• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ವೇತಶಿಲಾ ಪ್ರೇಮ ಮಂದಿರ

By Staff
|

ಮೊಗಲರ ಕಾಲದ ಐತಿಹಾಸಿಕ ಸ್ಮಾರಕಗಳ ತವರಾದ ಆಗ್ರಾ, ಯಮುನಾ ನದಿ ದಂಡೆಯ ಮೇಲೆ ಹುಣ್ಣಿಮೆಯ ಚಂದ್ರನಂತೆ ಕಂಗೊಳಿಸುವ ಶ್ವೇತ ಶಿಲೆಯ ಪ್ರೇಮ ಮಂದಿರಗಳ ತವರು. ವಿಶ್ವವಿಖ್ಯಾತವಾದ ತಾಜ್‌ಮಹಲ್‌ ಅಷ್ಟೇ ಅಲ್ಲದೆ, ಅಕ್ಬರನ ಸಮಾಧಿ, ಫತೇಪುರ್‌ ಸಿಕ್ರಿ, ಸಿಕಂದರಾ, ಆಗ್ರಾ ಫೋರ್ಟ್‌ ಮೊದಲಾದ ಹತ್ತಾರು ಪ್ರೇಕ್ಷಣೀಯ ಸ್ಥಳಗಳೂ ಇಲ್ಲಿವೆ.

1526ರಲ್ಲಿ ಈ ಶಹರು ಮೊಗಲ್‌ ಸಾಮ್ರಾಜ್ಯದ ಸಂಸ್ಥಾಪಕನಾದ ಬಾಬರನ ತೆಕ್ಕೆಗೆ ಬಂತು. 1571ರಲ್ಲಿ ಅಕ್ಬರ್‌ ಇಲ್ಲಿ ಕೋಟೆಯನ್ನು ಕಟ್ಟಿಸಿ ಆಗ್ರಾ ಪಟ್ಟಣವನ್ನು ಅಭಿವೃದ್ಧಿಪಡಿಸಿದ. ಶಹಜಹಾನ್‌ ಮತ್ತು ಜಹಾಂಗೀರ್‌ ಕೋಟೆಗೆ 16 ಪ್ರವೇಶ ದ್ವಾರಗಳ ಆವರಣ ಗೋಡೆ ನಿರ್ಮಿಸಿದರು.

ಎಲ್ಲಕ್ಕಿಂತಲೂ ಮಿಗಿಲಾಗಿ ಶಹಜಹಾನನು ತನ್ನ ಪ್ರೀತಿಯ ಪತ್ನಿ ಮಮ್ತಾಜಳಿಗಾಗಿ ಕಟ್ಟಿಸಿದ ಭವ್ಯ ಶ್ವೇತ ಅಮೃತ ಶಿಲೆಯ ಪ್ರೇಮ ಮಂದಿರದಿಂದಾಗಿ ಇದು ಇಡೀ ವಿಶ್ವದ ಗಮನ ಸೆಳೆಯಿತು. ತಾಜಮಹಲ್‌ ಅನ್ನು ವರ್ಣಿಸಲು ಪದಗಳೇ ಸಿಗುವುದಿಲ್ಲ. ಕಳೆದ ವರ್ಷ ಭಾರತಕ್ಕೆ ಭೇಟಿ ಇತ್ತ ಬಿಲ್‌ ಕ್ಲಿಂಟನ್‌ ಕೂಡ ಹೀಗೆ ಉದ್ಗರಿಸಿದ್ದರು.

ಆಗ್ರಾ, ಸುಂದರ ಸ್ಮಾರಕಗಳ ನಗರವಷ್ಟೇ ಅಲ್ಲ ಕುಶಲ ಕಲೆಯ ತವರು. 1803ರಲ್ಲಿ ಈಸ್ಟ್‌ ಇಂಡಿಯಾ ಕಂಪನಿಯ ವಶಕ್ಕೆ ಬಂದ ನಂತರ ಆಗ್ರಾವನ್ನು ಬ್ರಿಟಿಷರು ವಾಯವ್ಯ ಪ್ರಾಂತದ ರಾಜಧಾನಿ ಎಂದೇ ಘೋಷಿಸಿದ್ದರು. ಆ ಕಾಲದಲ್ಲಿ ಇದು ಕರಕುಶಲ ವಸ್ತುಗಳ ಉತ್ಪಾದನೆಗೆ ಹೆಸರುವಾಸಿಯಾಯಿತು.

