ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈವಿಕ ತಂತ್ರಜ್ಞಾನಕ್ಕೆ ಸ್ವದೇಶಿ ಟಚ್‌ ನೀಡಲು ತಜ್ಞರವರದಿ ಶಿಫಾರಸ್ಸು

By Staff
|
Google Oneindia Kannada News

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳು ಬಂಡವಾಳಿಗರನ್ನು ಆಕರ್ಷಿಸಲು ಸೌಹಾರ್ದಯುತವಾಗಿ ಪ್ರಯತ್ನಿಸಬೇಕು ಮತ್ತು ರಾಜ್ಯ ಜೈವಿಕ ತಂತ್ರಜ್ಞಾನ ಸಂಹಿತೆಯಲ್ಲಿ ಸ್ವದೇಶೀ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜ್ಯದ ಮಿಲೇನಿಯಂ ಬಯೋಟೆಕ್‌ ಪಾಲಿಸಿ ಕುರಿತ ತಜ್ಞರ ಅಧ್ಯಯನ ವರದಿ ಸರಕಾರಕ್ಕೆ ಶಿಫಾರಸು ಮಾಡಿದೆ.

ಜೈವಿಕ ತಂತ್ರಜ್ಞಾನ ಸಂಹಿತೆಯನ್ನು ಪರಿಷ್ಕರಿಸಿ ಅದನ್ನು ಜೈವಿಕ ತಂತ್ರಜ್ಞಾನದ ರಾಷ್ಟ್ರೀಯ ಕಾರ್ಯಸೂಚಿಯನ್ನಾಗಿ ಪರಿವರ್ತಿಸುವಂತೆ ಸಂಸದೀಯ ವ್ಯವಹಾರಗಳ ಸಂಸ್ಥೆಯು ನಡೆಸಿದ ಅಧ್ಯಯನ ವರದಿಯು ಸಲಹೆ ಮಾಡಿದೆ. ಈಗಿರುವ ಸಂಹಿತೆಯು ಪಾಶ್ಚಾತ್ಯ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿದ್ದು, ಅದರಲ್ಲಿ ದೇಶೀಯ ಚಿಂತನೆಗಳನ್ನು ಅಳವಡಿಸುಕೊಳ್ಳುವುದು ಈಗಿನ ಅಗತ್ಯ ಎಂದು ರಾಜ್ಯ ವಿಶ್ವವಿದ್ಯಾಲಯಗಳ ಪ್ರೊಫೆಸರುಗಳನ್ನು ಒಳಗೊಂಡ 30 ಮಂದಿ ತಜ್ಞರ ಸಮಿತಿ ಶಿಫಾರಸು ಮಾಡಿದೆ.

ಅಸಮಗ್ರವಾಗಿರುವ ರಾಜ್ಯ ಜೈವಿಕ ತಂತ್ರಜ್ಞಾನ ಸಂಹಿತೆ

ಕೈಗಾರಿಕೆ, ಆರೋಗ್ಯ, ಕೃಷಿ ಮತ್ತು ಪಶುಸಂಗೋಪನೆಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ಜೈವಿಕ ತಂತ್ರಜ್ಞಾನ ಸಂಹಿತೆಯಲ್ಲಿ ಸಾಕಷ್ಟು ತೊಡರುಗಳಿವೆ. ಅಲ್ಲದೆ ದೇಶೀಯ ಕಂಪೆನಿಗಳು ಹಾಗೂ ಬಹುರಾಷ್ಟ್ರೀಯ ಕಂಪೆನಿಗಳ ನಡುವಿನ ಸ್ಪರ್ಧೆ ಗುಣಾತ್ಮಕವಾಗಿಲ್ಲ ಎಂಬ ವಿಷಯ ಸಂಹಿತೆಯಲ್ಲಿ ಉಲ್ಲೇಖವಾಗಿಲ್ಲ ಎಂದು ವರದಿ ಆಕ್ಷೇಪಿಸಿದೆ.

ರಾಜ್ಯ ವಿಶ್ವವಿದ್ಯಾಲಯಗಳು, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದ ಪಾತ್ರ ವಹಿಸುತ್ತವೆ ಎಂಬುದನ್ನು ಸಂಹಿತೆಯು ಮರೆತಿದೆ. ಜೈವಿಕ ತಂತ್ರಜ್ಞಾನ ಪರಿಣತರನ್ನು ತರಬೇತುಗೊಳಿಸಲು ವಿಶ್ವ ವಿದ್ಯಾಲಯಗಳು ಕೋರ್ಸ್‌ಗಳನ್ನು ಮತ್ತು ಅಧ್ಯಯನ ಕೇಂದ್ರಗಳನ್ನು ತೆರೆಯಬಹುದು. ಅದಕ್ಕಾಗಿ ಪ್ರಯೋಗಾಲ ಮುಂತಾದ ಸೌಕರ್ಯಗಳನ್ನು ಒದಗಿಸುವ ಕುರಿತು ಸಂಹಿತೆಯಲ್ಲಿ ಚಕಾರವೂ ಉಲ್ಲೇಖವಾಗಿಲ್ಲವಾದ್ದರಿಂದ ಈ ಸಂಹಿತೆ ಸಮಗ್ರವಾಗಿಲ್ಲ ಎಂದು ವರದಿ ರಾಜ್ಯ ಜೈವಿಕ ತಂತ್ರಜ್ಞಾನ ಸಂಹಿತೆಯನ್ನು ದೂರಿದೆ.

