ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಬರ ಪರಿಸ್ಥಿತಿಯ ನಿರ್ವಹಣೆಗೆ 15 ಅಂಶದ ಕಾರ್ಯಕ್ರಮ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ, ಉಭಯ ಸದನಗಳಲ್ಲೂ ಮಾರ್ದನಿಸಿತು. ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಮತ್ತು ಸಾಲ ವಸೂಲಿ ಮುಂದೂಡುವಂತೆ ಪಟ್ಟು ಹಿಡಿದ ಪ್ರತಿಪಕ್ಷಗಳು ಧರಣಿ ನಡೆಸಿದವು.

ಸರಕಾರ ಬರ ಪರಿಸ್ಥಿತಿಯ ನಿರ್ವಹಣೆಗೆ 15 ಅಂಶಗಳ ಕಾರ್ಯಕ್ರಮ ಪ್ರಕಟಿಸಿತು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ಭರವಸೆ ನೀಡಿತು. ತೆರೆ ಮರೆಯ ಸಂಧಾನ ವಿಫಲವಾಯಿತು. ಕೊನೆಗೂ ಸದನವನ್ನು ಸೋಮವಾರಕ್ಕೆ ಮುಂದೂಡಲೇ ಬೇಕಾಯಿತು. ಇದಿಷ್ಟೂ ಶುಕ್ರವಾರದ ವಿಧಾನ ಮಂಡಳದ ವಿಧ್ಯಮಾನ.

ಬಿ.ಜೆ.ಪಿ. ಸೇರಿದಂತೆ ಎಲ್ಲ ಪ್ರಮುಖ ಪ್ರತಿಪಕ್ಷದವರೂ ರೈತರು ಪಡೆದಿರುವ ಕೃಷಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವಂತೆ ಪಟ್ಟು ಹಿಡಿದರು. ಸರಕಾರ ಸಚಿವ ಡಿ.ಕೆ. ಶಿವಕುಮಾರ್‌ ಈ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿದರು. ಪ್ರತಿಭಟನೆ ತೀವ್ರವಾದಾಗ ಸರಕಾರದ ಪರವಾಗಿ ಬರಪರಿಸ್ಥಿತಿಯ ನಿರ್ವಹಣೆಗೆ ಸಚಿವ ಡಿ.ಬಿ. ಚಂದ್ರೇಗೌಡ ಅವರು, 15 ಅಂಶಗಳ ಕಾರ್ಯಕ್ರಮ ಪ್ರಕಟಿಸಿದರು.

ತತ್ಕಾಲ್‌ ಪಂಪ್‌ಸೆಟ್‌ ಸಂಪರ್ಕ ಯೋಜನೆ ರದ್ಧತಿ, ಮೇವುಸಾಗಣೆ ಮೇಲೆ ನಿರ್ಬಂಧ, ಮೇವು ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ, ಕುಡಿಯುವ ನೀರು ಪೂರೈಕೆಗೆ ಆದ್ಯತೆ, ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗಾವಕಾಶ, ನೀರಾವರಿ, ಜಲಾನಯನ ಪ್ರದೇಶಗಳಲ್ಲಿ ಮತ್ತು ಮಳೆ ಆಶ್ರಿತ ಪ್ರದೇಶಗಳ ಮುಂಗಾರು ಬೆಳೆಯಲ್ಲಿ ಮಾರ್ಪಾಟು, ಬರ ಪರಿಸ್ಥಿತಿ ಅಧ್ಯಯನ ತಂಡ ರಚನೆ, ಮೇವು ಬ್ಯಾಂಕ್‌ ಸ್ಥಾಪನೆ ಮೊದಲಾದುವು 15 ಅಂಶಗಳ ಕಾರ್ಯಕ್ರಮದಲ್ಲಿ ಸೇರಿವೆ.

ಆದರೆ, ಬರ ಪರಿಹಾರ ಕಾಮಗಾರಿಗಳನ್ನು ತತ್‌ಕ್ಷಮವೇ ತ್ವರಿತ ಗತಿಯಲ್ಲಿ ಆರಂಭಿಸಬೇಕು, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂಬ ತಮ್ಮ ಪಟ್ಟನ್ನು ಸಡಿಲಿಸಲು ಪ್ರತಿಪಕ್ಷಗಳು ಒಪ್ಪದಿದ್ದಾಗ ಸದನ ಮುಂದೂಡುವುದು ಅನಿವಾರ್ಯವಾಯಿತು. ಸಚಿವರುಗಳು ಈ ಸಂಬಂಧ ನೀಡಿದ ಉತ್ತರಗಳು ತೃಪ್ತಿ ದಾಯಕವಾಗಿಲ್ಲ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದರು.

ರಾಜ್ಯದಲ್ಲಿ ಮುಂಗಾರು ಮಳೆ ಸುರಿಯದಿದ್ದರೂ ಉಭಯ ಸದನಗಳಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪಗಳ ಸುರಿಮಳೆಯೇ ಸುರಿಯಿತು. ಬರ ಪರಿಹಾರ ಕಾಮಗಾರಿ ಕೈಗೊಳ್ಳುವಲ್ಲಿ ಆಗುತ್ತಿರುವ ಅನಗತ್ಯ ವಿಳಂಬದ ಬಗ್ಗೆ ಪ್ರತಿಪಕ್ಷ ನಾಯಕರು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X