ತಾಜ್‌ಮಹಲ್‌ : ಇಲ್ಲಿ ಏನೆಲ್ಲಾ ಇದ್ದರೂ, ಆಗ್ರಾ ಎಂದೊಡನೆ ನೆನಪಿನಲ್ಲಿ ಉಳಿಯುವುದು ತಾಜ್‌ ಮಹಲ್‌ ಹಾಗೂ ಅಲ್ಲಿ ದೊರಕುವ ಸಿಹಿ ಪೇಟ. ಶಹಜಹಾನನು ಕಟ್ಟಿಸಿದ ಈ ಅಮೃತಶಿಲೆಯ ಕಲಾ ಮಂದಿರ ನಿರ್ಮಾಣಕ್ಕೆ 22 ವರ್ಷಗಳೇ ತಗುಲಿದವು. 1653ರಲ್ಲಿ ಈ ಕಾರ್ಯ ಮುಕ್ತಾಯವಾಯಿತು. ಪಾರಸಿ ವಾಸ್ತುಶಿಲ್ಪಿಯಾದ ಉಸ್ತಾದ್‌ ಇಸಾ ಈ ಸ್ಮಾರಕದ ನಕ್ಷೆ ತಯಾರಿಸಿದ್ದ.

ನಾಲ್ಕೂ ಕಡೆ ಕೆಂಪುಕಲ್ಲಿನ ಗೋಡೆಗಳಿಂದ ಕೂಡಿದ್ದು, ಮಧ್ಯೆ ಶ್ವೇತವರ್ಣದಿಂದ ಕಂಗೊಳಿಸುವ ಈ ಪ್ರೇಮಸೌಧವನ್ನು ಹುಣ್ಣಿಮೆಯ ಬೆಳದಿಂಗಳಲ್ಲಿ ಕಾಣುವುದು ಒಂದು ಅವಿಸ್ಮರಣೀಯ ಅನುಭವ. ಹೀಗಾಗೆ, ಪ್ರತಿ ಹುಣ್ಣಿಮೆಗೆ ನಾಲ್ಕು ದಿನ ಮೊದಲು ಮತ್ತು ಆನಂತರ ಮಧ್ಯರಾತ್ರಿಯವರೆಗೂ ತಾಜ್‌ಮಹಲ್‌ ಅನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ.

ಇತರ ದಿನಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4ಗಂಟೆವರೆಗೆ ಪ್ರವೇಶ ಶುಲ್ಕ ನೀಡಿ ತಾಜ್‌ಮಹಲ್‌ ವೀಕ್ಷಿಸಬಹುದು. ಶುಕ್ರವಾರ ಮಾತ್ರ ತಾಜ್‌ ಮಹಲ್‌ ಹಾಗೂ ಇತರ ಸ್ಮಾರಕಗಳ ವೀಕ್ಷಣೆಗೆ ಶುಲ್ಕ ಇಲ್ಲ. ಆಗ್ರಾಕ್ಕೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಇಲ್ಲಿ ವಾಸ್ತವ್ಯಕ್ಕೆ ಹಲವು ಅನುಕೂಲಗಳಿವೆ.

ವಸತಿ : ಜೈಪೀ ಪ್ಯಾಲೆಸ್‌ ಹೊಟೆಲ್‌, ತಾಜ್‌ ವ್ಯೂ, ಆಗ್ರಾ ಅಶೋಕ್‌, ಮಾನಸಿಂಗ್‌, ಅಮರ್‌ ಹೋಟೆಲ್‌, ಗ್ರಾಂಡ್‌, ಪಾರ್ಕ್‌ ವ್ಯೂ ಮೊದಲಾದ ಪ್ರತಿಷ್ಠಿತ ಹೊಟೆಲ್‌ಗಳಲ್ಲದೆ, ಉತ್ತರ ಪ್ರದೇಶ ಪ್ರವಾಸೋದ್ಯಮ ನಿಗಮದ ಅತಿಥಿಗೃಹಗಳೂ ಇಲ್ಲಿವೆ.

ದೆಹಲಿಯಿಂದ 210 ಕಿ.ಮೀಟರ್‌ ದೂರದಲ್ಲಿರುವ ಈ ಸ್ಥಳದಿಂದ ರಾಷ್ಟ್ರೀಯ ಹೆದ್ದಾರಿ 2,3 ಹಾಗೂ 11ರಲ್ಲಿ ದೇಶದ ನಾನಾ ಭಾಗಗಳಿಗೆ ಬಸ್‌ ಸೌಕರ್ಯವೂ ಇದೆ. ಇಲ್ಲಿಂದ ಗ್ವಾಲಿಯರ್‌, ಜೈಪುರ, ದೆಹಲಿ, ಹರಿದ್ವಾರ, ಮಥುರಾ, ಬೃಂದಾವನ ಮೊದಲಾದ ಕಡೆಗಳಿಗೆ ನೇರ ಬಸ್‌ ಸೌಕರ್ಯ ಇದೆ. ಟೂರಿಸ್ಟ್‌ ಬಸ್‌ಗಳೂ ದೊರಕುತ್ತವೆ.

ಕರ್ನಾಟಕದಿಂದ ಹೋಗುವವರು ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ಹೊರಟಾಗ ದೆಹಲಿಗೆ ಹೋಗುವ ಮೊದಲು ಆಗ್ರಾದಲ್ಲೇ ಇಳಿಯಬಹುದು. ದೆಹಲಿ, ಖಜುರಾಹೋ, ಕಾಶಿಯಿಂದ ಆಗ್ರಾಕ್ಕೆ ಇಂಡಿಯನ್‌ ಏರ್‌ಲೈನ್ಸ್‌ನ ವಿಮಾನ ಸೌಲಭ್ಯವೂ ಉಂಟು.