ನಾಗರಿಕರ ದೈನಂದಿನ ಅಗತ್ಯಗಳ ಬಗ್ಗೆ ಮರೆವು

ಬೌದ್ಧಿಕ ಆಸ್ತಿ ಹಕ್ಕು, ಜೈವಿಕ ಸಂರಕ್ಷಣೆಯ ಬಗೆಗೂ ಬಿಟಿ ಪಾಲಿಸಿ ಏನನ್ನೂ ಹೇಳುವುದಿಲ್ಲ . ಇದು ಪೇಟೆಂಟ್‌ ಸಮಸ್ಯೆಯನ್ನು ಹುಟ್ಟುಹಾಕಬಹುದು. ಪಾಶ್ಚಾತ್ಯ ಜೈವಿಕ ತಂತ್ರಜ್ಞಾನ ಸಂಹಿತೆಯ ನಕಲಿನಂತಿರುವ ರಾಜ್ಯ ಜೈವಿಕ ತಂತ್ರಜ್ಞಾನ ಸಂಹಿತೆಯು ಜನರ ದೈನಂದಿನ ಅಗತ್ಯಗಳನ್ನು ಪರಿಗಣಿಸಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆಗಳು ಎದುರಾಗುವುದಾಗಿ ಅಧ್ಯ ಯನ ವರದಿಯು ಅಭಿಪ್ರಾಯ ಪಟ್ಟಿದೆ.

ಬಡತನ ನಿವಾರಣೆಗೆ ಬಯೋಟೆಕ್ನಾಲಜಿ ಹೇಗೆ ಸಹಕರಿಸಬೇಕು ಎನ್ನುವುದನ್ನು ಸಂಹಿತೆಯು ವಿವರಿಸುವುದಿಲ್ಲವಾದ್ದರಿಂದ ಬಿಟಿ ಪಾಲಿಸಿಯನ್ನು ಅಭಿವೃದ್ಧಿಯ ಸೂತ್ರ ಎಂದು ಕರೆಯುವುದರಲ್ಲಿ ಅರ್ಥವೇ ಇಲ್ಲ ಎಂದಿರುವ ಅಧ್ಯಯನ ಸಮಿತಿಯ ವರದಿಯು ರಾಜ್ಯ ಬಿಟಿ ಪಾಲಿಸಿಯು ಅಗತ್ಯವಾಗಿ ಅಳವಡಿಸಿಕೊಳ್ಳಬೇಕಾದ ಅಂಶಗಳನ್ನೂ ಸೂಚಿಸಿದೆ.

ಆ ಪ್ರಕಾರ ಈಗಿರುವ ತೊಡರುಗಳನ್ನು ನಿವಾರಿಸುವುದಲ್ಲದೆ, ಈ ಕೆಳಗಿನ ಅಂಶಗಳನ್ನು ಸಂಹಿತೆಯಲ್ಲಿ ಸೇರಿಸಿಕೊಳ್ಳಬೇಕು.

  • ಬಯೋಟೆಕ್‌ ಕಂಪೆನಿಗಳಿಗೆ ಸಂಬಂಧಿಸಿದಂತೆ ಆರ್ಥಿಕ ಸಂಸ್ಥೆಗಳು ಮತ್ತು ವಿಶ್ವ ಬ್ಯಾಂಕ್‌ನ ಪಾತ್ರವೇನು ಎಂಬುದು ಸಂಹಿತೆಯಲ್ಲಿ ಉಲ್ಲೇಖವಾಗಬೇಕು. ಈ ಕಂಪೆನಿಗಳು ಜೈವಿಕ ತಂತ್ರಜ್ಞಾನ ಪರಿಣತರನ್ನು ರೂಪಿಸಲು ಆಯೋಜಿಸುವ ತರಗತಿಗಳಿಗೆ ನಿಧಿ ಒದಗಿಸಬೇಕು.
  • ಜೈವಿಕ ತಂತ್ರಜ್ಞಾನದ ಸಮಗ್ರ ಕೋರ್ಸ್‌ಗಳನ್ನು ಪದವಿ ತರಗತಿಗಳಲ್ಲೇ ಅಳವಡಿಸುವುದು.
  • ವಿಶ್ವ ವಿದ್ಯಾಲಯ ಮತ್ತು ಬಯೋಟೆಕ್ನಾಲಜಿ ಕ್ಷೇತ್ರದ ನಡುವಿನ ವ್ಯವಹಾರಗಳನ್ನು ನೋಡಿಕೊಳ್ಳಲು ಮತ್ತು ಬಯೋಟೆಕ್‌ ಪಾಲಿಸಿಯನ್ನು ಕಾರ್ಯಗತಗೊಳಿಸಲು ಪ್ರತ್ಯೇಕ ಸೆಲ್‌ ಸ್ಥಾಪಿಸಬೇಕು.
(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X