ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ್ರಾ ಶೃಂಗಸಭೆ: ನನಸಾಗದ ಬಾಂಧವ್ಯ, ಗಟ್ಟಿಗೊಳ್ಳದ ಬೆಸುಗೆ

By Staff
|
Google Oneindia Kannada News

ಆಗ್ರಾ : ಜುಲೈ 16ರ ಸೋಮವಾರ ನಡುರಾತ್ರಿ. ನಿರೀಕ್ಷೆ ಹೊತ್ತು, ಇಡೀ ದಿನ ಕಾದಿದ್ದ ಮಾಧ್ಯಮದವರ ದಂಡು ಕೊನೆಗೂ ಪಾಕ್‌ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಅಮರ್‌ ವಿಲಾಸ್‌ ಹೊಟೇಲಿನಿಂದ ಹೊರಬಂದದ್ದನ್ನು ಕಂಡಿತು. ಮತ್ತೆ ಭೇಟಿಯಾಗೋಣ ಎಂದು ಪ್ರಧಾನಿ ವಾಜಪೇಯಿ ಅವರಿಗೆ ಹೇಳಿದ ಮುಷರ್ರಫ್‌ ಏನೂ ಮಾತಾಡದೆ ಕಾರು ಹತ್ತಿದರು ; ಅವರ ಮುಖಭಾವ ಸಾಕಷ್ಟು ಮಾತಾಡಿತು ! ಆ ಹೊತ್ತಿಗೆ ಆಗ್ರಾ ಶೃಂಗಸಭೆ ಕುಸಿದುಬಿದ್ದುದು ಸ್ಪಷ್ಟವಾಗಿತ್ತು .

ಪ್ರೇಮಸೌಧದ ತಾಣದಲ್ಲಿ ಬಾಂಧವ್ಯದ ಬೆಸುಗೆ ಕನಸಾಗಿಯೇ ಉಳಿಯಿತು. ಶೃಂಗಸಭೆಯ ಮೊದಲ ದಿನ ಭಾನುವಾರ ಮುಷರ್ರಫ್‌ ನಗುನಗುತ್ತಲೇ ಇದ್ದರು. ಸೋಮವಾರ ಬೆಳಗ್ಗೆ ಮಾಧ್ಯಮದ ಸಂಪಾದಕರ ಪ್ರಶ್ನೆಗಳ ಸುರಿಮಳೆಗೆ ಉತ್ತರಿಸಿದಾಗಲೂ ಹಸನ್ಮುಖಿಯಾಗಿದ್ದರು. ಆದರೆ ಸೋಮವಾರ ರಾತ್ರಿ 12 ಗಂಟೆಗೆ ಅವರ ಮುಖದಲ್ಲಿ ನಿರಾಸೆ ಅವುಡುಗಚ್ಚಿತ್ತು, ಹುಬ್ಬುಗಳ ನಡುವಿನ ಅಂತರ ತುಂಬಾ ಕಡಿಮೆಯಾಗಿತ್ತು. ಅಷ್ಟು ಹೊತ್ತಿಗಾಗಲೇ ಆಗ್ರಾ ಶೃಂಗಸಭೆ ಸಂಪೂರ್ಣ ವಿಫಲವಾಗಿತ್ತು.

ಕಾಶ್ಮೀರ ವಾದ ಮೊದಲು ಬಗೆಹರಿಯಬೇಕು ಎಂಬ ಪಟ್ಟು ಮುಷರ್ರಫ್‌ ಅವರದು. ಗಡಿಯಾಚೆ ತರಪೇತಿ ಪಡೆದು ಕಾಶ್ಮೀರದಲ್ಲಿ ರಕುತದ ಹೊಳೆ ಹರಿಸುತ್ತಿರುವ ಭಯೋತ್ಪಾದಕರ ಮಟ್ಟಹಾಕಿ, ಈ ಸಮಸ್ಯೆಗೆ ಪೂರ್ಣವಿರಾಮ ಹಾಕಬೇಕೆಂಬುದಕ್ಕೆ ವಾಜಪೇಯಿ ಆದ್ಯತೆ. ನಾಲ್ಕು ಸುತ್ತಿನ ಮಾತುಕತೆಯಲ್ಲಿ ಕಾಶ್ಮೀರ ಮತ್ತು ವಿದೇಶೀ ಪ್ರಚೋದಿತ ಭಯೋತ್ಪಾದನೆಗಳ ವಿಷಯಗಳಷ್ಟೇ ಚರ್ಚೆಯಾದದ್ದು.

