ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಲಂಕಾ ತ್ರಿಕೋನ ಸರಣಿಯಲ್ಲಿ ತೆಂಡೂಲ್ಕರ್‌ ಆಡುವುದಿಲ್ಲ

By Staff
|
Google Oneindia Kannada News

ಮುಂಬೈ : ಜುಲೈ 19ರಿಂದ ಶ್ರೀಲಂಕಾದಲ್ಲಿ ನಡೆಯಲಿರುವ ಒಂದು ದಿನದ ಸರಣಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಆಡುತ್ತಿಲ್ಲ !

ಪಾದದ ತೊಂದರೆಯಿಂದ ಬಳಲುತ್ತಿರುವ ಸಚಿನ್‌ ಭಾರತ ತಂಡದೊಟ್ಟಿಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳುತ್ತಿಲ್ಲ. ಪ್ರಾಯಶಃ ಕೊನೆಯ ಒಂದು ದಿನದ ಪಂದ್ಯದ ವೇಳೆಗೆ ಅವರು ತಂಡವನ್ನು ಸೇರಲಿದ್ದಾರೆ ಎಂದು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಚಂದು ಬೋರ್ಡೆ ತಿಳಿಸಿದ್ದಾರೆ.

ಸೋಮವಾರ ಕ್ರಿಕೆಟ್‌ ತಂಡದ ಆಯ್ಕೆಗಾಗಿ ನಡೆದ ಸಭೆಯ ನಂತರ ಬೋರ್ಡೆ ಈ ವಿಷಯ ಪ್ರಕಟಿಸಿದರು. ಸಚಿನ್‌ ಅವರಿಗೆ ಗಂಭೀರ ಸ್ವರೂಪದ ತೊಂದರೆಯೇನೂ ಆಗಿಲ್ಲ. ಒಂದೆರಡು ವಾರ ಕಾಲ ಅವರಿಗೆ ವಿಶ್ರಾಂತಿ ಬೇಕಿದೆ ಅಷ್ಟೆ ಎಂದು ತಂಡದ ನಾಯಕ ಸೌರವ್‌ ಗಂಗೂಲಿ ಹೇಳಿದರು.

ಹಾಗಾದರೆ ಸಚಿನ್‌ ಜಾಗವನ್ನು ಯಾರು ತುಂಬಲಿದ್ದಾರೆ ? ಚಂದು ಸರ್‌ಪ್ರೆೃಸ್‌ ಕೊಟ್ಟಿದ್ದಾರೆ. ಮಧ್ಯಪ್ರದೇಶದ ಅಮಯ್‌ ಖುರಾಸಿಯಾ ಸಚಿನ್‌ ಜಾಗೆ ತುಂಬಲಿದ್ದಾರೆ. ಕೇಂದ್ರ ವಲಯ ಮತ್ತು ಮಧ್ಯಪ್ರದೇಶ ತಂಡಗಳ ಪರ ಆರಂಭಿಕ ಆಟಗಾರನಾಗಿರುವ ಖುರಾಸಿಯಾ ಒಬ್ಬ ಕ್ಲೀನ್‌ ಹಿಟ್ಟರ್‌. 15 ಓವರ್‌ಗಳ ಕ್ಷೇತ್ರ ರಕ್ಷಣೆ ಮಿತಿಯನ್ನು ಒಳ್ಳೆ ಅವಕಾಶವನ್ನಾಗಿ ಪರಿವರ್ತಿಸಬಲ್ಲ ಆಟಗಾರ ಎಂಬ ಕಾರಣಕ್ಕೆ ಅವರನ್ನು ಆರಿಸಿದ್ದೇವೆ ಎಂದು ಚಂದು ಸಮರ್ಥನೆ ಕೊಟ್ಟರು.

ದಿನೇಶ್‌ ಮೊಂಗಿಯಾ ಹಾಗೂ ಹರ್ವಿಂದರ್‌ ಸಿಂಗ್‌ಗೆ ಖೊಕ್‌ ನೀಡಲಾಗಿದೆ. ಹರ್ವಿಂದರ್‌ ಟೆಸ್ಟ್‌ಗೆ ಸರಿ. ಒಂದು ದಿನದ ಪಂದ್ಯಗಳಿಗೆ ಸಾಲದು. ದಿನೇಶ್‌ ಮೊಂಗಿಯಾ ಹಾಗೂ ಯುವರಾಜ್‌ ಸಿಂಗ್‌- ಈ ಇಬ್ಬರಲ್ಲಿ ಯಾರು ಹಿತವರು ಎಂದು ಚರ್ಚೆ ನಡೆಯಿತು. ಫೀಲ್ಡಿಂಗ್‌ನಲ್ಲಿ ದಿನೇಶ್‌ಗಿಂತ ಚುರುಕು ಎಂಬ ಕಾರಣಕ್ಕೆ ಯುವರಾಜ್‌ ಸಿಂಗ್‌ ಆಯ್ಕೆಯಾದರು. ಜಿಂಬಾಬ್ವೆಯಲ್ಲಿ ತೋರಿದ ಉತ್ತಮ ಪ್ರದರ್ಶನದ ಕಾರಣ ಇನ್ನುಳಿದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಬೋರ್ಡೆ ಹೇಳಿದರು.

