡುತ್ತಿದೆ. ಆದರೆ, ಈ ಯಾವ ಸಿದ್ಧಾಂತಗಳ ಜತೆಯೂ ಪರಿಸರವಾದಿಗಳು ರಾಜೀ ಮಾಡಿಕೊಳ್ಳಲು ತಯಾರಿಲ್ಲ. ಪಶ್ಚಿಮ ಘಟ್ಟದಲ್ಲಿ ಚಿನ್ನವೇ ಸಿಕ್ಕರೂ ಗಣಿಗಾರಿಕೆ ಬೇಡ ಎಂಬುದು ಅವರ ಆಗ್ರಹ. ಕಂಪನಿ ಬೇಕಾದರೆ, ಬಳ್ಳಾರಿಯಂತಹ ಬರಡು ಭೂಮಿಯಲ್ಲಿ ತನ್ನ ಗಣಿಗಾರಿಕೆ ಮುಂದುವರಿಸಲಿ, ಅರಣ್ಯ ನಾಶ ಮಾಡುವುದು ಬೇಡ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಸರಕಾರದ ನಿರ್ಧಾರದ ಮೇಲೆ ಸಂಸ್ಥೆ ಭವಿಷ್ಯ : ಈಗ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ ಭವಿಷ್ಯ ರಾಜ್ಯ ಸರಕಾರ ಕೈಗೊಳ್ಳಬಹುದಾದ ತೀರ್ಮಾನದ ಮೇಲೆ ಅವಲಂಬಿತವಾಗಿದೆ. ಕೆಐಓಸಿಎಲ್‌ಗೆ ಸಂಬಂಧಿಸಿದಂತೆ ಎಲ್ಲ ವಿಚಾರಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆಗೆ ಸೂಚಿಸಿದೆ. ಇಲಾಖೆಯು ಕಳೆದ 30 ವರ್ಷಗಳ ಗಣಿಗಾರಿಕೆಯಿಂದ ಆಗಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆಯೂ ಅಧ್ಯಯನ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

ಬಂದರಿನ ಮೇಲೂ ಪರಿಣಾಮ : ಕುದುರೆಮುಖ ಕಂಪನಿಯ ಗಣಿಗಾರಿಕೆಗೆ ಅನುಮತಿ ನೀಡದಿದ್ದಲ್ಲಿ, ಇದರ ಪ್ರತಿಕೂಲ ಪರಿಣಾಮ ರಫ್ತು ಚಟುವಟಿಕೆಯಲ್ಲಿ ಪ್ರಧಾನ ಪಾತ್ರ ವಹಿಸಿರುವ ನವಮಂಗಳೂರು ಬಂದರಿನ ಮೇಲೂ ಉಂಟಾಗಲಿದೆ. ಇದೆಲ್ಲವನ್ನು ಮನಗಂಡೆ ಸರಕಾರ ಗಣಿ ಮತ್ತು ಭೂಗರ್ಭ ಇಲಾಖೆಗೆ ವರದಿ ಕೇಳುವ ಮೂಲಕ ಮತ್ತಷ್ಟು ಕಾಲವಕಾಶ ಪಡೆದುಕೊಳ್ಳುವ ಪ್ರಯತ್ನ ನಡೆಸಿದೆ. ಮಿಗಿಲಾಗಿ ಈ ವಿದಾದ ಸರ್ವೋಚ್ಚ ನ್ಯಾಯಾಲಯದಲ್ಲೂ ಇದೆ.

ಒಂದೊಮ್ಮೆ ಸರ್ವೋಚ್ಚ ನ್ಯಾಯಾಲಯ ಗಣಿಗಾರಿಕೆ ವಿರುದ್ಧ ತೀರ್ಪಿತ್ತರೆ, ಆಗ ರಾಜ್ಯ ಸರಕಾರ ದೋಷಮುಕ್ತವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಕೇಂದ್ರ ಸರಕಾರ ಗಣಿಗಾರಿಕೆ ಅನುಮತಿ ಮುಂದುವರಿಸುವಂತೆ ರಾಜ್ಯದ ಮೇಲೆ ಒತ್ತಡ ಹೇರುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಹೀಗಾಗಿ ರಾಜ್ಯ ಸರಕಾರ ಕುದುರೆಮುಖ ಗಣಿಗಾರಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವ ವಿಚಾರದಲ್ಲಿ ಅಡಕತ್ತರಿಗೆ ಸಿಲುಕಿದೆ. ಕುದುರೆಮುಖ ಸಂಸ್ಥೆ ಮುಂದಿನ 20 ವರ್ಷಗಳ ಅವಧಿಗೆ ಗಣಿಗಾರಿಕೆ ಮುಂದುವರಿಸಲು ಅನುಮತಿ ಕೋರಿದೆ.

(ಯು.ಎನ್‌.ಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+