ಸೋಮವಾರ ಸಂಜೆ ಆಗ್ರಾ ಘೋಷಣೆಯ ಕರಡು ಸಿದ್ಧ ಮಾಡುವ ಕೆಲಸ ನಡೆಯಿತಾದರೂ, ಪಾಕ್‌ ಅಧ್ಯಕ್ಷರು ಅದಕ್ಕೆ ಸಹಿ ಹಾಕದೆಯೇ ಸ್ವದೇಶಕ್ಕೆ ವಾಪಸ್ಸಾಗುತ್ತಿದ್ದಾರೆ ಎಂದು ಪಾಕ್‌ ಸರ್ಕಾರದ ವಕ್ತಾರ ಅನ್ವರ್‌ ಮಹಮದ್‌ ಸುದ್ದಿಗಾರರಿಗೆ ತಿಳಿಸಿದರು. ಮಾತುಕತೆ ವಿಫಲವಾಯಿತು. ಮಂಗಳವಾರ ಬೆಳಗ್ಗೆ 10 ಗಂಟೆಗೆ ಇಲ್ಲಿಯೇ ಸುದ್ದಿಗೋಷ್ಠಿ ನಡೆಯಲಿದೆ ಎಂದು ಹೇಳಿದ ಭಾರತದ ವಿದೇಶಾಂಗ ವಕ್ತಾರೆ ನಿರುಪಮಾ ರಾವ್‌ ಸುದ್ದಿಗಾರರಿಗೆ ಹೇಳಿದರು.

ಮುಷರ್ರಫ್‌ ಮುಂದೇನು ಮಾಡುವರು?
ಭಾರತಕ್ಕೆ ಬರುವ ಮುನ್ನ ತಮ್ಮನ್ನು ತಾವೇ ಪಾಕಿಸ್ತಾನದ ಅಧ್ಯಕ್ಷರೆಂದು ಘೋಷಿಸಿಕೊಂಡ ಮುಷರ್ರಫ್‌ ಶೃಂಗಸಭೆಯಲ್ಲಿ ಯಶಸ್ಸು ಕಾಣುವುದು ಅತಿ ಮುಖ್ಯವಾಗಿತ್ತು. ಸೋಮವಾರ ರಾತ್ರಿ ಅವರಿಗೆ ಅದು ದಕ್ಕಲಿಲ್ಲ ಎಂಬ ವಿಷಯ ಕೇಳುತ್ತಿದ್ದಂತೆಯೇ, ಕರಾಚಿ ಮತ್ತು ಇಸ್ಲಾಮಾಬಾದ್‌ಗಳಲ್ಲಿ ಪ್ರತಿಭಟನೆಯ ಸೊಲ್ಲೆದ್ದ ವರದಿಗಳು ಹೊರಬಿದ್ದಿವೆ. ಇಂಥಾ ಪರಿಸ್ಥಿತಿಯಲ್ಲಿ ತಮ್ಮ ರಾಜಕೀಯ ಭವಿತವ್ಯ ಹಸನಾಗಿಸಿಕೊಳ್ಳಲು ಮುಷರ್ರಫ್‌ ಏನು ಮಾಡುವರೆಂಬ ಕುತೂಹಲ ರಾಜಕೀಯ ಪಂಡಿತರಲ್ಲಿ ಮೂಡಿದೆ.

ಶೃಂಗಸಭೆ ವೈಫಲ್ಯಕ್ಕೆ ಭಾರತವೇ ಕಾರಣ : ಕಾಶ್ಮೀರ ವಿಷಯದಲ್ಲಿ ಮುಷರ್ರಫ್‌ ಒಡ್ಡಿದ ಪ್ರಸ್ತಾವನೆಗಳಿಗೆ ಸಾಕಷ್ಟು ಚರ್ಚೆಯ ನಂತರವೂ ಭಾರತದ ಪ್ರಧಾನಿ ವಾಜಪೇಯಿ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸದ ಕಾರಣ ಆಗ್ರಾ ಶೃಂಗಸಭೆ ವಿಫಲವಾಗಿದೆ ಎಂದು ಪಾಕಿಸ್ತಾನದ ನಿಯೋಗದ ಕೆಲವು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಅಮೆರಿಕ ಶ್ಲಾಘನೆ : ಶೃಂಗಸಭೆ ವಿಫಲವೇ ಆಗಿರಬಹುದು. ಆದರೆ, ಪಾಕಿಸ್ತಾನ ಹಾಗೂ ಭಾರತ ದೇಶಗಳು ಚರ್ಚೆಗೆ ಕುಳಿತದ್ದೇ ಮಹತ್ವದ ಹಾಗೂ ಆಶಾದಾಯಕ ಸಂಗತಿ. ಇಂತಹ ಉನ್ನತ ಮಟ್ಟದ ಮಾತುಕತೆಗಳು ನಡೆಯುವುದರಿಂದ ಸಮಸ್ಯೆ ಇಂದಲ್ಲ ನಾಳೆ ಬಗೆ ಹರಿಯಲಿದೆ ಎಂದು ಅಮೆರಿಕ ಅಧ್ಯಕ್ಷ ಜಾರ್ಜ್‌ ಡಬ್ಲ್ಯು. ಬುಷ್‌ ಅವರ ವಕ್ತಾರ ಪ್ರತಿಕ್ರಿಯಿಸಿದ್ದಾರೆ.