ಆಗ್ರಾಕ್ಕೆ ಭೇಟಿ ಕೊಟ್ಟವರು, ತಾಜ್‌ ಮಹಲ್‌ ಸೌಂದರ್ಯವನ್ನು ಸವಿದು, ಆಗ್ರಾಕೋಟೆ, ರಾಮ್‌ಬಾಗ್‌, ಸ್ವಾಮಿ ಬಾಗ್‌, ಸಿಕಂದರಾ, ಎತ್‌ಮಾದುದ್ದೌಲಾ, ಅಕ್ಬರ್‌ ಸಮಾಧಿ ನೋಡಬಹುದು.

ಆಗ್ರಾ ಕೋಟೆ : ಮೊಗಲ್‌ ಸಾಮ್ರಾಟ ಅಕ್ಬರ್‌ 1565ರಲ್ಲಿ ಯಮುನಾ ನದಿ ತೀರದಿ ಕಟ್ಟಿಸಿದ ಬೃಹತ್‌ ಭವ್ಯ ಕೋಟೆಯೇ ಆಗ್ರಾ ಕೋಟೆ. ವಿಶ್ವದ ಸರ್ವಶ್ರೇಷ್ಠ ಕೋಟೆಗಳಲ್ಲಿ ಒಂದೆಂದು ಹೆಸರಾಗಿರುವ ಈ ಕೋಟೆಯ ಒಳಗೆ ಅನೇಕ ಮಹಲುಗಳಿವೆ. ಮಹಲುಗಳ ಪ್ರಾಕಾರಗಳು ಸುವರ್ಣಲೇಪಿದ ಕುಸುರಿ ಕೆತ್ತನೆಗಳಿಂದ ಶ್ರೀಮಂತವಾಗಿದೆ. ಕೋಟೆಯ ನಿರ್ಮಾಣಕ್ಕೆ ಕೆಂಪು ಕಲ್ಲುಗಳನ್ನು ಬಳಸಲಾಗಿದೆ.

ಎತ್‌ಮಾದುದ್ದೌಲಾ : ಈ ಭವ್ಯ ಕಟ್ಟಡವನ್ನು ತಾಜ್‌ಮಹಲ್‌ ಕಟ್ಟುವುದಕ್ಕೆ ಮೊದಲು ಅಂದರೆ 1622 ರಿಂದ 1628ರ ಮಧ್ಯೆ ನಿರ್ಮಿಸಲಾಗಿದೆ. ಅಮೃತ ಶಿಲೆಯ ಈ ಸ್ಮಾರಕವನ್ನು ಜಹಾಂಗೀರನ ಪತ್ನಿ ನೂರ್‌ಜಹಾನ್‌ ತನ್ನ ತಂದೆ ಮಿರ್ಜಾ ಗಯಾಸುದ್ದೀನ್‌ ಬೇಗ್‌ ಸ್ಮರಣಾರ್ಥ ಕಟ್ಟಿಸಿದಳು.

ರಾಮ್‌ಬಾಗ್‌ : 1526ರಲ್ಲಿ ನಿರ್ಮಾಣವಾದ ಈ ಉದ್ಯಾನವನ್ನು ಬಾಬರ್‌ನ ಕೈಗೂಸು. ಇದು ಮೊಗಲ್‌ ಕಲೆಯ ಉತ್ಕೃಷ್ಟ ಮಾದರಿ. ಬಾಬರ್‌ ಹಸಿರು ಕ್ರಾಂತಿಯ ರೂವಾರಿಯಾಗಿ ಈ ತೋಟದಲ್ಲಿ ವಿಶ್ರಾಂತಿ ಪಡೆಯುತ್ತಿದ್ದನಂತೆ. ಉದ್ಯಾನದೊಳಗೆ ಸುಂದರವಾದ ಅಮೃತ ಶಿಲೆಯಿಂದ ನಿರ್ಮಿಸಲಾದ ಕೊಳಗಳಿವೆ.

ಸಿಕಂದರಾ : ಅಕ್ಬರ್‌ ಆರಂಭಿಸಿದ ಈ ಭವ್ಯ ಸ್ಮಾರಕವನ್ನು ಅವನ ಮಗ ಜಹಾಂಗೀರ್‌ 1613ರಲ್ಲಿ ಪೂರ್ಣಗೊಳಿಸಿದ. ಇಲ್ಲಿ ಅಕ್ಬರ್‌ ಚಕ್ರವರ್ತಿಯ ಸಮಾಧಿಯೂ ಇದೆ. ಇದು ಹಿಂದೂ ಮುಸ್ಲಿಂ ವಾಸ್ತು ಶಿಲ್ಪದ ಸಂಗಮ. ಆಗ್ರಾ - ಮಥುರಾ ಮಾರ್ಗದಲ್ಲಿರುವ ಈ ಸ್ಥಳವನ್ನು ನೋಡಲೇ ಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more