ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲರಿಯದ ಸೂಲಗಿತ್ತಿ ಜಲ್ಲೆ ಸಿದ್ಧಮ್ಮರಿಗೆ ‘ಕವಿತಾ ಸ್ಮಾರಕ ಪ್ರಶಸ್ತಿ’

By Staff
|
Google Oneindia Kannada News

ಮೈಸೂರು : ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಸಮುದಾಯದ ಮಹಿಳೆ ಸೂಲಗಿತ್ತಿ ಜಲ್ಲೆ ಸಿದ್ಧಮ್ಮ ಅವರನ್ನು ಶ್ರೀಮತಿ ಯಶೋಧಾ ರಾಗೌ ಟ್ರಸ್ಟ್‌ ನೀಡುವ ಕವಿತಾ ಸ್ಮಾರಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜುಲೈ 24 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

10 ಸಾವಿರ ರುಪಾಯಿ ನಗದನ್ನು ಒಳಗೊಂಡಿರುವ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಪ್ರದಾನ ಮಾಡುವರು. ಇದೇ ಸಮಾರಂಭದಲ್ಲಿ ‘ಭೂಮಿ ತೂಕದ ಕಣ್ಣೀರು’ ಎನ್ನುವ ಕೃತಿಯನ್ನು ರಂಗಾಯಣದ ನಿರ್ದೇಶಕ ಪ್ರಸನ್ನ ಬಿಡುಗಡೆ ಮಾಡುವರು ಎಂದು ಪ್ರತಿಷ್ಠಾನದ ಸದಸ್ಯ ಪ್ರೊ. ಶಿವರಾಮು ಕಾಡನಕುಪ್ಪೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾವಿರಾರು ಹೆರಿಗೆಗಳ ಮಾಡಿಸಿರುವ ಸೋಲರಿಯದ ಸಿದ್ಧಮ್ಮ
ಪರಂಪರಾಗತ ಪ್ರಸೂತಿ ಕಲೆಯನ್ನು ಕರಗತ ಮಾಡಿಕೊಂಡಿರುವ ಸೋಲಿಗರ ಸಿದ್ಧಮ್ಮ ಈವರೆಗೆ ಸಾವಿರಾರು ಹೆರಿಗೆಗಳನ್ನು ಮಾಡಿಸಿದ್ದು , ಒಂದರಲ್ಲಿಯೂ ವಿಫಲವಾಗಿಲ್ಲ ಎನ್ನುವ ಅಗ್ಗಳಿಕೆ ಹೊಂದಿದ್ದಾರೆ. ಅಜ್ಜಿ, ತಾಯಿಯಿಂದ ಗಿಡಮೂಲಿಕೆ ಔಷಧಿಯನ್ನು ಕಲಿತಿರುವ ಸಿದ್ಧಮ್ಮ ತಮ್ಮ ವಿದ್ಯೆಯನ್ನು ಸ್ಥಳೀಯರಿಗೆ ಮಾತ್ರವಲ್ಲದೆ ವಿದೇಶಿಯರಿಗೂ ಕಲಿಸಿಕೊಟ್ಟಿದ್ದಾರೆ. ಅವರ ಸೇವೆ- ಸಾಧನೆಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಮಹಿಳೆಯರಿಗಾಗಿ ದುಡಿಯುತ್ತಿರುವ ಯಶೋದಾ ಟ್ರಸ್ಟ್‌
ಮೂರು ವರ್ಷಗಳ ಹಿಂದೆ ತೀರಿಕೊಂಡ ಪುತ್ರಿ ಕವಿತಾಳ ಹೆಸರಿನಲ್ಲಿ ಜನಪರ ಕೆಲಸಗಳನ್ನು ಮಾಡಲು ಯಶೋಧಾ ಹಾಗೂ ಡಾ. ರಾಮೇಗೌಡ ದಂಪತಿಗಳು ನಿರ್ಧರಿಸಿದ್ದಾರೆ. ಸಮಾಜಕ್ಕೆ ವಿಶಿಷ್ಟ ಸೇವೆಯನ್ನು ಸಲ್ಲಿಸಿರುವವ ಮಹಿಳೆಯರನ್ನು ಗುರ್ತಿಸಿ ಗೌರವಿಸುವುದು, ಮಹಿಳೆಯರ ಸಮಸ್ಯೆಗಳ ಬಗ್ಗೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವ ಕೆಲಸಗಳಲ್ಲಿ ಪ್ರತಿಷ್ಠಾನ ತನ್ನನ್ನು ತೊಡಗಿಸಿಕೊಂಡಿದೆ.

ವಿಶೇಷ ಸಾಧನೆ ಮಾಡಿದ ಮಹಿಳೆಯರಿಗೆ ಕವಿತಾ ಸ್ಮಾರಕ ಪ್ರಶಸ್ತಿಯನ್ನು ಪ್ರತಿಷ್ಠಾನ ನೀಡುತ್ತಿದೆ. ಪ್ರಥಮ ವರ್ಷದ ಪ್ರಶಸ್ತಿ ಮೂಕ ಹಾಗೂ ಕಿವುಡು ಹೆಣ್ಣು ಮಕ್ಕಳಿಗಾಗಿ ಮೈಸೂರಿನಲ್ಲಿ ಶಾಲೆ ನಡೆಸುತ್ತಿರುವ ಪುಟ್ಟೀರಮ್ಮ ಅವರಿಗೆ ಸಂದಿದ್ದರೆ, ಎರಡನೇ ವರ್ಷದ ಪ್ರಶಸ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವನದೇವತೆ ಎಂದು ಹೆಸರಾದ ತುಳಸಿ ಅವರಿಗೆ ನೀಡಲಾಗಿದೆ. ಈ ಸಾಲಿನ ಪ್ರಶಸ್ತಿ ಸೋಲಿಗ ಮಹಿಳೆ ಸೂಲಗಿತ್ತಿ ಸಿದ್ಧಮ್ಮ ಅವರಿಗೆ ನೀಡುವ ಮೂಲಕ ಪ್ರತಿಷ್ಠಾನ ತನ್ನ ಜನಪರ ಅಭಿಯಾನವನ್ನು ಮುಂದುವರಿಸಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X