ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಂಖ್ಯಾಫಲಕ : ಸರ್ಕಾರಿ ವಾಹನಗಳ ಮೇಲೇಕೆ ಪೊಲೀಸರ ಪ್ರೀತಿ?

By Staff
|
Google Oneindia Kannada News

ಬೆಂಗಳೂರು : ಆಟೋರಿಕ್ಷಾವಾಲಾಗಳು ಮತ್ತೆ ಸೊಲ್ಲೆತ್ತಿದ್ದಾರೆ. ಸಂಖ್ಯಾಫಲಕ ಕೇವಲ ಕನ್ನಡದಲ್ಲಿ ಇರುವ ಸರ್ಕಾರಿ ವಾಹನಗಳನ್ನು ಪೊಲೀಸರು ಕಂಡೂ ಕಾಣದಂತಿರುತ್ತಾರೆ. ನಮಗಾದರೆ ಜುಲ್ಮಾನೆ. ಇದು ತರವಲ್ಲ ಎಂಬುದು ಅವರ ದೂರು.

ಸಂಖ್ಯಾಫಲಕ ಕೇವಲ ಕನ್ನಡದಲ್ಲಿ ಇರುವ ಒಂದು ಆಟೋಗೆ 300 ರುಪಾಯಿ ದಂಡ ವಿಧಿಸಿದ ಪೊಲೀಸರು, ಮರು ಕ್ಷಣವೇ ಹಾದುಹೋದ ಕನ್ನಡ ಸಂಖ್ಯಾಫಲಕ ಇರುವ ಸರ್ಕಾರಿ ವಾಹನದ ಮುಲಾಜಿಗೇ ಹೋಗುವು-ದಿಲ್ಲ. ವಿಧಾನಸೌಧ ಹಾಗೂ ಕೆ.ಆರ್‌.ಸರ್ಕಲ್ಲಲ್ಲಿ ಒಂದೈದು ನಿಮಿಷ ನಿಂತುಕೊಳ್ಳಿ. ಸಂಖ್ಯಾ ಫಲಕ ಕನ್ನಡದಲ್ಲಿ ಮಾತ್ರ ಇರುವ ಮಂತ್ರಿ ಮಹೋದಯರ, ಸರ್ಕಾರಿ ಅಧಿಕಾರಿಗಳ ಅವೆಷ್ಟು ಕಾರುಗಳು ಹೋಗುತ್ತವೋ ನೋಟ್‌ ಮಾಡಿಕೊಳ್ಳಿ. ಪೊಲೀಸರು ಅವುಗಳನ್ನು ಅಡ್ಡಗಟ್ಟುವ ಗೊಡವೆಗೇ ಹೋಗುವುದಿಲ್ಲ ಎಂದು ಆಟೋ ಚಾಲಕರು ಟೈಮ್ಸ್‌ ಆಫ್‌ ಇಂಡಿಯಾ ಡಾಟ್‌ ಕಾಂಗೆ ತಿಳಿಸಿದ್ದಾರೆ.

ಕ್ಯಾಬಿನೆಟ್‌ ಮಂತ್ರಿಗಳ ಅರ್ಧ ಡಜನ್‌ ಕಾರುಗಳಿಗೆ ಇರುವುದು ಬರೇ ಕನ್ನಡ ಸಂಖ್ಯಾಫಲಕ. ಸರ್ಕಾರಿ ವಾಹನಗಳನ್ನು ನಿಲ್ಲಿಸುವಂತೆ ಯಾರೂ ನಮಗೆ ಆದೇಶ ಕೊಟ್ಟಿಲ್ಲ . ಹಾಗೆ ನಮ್ಮ ವಶಕ್ಕೆ ತೆಗೆದುಕೊಂಡೆವು ಎಂದಿಟ್ಟುಕೊಳ್ಳಿ. ರಾಜಕೀಯದೊತ್ತಡ, ಶಿಫಾರಸ್ಸಿನಿಂದ ವಾಹನಗಳು ಮತ್ತೆ ಓಡುತ್ತವೆ. ನಮ್ಮದೇನೂ ನಡೆಯೋದಿಲ್ಲ ಎನ್ನುತ್ತಾರೆ ಪೊಲೀಸರು.

ಮೋಟಾರು ವಾಹನ ಕಾಯ್ದೆ ಪ್ರಕಾರ ವಾಹನವೊಂದಕ್ಕೆ ಇಂಗ್ಲಿಷ್‌ ಸಂಖ್ಯಾಫಲಕ ಕಡ್ಡಾಯ. ಬೇಕಾದರೆ ಹೆಚ್ಚುವರಿಯಾಗಿ ಕನ್ನಡ ಸಂಖ್ಯಾಫಲಕವನ್ನೂ ಹಾಕಬಹುದು. ಅಪಘಾತ ವಗೈರೆಗಳಾದಾಗ ಸಂಖ್ಯೆ ದಾಖಲಿಸುವುದು ಸುಲಭವಾಗಲಿ ಎಂಬುದಷ್ಟೇ ಇದರ ಹಿಂದಿನ ಉದ್ದೇಶ ಎನ್ನುತ್ತದೆ ಸರ್ಕಾರ. ಇತ್ತೀಚೆಗೆ ಸುಮಾರು 1000 ಆಟೋಗಳಿಗೆ ಕನ್ನಡ ಸಂಖ್ಯಾಫಲಕದ ಕಾರಣಕ್ಕೆ ಜುಲ್ಮಾನೆ ವಿಧಿಸಲಾಗಿದೆ. ಈಗಾಗಲೇ ಹಠಾತ್‌ ಮುಷ್ಕರಗಳನ್ನು ನಡೆಸಿರುವ ಆಟೋ ಚಾಲಕರು ಸರ್ಕಾರಿ ವಾಹನಗಳಿಗೆ ವಿನಾಯ್ತಿ ನೀಡುವುದು ಸರಿಯಲ್ಲ ಎಂದು ಮತ್ತೆ ದನಿಯೆತ್ತಿದ್ದಾರೆ. ಇದು ಮತ್ತೊಂದು ಮುಷ್ಕರಕ್ಕೆ ನಾಂದಿಯಾದೀತು. ಸರ್ಕಾರ ಎಚ್ಚೆತ್ತುಕೊಳ್ಳಲಿ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X