ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಲ್‌-ಮುಷರ್ರಫ್‌ ಶೃಂಗ ಸಭೆ ಕ್ರಿಕೆಟ್‌ಗೆ ಮರುಜೀವ ತಂದೀತೇ?

By Staff
|
Google Oneindia Kannada News
ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ಕ್ರೀಡಾ ಮುಖ್ಯಸ್ಥರು ಈ ಹೊತ್ತು ಪ್ರಾರ್ಥಿಸುತ್ತಿದ್ದಾರೆ- ಭಾರತದ ಪ್ರಧಾನಿ ವಾಜಪೇಯಿ ಹಾಗೂ ಪಾಕ್‌ ಅಧ್ಯಕ್ಷ ಪವ್ರೇಜ್‌ ಮುಷರ್ರಫ್‌ ನಡುವಣ ಶೃಂಗ ಸಭೆ ಯಾವುದೇ ಕಾರಣಕ್ಕೂ ಮುರಿಯದಿರಲಿ ಎಂದು.

ಕ್ರೀಡಾ ಪೋಟಿಯಲ್ಲಿ ಹೆಸರು ವಾಸಿಯಾಗಿರುವ ಭಾರತ- ಪಾಕ್‌ ನಡುವಣ ಆಟಗಳು ಬಹುತೇಕ ತಣ್ಣಗಾಗಿವೆ. ಅದರಲ್ಲೂ, ಕ್ರಿಕೆಟ್ಟಂತೂ ಆಡುವ ಹಾಗೆಯೇ ಇಲ್ಲ ಎಂಬ ಸೊಲ್ಲು. ಕಾಶ್ಮೀರಿ ಉಗ್ರವಾದಿಗಳಿಗೆ ಇಸ್ಲಾಮಾಬಾದ್‌ ಎಲ್ಲಿವರೆಗೆ ಬೆನ್ನುತಟ್ಟುತ್ತದೋ ಅಲ್ಲಿವರೆಗೆ ಪಾಕಿಸ್ತಾನದೊಟ್ಟಿಗೆ ಆಟ ಕೂಡದು ಎಂಬ ಪಟ್ಟು ಭಾರತದ್ದು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ಕ್ರಿಕೆಟ್‌ ತಂಡ ಪಾಕ್‌ ಟೆಸ್ಟ್‌ ಪಂದ್ಯಗಳ ಪ್ರವಾಸವನ್ನು ರದ್ದು ಪಡಿಸಿದ್ದರಿಂದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅನುಭವಿಸಿದ ಪ್ರಾಯೋಜನಾ ನಷ್ಟ 16 ದಶಲಕ್ಷ ಡಾಲರ್‌ಗಳು. ಆ ಪ್ರಾಯೋಜನೆ ಒಪ್ಪಂದ ಮಾಡಿಕೊಂಡಿದ್ದುದು ಭಾರತದ ಟೆಲಿವಿಷನ್‌ ಕಂಪನಿ ಎಂಬುದು ಇಲ್ಲಿನ ಇನ್ನೊಂದು ಮುಖ್ಯ ಅಂಶ.

ಉಭಯ ರಾಷ್ಟ್ರಗಳ ಕ್ರೀಡಾ ಅಧಿಕಾರಿಗಳು ಭಾರತ- ಪಾಕ್‌ ನಡುವೆ ಕ್ರಿಕೆಟ್‌ ಸೇರಿದಂತೆ ಇತರೆ ಕ್ರೀಡೆಗಳು ಇನ್ನು ಕೆಲವೇ ತಿಂಗಳಲ್ಲಿ ಪುನರಾರಂಭವಾಗಲಿ ಎಂಬ ಆಶಯದಲ್ಲಿದ್ದಾರೆ. ದುಡ್ಡು ತರುವ, ಜನರ ತುಡಿತಗಳಿಗೆ ಸ್ಪಂದಿಸುವ ಕ್ರೀಡೆಗಳು ರಾಜಕೀಯ ನಾಟಕದ ಕಾರಣ ತೆರೆಮರೆಗೆ ಸರಿಯುವುದು ತರವಲ್ಲ ಎಂಬುದು ಅಧಿಕಾರಿಗಳ ಅಂಬೋಣ.

