ಹೃದ್ರೋಗದ ಮಾಹಿತಿ ಬೇಕೆ? ವೊಕ್ಹಾರ್ಟ್‌ನ ಸಂಚಾರಿ ಘಟಕಕ್ಕೆ ಬನ್ನಿ
ಬೆಂಗಳೂರು : ವೊಕ್ಹಾರ್ಟ್ ತಂದಿದೆ ಸಂಚಾರಿ ಹೃದಯ ಘಟಕ; ದೇಶದಲ್ಲೇ ಪ್ರಥಮ. ಇಲ್ಲಿ ಹೃದ್ರೋಗ ಚಿಕಿತ್ಸೆ ನೀಡುವುದಿಲ್ಲ. ಬದಲಿಗೆ ಹೃದ್ರೋಗ ನಿವಾರಣೆಗೆ ವಹಿಸಬೇಕಾದ ಎಚ್ಚರಿಕೆಗಳನ್ನು ತಿಳಿಹೇಳಲಾಗುತ್ತದೆ.
ಈ ಸಂಚಾರಿ ಹೃದಯ ಘಟಕಗಳಿಗೆ ಸೋಮವಾರ ಚಾಲನೆ ದೊರೆಯಿತು. ಧೂಮಪಾನ, ಮಾನಸಿಕ ಒತ್ತಡ, ಅತಿಯಾದ ಕೊಬ್ಬು, ಮಧುಮೇಹ ಮೊದಲಾದವು ಹೇಗೆ ಹೃದ್ರೋಗಕ್ಕೆ ಎಡೆಮಾಡಿಕೊಡುತ್ತವೆ ? ಈ ಸಮಸ್ಯೆಗಳಿಂದ ಹೊರ ಬರುವುದು ಹೇಗೆ ? ಎಂಬುದನ್ನು ಸಂಚಾರಿ ಘಟಕಗಳು ವಿವರಿಸಿ, ಜನಜಾಗೃತಿ ಮೂಡಿಸಲಿವೆ ಎಂದು ವೊಕ್ಹಾರ್ಟ್ ಆಸ್ಪತ್ರೆಯ ಜನರಲ್ ಮ್ಯಾನೇಜರ್ ವಿಶಾಲ್ ಬಾಲಿ ಸುದ್ದಿಗಾರರಿಗೆ ಹೇಳಿದರು.
ಫೋರ್ಸೀ ಮಲ್ಟಿಮೀಡಿಯಾ ಸಿದ್ಧಪಡಿಸಿರುವ ಸಂಚಾರಿ ಘಟಕದಲ್ಲಿ ಟಚ್ ಸ್ಕಿೃೕನ್ ಇದೆ. ಹೃದ್ರೋಗದ ಬಗ್ಗೆ ಇಂಚಿಂಚೂ ಮಾಹಿತಿ ಈ ಪರದೆ ಮೇಲೆ ಮೂಡುತ್ತದೆ. ರಸಪ್ರಶ್ನೆ ಕೂಡ ಉಂಟು. ಇದರಿಂದ ಜನರಿಗೆ ತಮಗೆ ಅರಿವಿಲ್ಲದಂತೆ ಹೇಗೆ ಮಾನಸಿಕ ತೊಳಲಾಟಕ್ಕೆ ಸಿಲುಕಿರುತ್ತಾರೆ ಎಂಬುದರ ಅರಿವು ಮೂಡಲಿದೆ. ಜೊತೆಗೆ ಇಂಥಾ ಒತ್ತಡಗಳನ್ನು ತಹಬಂದಿಗೆ ತಂದುಕೊಳ್ಳುವುದು ಹೇಗೆ ಎಂಬುದೂ ಗೊತ್ತಾಗುತ್ತದೆ. ಬರೇ ಪರದೆಯ ಮೇಲೆ ತೋರಿಸಿ, ಕಲಿತರೆ ಕಲಿಯಿರಿ ಬಿಟ್ಟರೆ ಬಿಡಿ ಎನ್ನುವಂಥಾದ್ದಲ್ಲ ಈ ಘಟಕ. ಹೃದ್ರೋಗ ತಜ್ಞರ ಉಪನ್ಯಾಸ ಕಾರ್ಯಕ್ರಮಗಳನ್ನೂ ಘಟಕದಲ್ಲಿ ಕೇಳಬಹುದು. ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಲು ಇದೊಂದು ತಂತಾನೇ ಒದಗಿ ಬಂದಿರುವ ಅವಕಾಶ.
ಕಾಂಪ್ಯಾಕ್, ಡಿಜಿಟಲ್ ಹಾಗೂ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮದಲ್ಲಿ ಈಗಾಗಲೇ ಸಂಚಾರಿ ಘಟಕಗಳನ್ನು ಇಡಲಾಗಿದೆ. ಒಂದು ವಾರದ ನಂತರ ಇವು ಬೇರೆ ಸಂಸ್ಥೆಗಳಿಗೆ ಸಂಚರಿಸಲಿವೆ. ಈ ಪ್ರಕ್ರಿಯೆ ಹೀಗೇ ಮುಂದುವರಿಯಲಿದ್ದು, ಜನಜಾಗೃತಿ ಮೂಡಿಸಲಿವೆ.
(ಇನ್ಫೋ ವಾರ್ತೆ)