ಶೃಂಗಸಭೆ ವಿಫಲವಾದದ್ದಾರೂ ಯಾಕೆ?

ವಾಜಪೇಯಿ ಭಾರತದ ನಿಲುವನ್ನು ಬಲವಾಗಿ ಪ್ರತಿಪಾದಿಸಿದರು. 1993ರ ಮುಂಬಯಿ ಬಾಂಬ್‌ ಸ್ಫೋಟದ ರೂವಾರಿ ದಾವೂದ್‌ ಇಬ್ರಾಹಿಂ ಹಾಗೂ ಇಂಡಿಯನ್‌ ಏರ್‌ಲೈನ್ಸ್‌ ವಿಮಾನ ಅಪಹರಿಸಿದ ಆರೋಪಿಗಳನ್ನು ಭಾರತಕ್ಕೆ ಒಪ್ಪಿಸಿ ಎಂಬ ಒತ್ತಾಯ ವಾಜಪೇಯಿ ಕೇಳಿದ ವಿಷಯಗಳಲ್ಲಿ ಅತಿ ಮುಖ್ಯವಾದವು. ಇವಕ್ಕೆ ಮುಷರ್ರಫ್‌ ನಕಾರಾತ್ಮಕ ಪ್ರತಿಕ್ರಿಯೆ ನೀಡಿದರು ಎನ್ನಲಾಗುತ್ತಿದೆ.

ಕಾಶ್ಮೀರ ಸಮಸ್ಯೆ ಭಾರತಕ್ಕೆ ನಮ್ಮತನದ ವಿಷಯವಾದರೆ, ಪಾಕ್‌ಗೆ ಸ್ವಾತಂತ್ರ್ಯ ಚಳವಳಿಯ ಸ್ವರೂಪದ್ದು. ಹೀಗಾಗಿ ವಾಜಪೇಯಿ ಹಾಗೂ ಮುಷರ್ರಫ್‌ ಇಬ್ಬರೂ ಕೆಲವು ವಿಷಯಗಳಲ್ಲಿ ಪಟ್ಟು ಸಡಿಲಿಸಿಲ್ಲವಾದ್ದರಿಂದ ಶೃಂಗಸಭೆ ವಿಫಲವಾಗಿದೆ ಎಂದು ಆಗ್ರಾದಲ್ಲಿನ ರಾಜಕೀಯ ಅಧಿಕಾರಿಗಳು ಹೇಳುತ್ತಿದ್ದಾರೆ.

1972ರಲ್ಲಿ ಸಿಮ್ಲಾ ಶೃಂಗಸಭೆಯ ವೈಫಲ್ಯ ಈಗ ಮರುಕಳಿಸಿದೆ. ಇದು ಭಾರತ- ಪಾಕ್‌ ನಡುವೆ ವಿಫಲವಾಗುತ್ತಿರುವ ನಾಲ್ಕನೇ ಶೃಂಗಸಭೆ. ಬರುವ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಮುಷರ್ರಫ್‌- ವಾಜಪೇಯಿ ಮತ್ತೆ ಭೇಟಿಯಾಗುವ ಸಂಭವವಿದೆ. ಆದರೆ ಕಾಶ್ಮೀರದ ರಕುತದ ಕೋಡಿಗೆ ಕಡಿವಾಣ ಎಂತು? ಇದಕ್ಕೆ ಉತ್ತರ ಸಿಗುವುದಾದರೂ ಎಂದು?

What do you think about this article?

ಮುಖಪುಟ / ಆಗ್ರಾ ಶೃಂಗಸಭೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X