ಬರಲಿದೆ ಭಾರತ- ಪಾಕ್‌ ಕ್ರೀಡಾ ಸಮಯ

ಬರುವ ಸೆಪ್ಟೆಂಬರ್‌ನಲ್ಲಿ ಭಾರತ ಪಾಕಿಸ್ತಾನದ ನೆಲದಲ್ಲಿ 12 ವರ್ಷಗಳ ನಂತರ ಕ್ರಿಕೆಟ್‌ ಆಡಲಿದೆ. ಏಷ್ಯಾ ಕಪ್‌ನ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ ತಂಡಗಳಲ್ಲದೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಕೂಡ ಸೆಣಸಲಿವೆ. ಸೌತ್‌ ಆಫ್ರಿಕನ್‌ ಫೆಡರೇಷನ್‌ ಗೇಮ್ಸ್‌ಗೆ ಭಾರತಕ್ಕೆ ಬುಲಾವು ಬಂದಿದೆ. ಇದು ಇಸ್ಲಾಮಾಬಾದ್‌ನಲ್ಲಿ ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿದೆ. ನವೆಂಬರ್‌ ತಿಂಗಳಲ್ಲಿ ಆಫ್ರೋ- ಏಷ್ಯನ್‌ ಪಂದ್ಯಗಳು ದೆಹಲಿಯಲ್ಲಿ ಪ್ರಾರಂಭವಾಗಲಿದ್ದು, ಪಾಕ್‌ ಕೂಡ ಅದರಲ್ಲಿ ಆಡಲಿದೆ.

ಲಾಹೋರ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಹಾಕಿಯನ್ನು ಮುಷರ್ರಫ್‌ ಮುಂದೂಡಲಿ ಎಂಬುದು ಭಾರತ ಒಲಂಪಿಕ್‌ ಒಕ್ಕೂಟ (ಐಓಎ) ದ ಬಯಕೆ. ಪಾಕಿಸ್ತಾನ ಹಾಗೂ ದಕ್ಷಿಣ ಕೊರಿಯಾ ತಂಡಗಳೂ ಟ್ರೋಫಿಗಾಗಿ ಆಡಲಿ ಎಂಬುದೇ ಇದರ ಹಿಂದಿನ ಉದ್ದೇಶ.

ಮುಷರ್ರಫ್‌...ಚಾಂಪಿಯನ್ಸ್‌ ಟ್ರೋಫಿ ಮುಂದೂಡಿ : ಚಾಂಪಿಯನ್ಸ್‌ ಟ್ರೋಫಿ ಹಾಗೂ ಆಫ್ರೋ- ಏಷ್ಯನ್‌ ಗೇಮ್ಸ್‌ ಒಂದೇ ವೇಳೆಯಲ್ಲಿ ನಡೆಯಲಿದೆ. ಪಾಕಿಸ್ತಾನ ಹಾಗೂ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ ಯಾವುದೇ ಕಾರಣಕ್ಕೂ ಕ್ರೀಡೆಗಳನ್ನು ಮುಂದೂಡಲು ಸಿದ್ಧವಿಲ್ಲ. ನಾವು ಮುಷರ್ರಫ್‌ ಅವರನ್ನು ಚಾಂಪಿಯನ್ಸ್‌ ಟ್ರೋಫಿಯನ್ನು ಮುಂದೂಡುವಂತೆ ಕೋರುತ್ತೇವೆ ಎನ್ನುತ್ತಾರೆ ಐಓಎಯ ಅಧ್ಯಕ್ಷ ಸುರೇಶ್‌ ಕಲ್ಮಾಡಿ.

