ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮಘಟ್ಟಕ್ಕೆ ಹಾನಿಯಾದರೆ, ದಕ್ಷಿಣ ಭಾರತಕ್ಕೇ ಅಪಾಯ : ಹೆಗಡೆ

By Staff
|
Google Oneindia Kannada News

ಬೆಂಗಳೂರು : ಪಶ್ಚಿಮ ಘಟ್ಟದ ಯಾವುದೇ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂದು ಸರಕಾರಕ್ಕೆ ಒತ್ತಾಯಿಸಿ, ಸೋಮವಾರ ಸಾಹಿತಿಗಳು ಕೈಗೊಂಡ ನಿರ್ಣಯಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ವ್ಯಾವಹಾರಿಕ ಉದ್ದೇಶಗಳಿಗಾಗಿ ಪಶ್ಚಿಮ ಘಟ್ಟವನ್ನು ಅಪವಿತ್ರ್ಯಗೊಳಿಸುವ ಕೆಲಸವನ್ನು ಇನ್ನಾದರೂ ತಡೆಗಟ್ಟದಿದ್ದಲ್ಲಿ ಗಣಿಕಾರಿಕೆಯ ದುಷ್ಪರಿಣಾಮವನ್ನು ಇಡೀ ದಕ್ಷಿಣ ಭಾರತವೇ ಅನುಭವಿಸಬೇಕಾಗಬಹುದು ಎಂದು ಮಂಗಳವಾರ ಕನ್ನಡ.ಇಂಡಿಯಾ ಇನ್‌ಫೋ.ಕಾಂ ಕಳುಹಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಅವರು ಎಚ್ಚರಿಸಿದ್ದಾರೆ.

ಸಾಹಿತಿಗಳ ಒತ್ತಾಯಕ್ಕೆ ಇಡೀ ನಾಡಿನ ಜನತೆ ಬೆಂಬಲ ನೀಡಿ, ಈ ಅಕ್ರಮ ಗಣಿಗಾರಿಕೆ ಕೊನೆಗೊಳ್ಳುವಂತಾಗಬೇಕೆಂದು ಅವರು ಆಶಿಸಿದ್ದಾರೆ. ಅನಿವಾರ್ಯ ಕಾರಣಗಳಿಂದ ಸೋಮವಾರದ ಋಜುವಾತು ವೇದಿಕೆಯ ಸಭೆಯಲ್ಲಿ ಪಾಲ್ಗೊಳ್ಳಲಾಗದಿದ್ದುದಕ್ಕೆ ವಿಷಾದ ವ್ಯಕ್ತಪಡಿಸಿರುವ ಹೆಗಡೆ ಪಶ್ಚಿಮ ಘಟ್ಟಗಳ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ಹೋರಾಟದಲ್ಲಿ ತಾವೂ ಒಂದಾಗುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಚಿನ್ನ ಸಿಕ್ಕರೂ ಗಣಿಗಾರಿಕೆ ಬೇಡ : ಸೋಮವಾರ ಶಾಸಕರ ಭವನದಲ್ಲಿ ಋಜುವಾತು ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶತಾಯುಷಿ ಪ್ರೊ. ಎ.ಎನ್‌. ಮೂರ್ತಿರಾವ್‌, ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸ ರಾವ್‌, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿ ಯು.ಆರ್‌. ಅನಂತಮೂರ್ತಿ ಅವರು, ಪಶ್ಚಿಮ ಘಟ್ಟದಲ್ಲಿ ಚಿನ್ನ ಸಿಕ್ಕರೂ ಗಣಿಗಾರಿಕೆಗೆ ಅವಕಾಶ ಬೇಡ ಎಂದು ಸರಕಾರವನ್ನು ಆಗ್ರಹಿಸಿದ್ದರು.

ತುಂಗಾ ಮೂಲ ಉಳಿಸಿ ಹೋರಾಟದಲ್ಲಿ ನಾಡಿನ ಗಣ್ಯರು, ಸಾಹಿತಿಗಳು, ಪರಿಸರ ಪ್ರೇಮಿಗಳು ಒಂದಾಗಿ ಪರಿಸರ ರಕ್ಷಣೆಗೆ ಹೋರಾಡುತ್ತಿದ್ದಾರೆ. ಸೋಮವಾರದ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಡಾ. ಎಂ. ಚಿದಾನಂದ ಮೂರ್ತಿ, ಡಾ. ಚಂದ್ರಶೇಖರ ಕಂಬಾರ, ಡಾ. ಸುಮತೀಂದ್ರ ನಾಡಿಗ್‌, ಡಾ. ಸಿದ್ಧಲಿಂಗಯ್ಯ, ನಿವೃತ್ತ ಪ್ರಧಾನ ಅರಣ್ಯಸಂರಕ್ಷಕ ಪರಮೇಶ್ವರಪ್ಪ ಹಾಗೂ ನೂರಾರು ಪರಿಸರ ಪ್ರೇಮಿಗಳು ಪಾಲ್ಗೊಂಡಿದ್ದರು.

(ಇನ್‌ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X