ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಕರ್ಣದ ಓಂ ಮತ್ತು ಕುಡ್ಲೆ ಬೀಚ್‌

By Staff
|
Google Oneindia Kannada News

ಶಿವನಾತ್ಮಲಿಂಗವೇ ಧರೆ ಸ್ಪರ್ಶಿಸಿದ ಮಹಾನ್‌ ಪುಣ್ಯಕ್ಷೇತ್ರ ಎಂದು ಹೆಸರಾದ ಗೋಕರ್ಣ, ಕೇವಲ ಪುಣ್ಯಕ್ಷೇತ್ರವಷ್ಟೇ ಅಲ್ಲ. ಸೌಂದರ್ಯದ ನೆಲೆವೀಡು. ಪ್ರಕೃತಿದೇವಿಯ ಅನುಗ್ರಹಕ್ಕೆ ಪಾತ್ರವಾದ ಸಿರಿನಾಡು. ಸುಂದರ ಬೆಟ್ಟಗುಡ್ಡಗಳ ಮಡಿಲಲ್ಲಿ ಮೈಚೆಲ್ಲಿರುವ ಸಮುದ್ರದಡಿಯಲ್ಲಿನ ಈ ಊರು ಆಸ್ತಿಕರು - ನಾಸ್ತಿಕರಿಬ್ಬರನ್ನೂ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಬೀಚುಗಳಲ್ಲಿ ಅಡ್ಡಾಡಿ ಆನಂದ ಅನುಭವಿಸಲೆಂದೇ ದೇಶ - ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲೇ ಬಿಡಾರ ಹೂಡಿ, ವಾರಗಟ್ಟಲೆ ಇದ್ದು ಅಮಿತಾನಂದವನ್ನು ಅನುಭವಿಸುತ್ತಾರೆ. ಗೋಕರ್ಣದ ಬಳಿ ಹತ್ತಾರು ಸುಂದರ ಬೀಚುಗಳಿವೆ. ಅವುಗಳಲ್ಲಿ ಕುಡ್ಲೆಬೀಚ್‌ ಮತ್ತು ಓಂ ಬೀಚ್‌ ಜಗದ್ವಿಖ್ಯಾತವಾಗಿವೆ.

ಓಂ ಬೀಚ್‌ ತನ್ನ ಆಕಾರದಿಂದಲೇ ಆ ಹೆಸರನ್ನು ಪಡೆದುಕೊಂಡಿದೆ. ಕಪ್ಪು ಕಲ್ಲಿನ ಸಿಂಗಾರದಲ್ಲಿ ಸಂಸ್ಕೃತದ ಓಂ ಅಕ್ಷರದಾಕಾರದಲ್ಲೇ ಕಾಣುವ ಈ ಬೀಚಿನ ಸುತ್ತಲೂ ಇರುವ ಗಿರಿ- ಹಸಿರು, ಶುಭ್ರವಾದ ಸುವರ್ಣವರ್ಣದ ಮರಳು ಎಂಥಹ ಅರಸಿಕನನ್ನೂ ಮಂತ್ರಮೃಗ್ಧಗೊಳಿಸುವಂತಿವೆ. ಇನ್ನು ಕುಡ್ಲೆ ಬೀಚ್‌ ತನ್ನ ಸ್ವಚ್ಛತೆಯಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಅರ್ಧಚಂದ್ರಾಕೃತಿಯಲ್ಲಿರುವ ಈ ಬೀಚ್‌ ನಯನ ಮನೋಹರವಾಗಿದೆ.

ಚಾರಣ: ಗೋಕರ್ಣದಿಂದ 3 ಕಿ.ಮೀಟರ್‌ ಸಮುದ್ರಗುಂಟ ಸಾಗಿದರೆ ಕುಡ್ಲೆ ಬೀಚ್‌ ಸಿಗುತ್ತದೆ. ಅಲ್ಲಿಂದ 2 ಕಿ.ಮೀಟರ್‌ ಅಂತರದಲ್ಲೇ ಓಂ ಬೀಚ್‌ ಇದೆ. ಸಮುದ್ರ ದಡದಲ್ಲಿ ನಡೆದು ಸಾಗಿ ಈ ಬೀಚುಗಳನ್ನು ನೋಡುವುದು ಒಂದು ಸಾಹಸವೇ ಸರಿ. ಇದನ್ನು ಚಾರಣ ಎಂದರೂ ತಪ್ಪಿಲ್ಲ.

ಬೆಟ್ಟಗಳನ್ನು ಹತ್ತಿ ಇಳಿದು, ಸಮುದ್ರ ದಂಡೆಯಲ್ಲಿ ನಿಸರ್ಗದ ಸೌಂದರ್ಯವನ್ನು ಸವಿಯುತ್ತಾ ಹೆಜ್ಜೆ ಹಾಕಿದರೆ, ನೀವು ಎಷ್ಟು ಕಿ.ಮೀಟರ್‌ ನಡೆದಿದ್ದೀರಿ ಎಂಬುದು ಅರಿವಿಗೇ ಬರುವುದಿಲ್ಲ. ಆಬಾಲವೃದ್ಧರಾಗಿ ಅನೇಕರು ಇಲ್ಲಿನ ಸೌಂದರ್ಯಾರಾಧನೆಗಾಗಿಯೇ ಸಮುದ್ರ ದಡದಲ್ಲಿ ನಡೆದೇ ಸಾಗುತ್ತಾರೆ.