ಉಮಾ ಭಾರತಿ ಉವಾಚ : ಭಾರತ- ಪಾಕಿಸ್ತಾನ ಕ್ರಿಕೆಟ್ಟಿಗೆ ಒಲ್ಲೆ ಎನ್ನುತ್ತಲೇ ಬಂದಿರುವ ಕ್ರೀಡಾ ಸಚಿವೆ ಉಮಾ ಭಾರತಿ ಕೂಡ ವಾಜಪೇಯಿ- ಮುಷರ್ರಫ್‌ ಶೃಂಗ ಸಭೆಯನ್ನೇ ಇದಿರು ನೋಡುತ್ತಿದ್ದಾರೆ. ವಾಜಪೇಯಿ ಹಾಗೂ ಮುಷರ್ರಫ್‌ ತಮ್ಮ ಮಾತುಕತೆ ವೇಳೆ ಕ್ರಿಕೆಟ್ಟಿನ ವಿಷಯಕ್ಕೇ ಮೊದಲ ಆದ್ಯತೆ ಕೊಡಲಿ ಎಂಬುದು ತಮ್ಮ ಬಯಕೆ ಎನ್ನುತ್ತಾರೆ ಅವರು. ಭಾರತ ಸೆಪ್ಟೆಂಬರ್‌ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಬೇಕು ಅನ್ನುವ ಆಸೆಯಿದ್ದರೆ ಪಾಕಿಸ್ತಾನ ಕೂಡ ಚಾಂಪಿಯನ್ಸ್‌ ಟ್ರೋಫಿ ಹಾಕಿಯನ್ನು ಮುಂದೂಡಬೇಕು ಎಂಬ ಪುಗ್ಗ ಬಿಟ್ಟು, ಹಳೆ ವರಸೆಯನ್ನೂ ಮೆರೆದಿದ್ದಾರೆ ಉಮಾ ಭಾರತಿ.

1999ರ ಕಾರ್ಗಿಲ್‌ ಯುದ್ಧದ ನಂತರ ಭಾರತ- ಪಾಕ್‌ ಒಂದೇ ಒಂದು ಬಾರಿ ಕ್ರಿಕೆಟ್‌ ಆಡಿವೆ. ಕಳೆದ ವರ್ಷ ಮೇ ತಿಂಗಳಲ್ಲಿ ಬಾಂಗ್ಲಾದಲ್ಲಿ ನಡೆದ ಏಷ್ಯಾ ಕಪ್‌ನ ಪಂದ್ಯ ಅದಾಗಿತ್ತು. ಈಗ ಪ್ರಧಾನಿ ಹಾಗೂ ಮುಷರ್ರಫ್‌ ಮಾತುಕತೆ ಈ ಸಮಸ್ಯೆಗೆ ಪೂರ್ಣವಿರಾಮ ಹಾಕುವರು ಎಂಬ ನಿರೀಕ್ಷೆಯಲ್ಲಿದ್ದೇವೆ. ಅಕಸ್ಮಾತ್‌ ನಾವಂದುಕೊಂಡಂತೆ ಆಗದಿದ್ದರೆ ಅದು ದುರಾದೃಷ್ಟ ಎನ್ನುತ್ತಾರೆ ಬಿಸಿಸಿಐ ಅಧಿಕಾರಿಗಳು.

ಕಾರ್ಗಿಲ್‌ ಯುದ್ಧದ ಕರಾಳ ಛಾಯೆ ಬಿದ್ದದ್ದು ಕ್ರಿಕೆಟ್‌ ಮೇಲೆಯೇ. ಇತರೆ ಕ್ರೀಡೆಗಳನ್ನು ಆಡಲು ಭಾರತ ಸರ್ಕಾರ ತಕರಾರೆತ್ತಿಲ್ಲ. ಅತರರಾಷ್ಟ್ರೀಯ ಫೀಲ್ಡ್‌ ಹಾಕಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಫೈನಲ್ಸ್‌ನಲ್ಲಿ ಗೆದ್ದಿದ್ದು ಇದಕ್ಕೆ ಒಂದು ಉದಾಹರಣೆ.

ಕ್ರಿಕೆಟ್‌ಗೇ ಯಾಕೆ ಈ ಗತಿ ?