ಜೋಷಿ ಹಾಗೂ ಮುರಳಿ ಕಾರ್ತಿಕ್‌ ಹೆಸರು ಪ್ರಸ್ತಾಪ ಮಾಡಲಾಯಿತಾದರೂ ಆಯ್ಕೆ ಮಾಡಲಿಲ್ಲ. ರಾಹುಲ್‌ ಸಾಂಘ್ವಿ ಆಯ್ಕೆಯಾಗಿದ್ದಾರೆ. ಇನ್ನು ಸಮೀರ್‌ ದಿಘ ಅವರನ್ನು ವಿಶ್ವ ಕಪ್‌ ದೃಷ್ಟಿಯಿಂದ ಪರ್ಮನೆಂಟಾಗಿ ಇಟ್ಟುಕೊಳ್ಳುವಿರಾ ಎಂಬ ಸುದ್ದಿಗಾರರ ಪ್ರಶ್ನೆಗೆ, ವಯಸ್ಸು ಆಟಕ್ಕೆ ಅಡ್ಡವಲ್ಲ. ಇಂಗ್ಲೆಂಡ್‌ನ ಅಲೆಕ್‌ ಸ್ಟುವರ್ಟ್‌ ಅವರ ವಯಸ್ಸು 37. ಅವರ ಆಟ ಚೆನ್ನಾಗೇ ಇದೆಯಲ್ಲಾ ಎಂದು ಚಂದು ಬೋರ್ಡೆ ಮರು ಪ್ರಶ್ನಿಸಿದರು.

ಒಂದು ದಿನದ ತಂಡವನ್ನು ಮಾತ್ರ ಈಗ ಆರಿಸಲಾಗಿದ್ದು, ಜುಲೈ 28ರಂದು ಟೆಸ್ಟ್‌ ತಂಡವನ್ನು ಪ್ರಕಟಿಸಲಾಗುವುದು. ಶ್ರೀಲಂಕಾ- ಭಾರತ- ನ್ಯೂಜಿಲೆಂಡ್‌ ನಡುವಣ ತ್ರಿಕೋನ ಒಂದು ದಿನದ ಪಂದ್ಯಗಳ ಸರಣಿ ಜುಲೈ 19ಕ್ಕೆ ಶುರುವಾಗುತ್ತದೆ, ಆಗಸ್ಟ್‌ 2ರಂದು ಫೈನಲ್ಸ್‌ ನಡೆಯಲಿದೆ. ಭಾರತದ ತಂಡ ಇಂತಿದೆ...

ಸೌರವ್‌ ಗಂಗೂಲಿ (ನಾಯಕ), ರಾಹುಲ್‌ ದ್ರಾವಿಡ್‌ (ಉಪ ನಾಯಕ), ವಿವಿಎಸ್‌ ಲಕ್ಷ್ಮಣ್‌, ಹೇಮಾಂಗ್‌ ಬದಾನಿ, ಆಶಿಶ್‌ ನೆಹ್ರಾ, ಹರ್ಭಜನ್‌ ಸಿಂಗ್‌, ಜಹೀರ್‌ ಖಾನ್‌, ಅಜಿತ್‌ ಅಗರ್ಕರ್‌, ವೀರೇಂದ್ರ ಶೆಹ್ವಾಗ್‌, ರೀತಿಂದರ್‌ ಸಿಂಗ್‌ ಸೋಧಿ, ಸಮೀರ್‌ ದಿಘ (ವಿಕೆಟ್‌ ಕೀಪರ್‌), ದೇಬಶಿಶ್‌ ಮೊಹಾಂತಿ, ರಾಹುಲ್‌ ಸಾಂಘ್ವಿ, ಯುವರಾಜ್‌ ಸಿಂಗ್‌, ಅಮಯ್‌ ಖುರಾಸಿಯಾ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X