ವಿದೇಶೀ ಪ್ರವಾಸಿಗರು : ಇಲ್ಲಿ ಗಾಂಜಾ, ಅಫೀಮು ದೊರಕುತ್ತದೆ ಎಂಬುದು ಜನಜನಿತವಾದ ವಿಚಾರ. ಇದನ್ನು ಜಿಲ್ಲಾಡಳಿತ ನಿರಾಕರಿಸುತ್ತದೆ. ಆದೇನೇ ಇರಲಿ, ವಿದೇಶಿ ಪ್ರವಾಸಿಗರು ಇಲ್ಲಿಗೆ ತಂಡೋಪತಂಡವಾಗಿ ಆಗಮಿಸುತ್ತಾರೆ. ಆದರೆ, ಸ್ಥಳೀಯ ಯುವಕರ ಹಾಗೂ ಸುತ್ತ ಮುತ್ತಲ ಪ್ರದೇಶಗಳ ಸ್ಥಳೀಯ ಯುವಕರ ಕೀಟಲೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ವಿದೇಶೀ ಪ್ರವಾಸಿಗರ ಸಂಖ್ಯೆ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ, ಕ್ಷೀಣಿಸಿದೆ ಎಂದೇ ಹೇಳಬಹುದು.

Om Beachಅಘನಾಶಿನಿ : ಓಂ ಬೀಚಿನಿಂದ ಸಮುದ್ರದ ದಡದಲ್ಲಿಯೇ 10 ಕಿ.ಮೀಟರ್‌ನಷ್ಟು ದೂರ ಸಾಗಿದರೆ, ಅಲ್ಲಿ ಅಘನಾಶಿನಿ ನದಿ ಸಮುದ್ರ ಸೇರುವ ಸುಂದರ ದೃಶ್ಯವನ್ನು ಕಣ್ಣಲ್ಲಿ ತುಂಬಿಕೊಳ್ಳಬಹುದು. ಈ ಪ್ರದೇಶದ ನೈಸರ್ಗಿಕ ಸಂಪತ್ತು, ಎಲ್ಲರ ಮನಸ್ಸನ್ನೂ ಆಯಸ್ಕಾಂತದಂತೆ ಸೆಳೆಯುತ್ತದೆ. ಈ ತಾಣದಲ್ಲಿ ಸೂರ್ಯಾಸ್ತಮಾನವನ್ನು ನೋಡುವುದೇ ಒಂದು ಸೊಗಸು.

ಗೋವಾದ ಬೀಚುಗಳಲ್ಲಿರುವ ಮನಮೋಹಕತೆ ಗೋಕರ್ಣದ ಬೀಚಿನಲ್ಲೂ ಇದೆ. ಇಲ್ಲೂ ಆಗೊಮ್ಮೆ ಈಗೊಮ್ಮೆ ನಗ್ನ, ಅರೆನಗ್ನ ಯುವತಿಯರು ಮರಳಿನ ಮೇಲೆ ಮಲಗಿ ಸೂರ್ಯಸ್ನಾನವನ್ನು ಮಾಡುತ್ತಾರೆ. ಉತ್ತರ ಕನ್ನಡದಲ್ಲಿರುವ ಈ ತಾಣ, ಕಾರವಾರದಿಂದ ಕೇವಲ 58 ಕಿ.ಮೀಟರ್‌ ದೂರದಲ್ಲಿದೆ. ಗೋಕರ್ಣದಿಂದ ಶ್ರೀಕೃಷ್ಣ ನೆಲೆಸಿಹ ಉಡುಪಿಗೆ ಕೇವಲ 5 ಗಂಟೆಗಳ ಪ್ರಯಾಣ.

ಓಂ ಬೀಚಿನ ತೀರದಲ್ಲಿ ಸುಸಜ್ಜಿತವಾದ ಡೇರೆಗಳು ಅರ್ಥಾತ್‌ ಗುಡಿಸಲುಗಳು ಲಭ್ಯ. ಕಾರವಾರದಲ್ಲಿ ಉತ್ತಮ ಸೌಲಭ್ಯವಿರುವ ಹೋಟೆಲ್‌ಗಳೂ ಇವೆ. ಕುಡ್ಲೆ ಬೀಚ್‌ ಬಳಿ ವಸತಿಗೃಹವೂ ಇದೆ. ತಂಪಾದ ಬೀರ್‌, ರುಚಿಯಾದ ಮೀನು, ರುಚಿಯಾದ ದೇಶೀಯ (ಸಸ್ಯಹಾರಿ - ಮಾಂಸಹಾರಿ) ಭೋಜನವೂ ಇಲ್ಲಿ ದೊರಕುತ್ತದೆ.

ಸುಂದರ ಬೀಚುಗಳ ಸೌಂದರ್ಯ ಸವಿಯಲು ಹಾಗೂ ಪುಣ್ಯಕ್ಷೇತ್ರವಾದ ಗೋಕರ್ಣದ ಈಶ್ವರನ ದರ್ಶನ ಮಾಡಲು ಎಲ್ಲ ಕಾಲವೂ ಸೂಕ್ತವಾದರೂ ಶಿವರಾತ್ರಿಯ (ಫೆಬ್ರವರಿ 2ನೇ ವಾರ) ಜಾತ್ರೆಯ ಸಂದರ್ಭ ಅತ್ಯುತ್ತಮ. ಸಾಮಾನ್ಯವಾಗಿ ಅಕ್ಟೋಬರ್‌ ತಿಂಗಳಿನಿಂದ ಫೆಬ್ರವರಿವರೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X