ಭಾರತದ ವಿದೇಶಾಂಗ ಸಚಿವ ಜಸ್ವಂತ್‌ ಸಿಂಗ್‌ ಇದಕ್ಕೆ ಕೊಡುವ ಉತ್ತರ ಹೀಗಿದೆ- ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತ- ಪಾಕ್‌ ನಡುವೆ ಕ್ರಿಕೆಟ್‌ ಬರೇ ಆಟವಲ್ಲ. ಅದೊಂದು ಭಾವನಾತ್ಮಕ ಸಮರ. ಹೀಗಾಗಿ ಅವಘಡಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಸರ್ಕಾರ ಕ್ರಿಕೆಟ್‌ ವಿಷಯದಲ್ಲಿ ಖಡಕ್‌ ಆಗಬೇಕಾಯಿತು. ಕ್ರಿಕೆಟ್‌ ಅಧಿಕಾರಿಗಳು ಭಾರತ- ಪಾಕ್‌ನ ದ್ವಿಪಕ್ಷೀಯ ಸಂಬಂಧ ವರ್ಧನೆಗೆ ಪರ್ಯಾಯ ಮಾರ್ಗ ಕಂಡುಕೊಂಡಿದ್ದಾರೆ. ಇದು ಹಣ ಕೂಡ ತಂದುಕೊಡಲಿದೆ.

ಬಹು ರಾಷ್ಟ್ರೀಯ ಟೂರ್ನಿಗಳ ಆಯೋಜನೆಯೇ ಈ ಪರ್ಯಾಯ ಮಾರ್ಗ. ಏಷ್ಯನ್‌ ಟೆಸ್ಟ್‌ ಚಾಂಪಿಯನ್‌ಷಿಪ್ಸ್‌ ನಡೆಸಲು ಭಾರತ ಸರ್ಕಾರದ ತಕರಾರು ಇಲ್ಲವಂತೆ. ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ನಾಲ್ಕು ರಾಷ್ಟ್ರಗಳ ಟೂರ್ನಿಯಾಂದನ್ನು ಬರುವ ವರ್ಷ ಆಯೋಜಿಸುವ ಪ್ರಸ್ತಾವನೆಯೂ ಇದೆ. ಜಿಂಬಾಬ್ವೆ ಹಾಗೂ ವೆಸ್ಟಿಂಡೀಸ್‌ ಇತರ ಎರಡು ತಂಡಗಳು.

1987 ಹಾಗೂ 1996ರ ವಿಶ್ವ ಕಪ್‌ ಕ್ರಿಕೆಟ್ಟನ್ನು ಉಭಯ ರಾಷ್ಟ್ರಗಳು ಜಂಟಿಯಾಗಿ ಆಯೋಜಿಸಿರುವುದರಿಂದ ಕ್ರಿಕೆಟ್‌ ಆಡುವುದರಲ್ಲಿ ತಪ್ಪೇನೂ ಇಲ್ಲ. ಭಾರತ ಹಾಗೂ ಪಾಕಿಸ್ತಾನದ ಜನರಿಗೆ ಬೇಕಿರುವುದೂ ಇದೇ ಎಂಬುದು ಐಸಿಸಿ ಮುಖ್ಯಸ್ಥ ಜಗನ್ಮೋಹನ ದಾಲ್ಮಿಯಾ ಅವರ ಅಭಿಪ್ರಾಯ.

ಒಟ್ಟಿನಲ್ಲಿ ಭಾರತ ಹಾಗೂ ಪಾಕಿಸ್ತಾನದ ಜನರಿಗೆ, ಕ್ರೀಡಾ ಅಧಿಕಾರಿಗಳಿಗೆ ಕ್ರಿಕೆಟ್‌ ಬೇಕು. ಇದು ಪ್ರಧಾನಿ ವಾಜಪೇಯಿ ಹಾಗೂ ಮುಷರ್ರಫ್‌ ಅವರ ಮನಮುಟ್ಟಬೇಕಷ್ಟೆ.

(ಎಎಫ್‌ಪಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X