ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರಿಲ್ಲದಿದ್ದರೆ ಬೀರು ಎನ್ನುತ್ತಿದ್ದ ಗರಗವಿಂದುಗುಂಡು ಮುಕ್ತ ಗ್ರಾಮ

By Staff
|
Google Oneindia Kannada News

ಹೊಸಪೇಟೆ : ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಮಳೆ ಕೈಕೊಟ್ಟಿದೆ. ಜನ ಕುಡಿಯುವ ನೀರಿಗೂ ಪರದಾಡುತ್ತಿದ್ದಾರೆ. ಹೆಂಗಸರಂತೂ ಮೈಲುಗಟ್ಟಲೆ ದೂರದಿಂದ ತಲೆಯ ಮೇಲೆ ನೀರು ಹೊತ್ತು ತರುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ನೀರಿಗೆ ಬರವಿದ್ದರೂ, ಹೆಂಡ, ಸಾರಾಯಿಗೆ ಖಂಡಿತಾ ಬರ ಇಲ್ಲ.

ಹೊಸಪೇಟೆ ಬಳಿಯ ಪುಟ್ಟ ಗ್ರಾಮ ಗರಗವೂ ಇದಕ್ಕೆ ಹೊರತಾಗಿರಲಿಲ್ಲ. ಕೇವಲ 2500 ಜನಸಂಖ್ಯೆಯುಳ್ಳ ಪುಟ್ಟ ಗ್ರಾಮದಲ್ಲಿ ದಿನವೂ 300ಕ್ಕೂ ಹೆಚ್ಚು ಪ್ಯಾಕೆಟ್‌ ಸಾರಾಯಿ ಮಾರಾಟವಾಗುತ್ತಿತ್ತು ಎಂದರೆ ಈ ಊರಿನಲ್ಲಿ ಗುಂಡುಹಾಕುವ ಆಸಾಮಿಗಳು ಎಷ್ಟಿದ್ದರು ಎಂಬುದನ್ನು ನೀವೇ ಊಹಿಸಿಕೊಳ್ಳಬಹುದು.

ಕುಡಿತ ಮುಕ್ತ ಗ್ರಾಮ : ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಗರಗ ಒಂದು ಆದರ್ಶ ಗ್ರಾಮವಾಗಿದೆ. ಸಾರಾಯಿ ಮುಕ್ತ ರಾಮ ರಾಜ್ಯವಾಗಿದೆ. ದಿನವೂ ಕುಡಿದು ತೂರಾಡುತ್ತಾ ಮನೆಗೆ ಬಂದು, ಹೆಂಡತಿಗೆ ಹೊಡೆಯುತ್ತಿದ್ದ ಗಂಡ, ಇಂದು ಹೊತ್ತು ಮುಳುಗುವ ಮೊದಲೇ ಸರಿಯಾಗಿ ನಡೆದುಕೊಂಡೇ ಮನೆಗೆ ಬರುತ್ತಾನೆ. ಹೆಂಡತಿಗೆ ಹೊಡೆವ ಬದಲು ಹೂ ಮಲ್ಲೆ ತರುತ್ತಾನೆ.

ಇದ್ದಕ್ಕಿದ್ದಂತೆ ಈ ಊರಿನಲ್ಲೇನಾಯಿತು? ಕುಡಿತ ಬಿಡಿಸುವ ಕ್ರಾಂತಿ ಹೇಗಾಯಿತು ಎಂದು ಆಚ್ಚರಿ ಪಡುತ್ತೀರಾ? ಈ ಕ್ರಾಂತಿ ಆದದ್ದು ಕೇವಲ ಒಬ್ಬ ವ್ಯಕ್ತಿಯಿಂದ ಎಂದರೆ ಆಶ್ಚರ್ಯವಾಗುತ್ತದಲ್ಲವೆ. ಆದರೂ ಇದು ಸತ್ಯ. ಹೊಸಪೇಟೆ ತಾಲೂಕು ಪಂಚಾಯ್ತಿಯ ಅಧ್ಯಕ್ಷ ಪಿ. ರಾಮಪ್ಪ ಅವರು, ಗರಗದ ಗಂಡಂಗಿನಲ್ಲೇ ಸದಾ ಇರುತ್ತಿದ್ದವರ ಮನವೊಲಿಸಿ, ಕುಡಿತದ ಕೆಡುಕುಗಳ ಬಗ್ಗೆ ವಿವರಿಸಿ, ಊರಿನ ಇತರ ಗ್ರಾಮಸ್ಥರ ನೆರವಿನಿಂದ ಇಂದು ಗರಗವನ್ನು ಗುಂಡು ಮುಕ್ತ ಗ್ರಾಮವನ್ನಾಗಿ ಮಾಡಿದ್ದಾರೆ.

ಅಧ್ಯಕ್ಷರ ಉಪದೇಶದಿಂದ ಪ್ರಭಾವಿತರಾದ ಗುಂಡು ಹಾಕುವ ಗಂಡಂದಿರು. ತಾವು ಇನ್ನೆಂದೂ ಸಾರಾಯಿ ಕುಡಿಯುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ತಮ್ಮ ಪತಿದೇವರ ಕುಡಿತದ ಚಟ ಬಿಡಿಸಿದ, ಪಂಚಾಯ್ತಿಯ ಅಧ್ಯಕ್ಷರಿಗೆ ಈ ಗ್ರಾಮದ ಮಹಿಳೆಯರು ಶತಕೋಟಿ ವಂದನೆಗಳನ್ನು ಸಲ್ಲಿಸಿದ್ದಾರೆ.

ಸನ್ಮಾನ: ತಾಲೂಕು ಪಂಚಾಯ್ತಿ ವ್ಯಾಪ್ತಿಯ ಗರಗವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಿದ ಪಂಚಾಯ್ತಿ ಅಧ್ಯಕ್ಷರನ್ನು ಜುಲೈ 5ರ ಗುರುವಾರ ನಡೆದ ಮಾಸಿಕ ಸಭೆಯಲ್ಲಿ ಸನ್ಮಾನಿಸಲಾಯಿತು. ಈ ವಿಷಯವನ್ನು ತಾಲೂಕು ಪಂಚಾಯ್ತಿ ಅಧಿಕಾರಿ ವಿ.ಎನ್‌. ಶಿವಲಿಂಗಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X