ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾರಿ ಯಾವುದಯ್ಯಾ...

By Staff
|
Google Oneindia Kannada News

ಮುಷರ್ರಫ್‌ ಅವರೊಂದಿಗಿನ ಭೇಟಿಗೆ ಹೋಂವರ್ಕ್‌ ಮಾಡಿಕೊಳ್ಳುತ್ತಿದ್ದ ಪ್ರಧಾನಿ ವಿಶ್ರಾಂತಿಗೆ ಜಯಲಲಿತಾ ಹಾಗೂ ಕರುಣಾನಿಧಿ ಅವರ ಕೋಳಿ ಜಗಳದ ಪರಾಕಾಷ್ಠೆ ಕುತ್ತಾಯಿತು. ವಾಜಪೇಯಿ ಈಗ ಸಂದಿಗ್ಧದಲ್ಲಿದ್ದಾರೆ.

ಕರುಣಾನಿಧಿ ಅವರ ಬಂಧನ ಮಾತ್ರವಾಗಿದ್ದರೆ ವಾಜಪೇಯಿ ಅಷ್ಟಾಗಿ ತಲೆ ಕೆಡಿಸಿಕೊಳ್ಳಬೇಕಾಗಿರಲಿಲ್ಲ . ತಮಿಳುನಾಡಿನ ರಾಜಕೀಯ ರಸ್ತೆಗೆ ಬಿದ್ದು ಬಹಳ ದಿನಗಳಾಗಿತ್ತು . ಆದರೆ, ಈ ಬಾರಿ ಕೇಂದ್ರ ಸಚಿವರನ್ನು ಬಂಧಿಸುವ ಮೂಲಕ ಜಯಲಲಿತಾ ಕೇಂದ್ರದ ವಿರುದ್ಧ ಸಡ್ಡು ಹೊಡೆದರು. ಹಿಂದೆಂದೂ ದೇಶದಲ್ಲಿ ಇಂಥಾ ಘಟನೆ ನಡೆದಿರಲಿಲ್ಲ . ಇದನ್ನು ಎಂಥ ಪ್ರಧಾನಿಯಾದರೂ ಅರಗಿಸಿಕೊಳ್ಳುವುದು ಕಷ್ಟವೇ.

ವಾಜಪೇಯಿ ಈಗ ಏನು ಮಾಡುತ್ತಾರೆ ?
ಅವರ ಮುಂದಿರುವುದು ಎರಡೇ ಕ್ರಮ. ಮೊದಲನೆಯದಾಗಿ, ಪರಮಾಪ್ತ ಗೆಳೆಯರೂ, ಎನ್‌ಡಿಎ ಸಂಚಾಲಕರೂ ಆದ ಜಾರ್ಜ್‌ ಸ್ಪಷ್ಟ ನಿಲುವಿನಂತೆ ತಮಿಳುನಾಡಿನ ಮೇಲೆ 356 ನೇ ವಿಧಿಯ ಬ್ರಹ್ಮಾಸ್ತ್ರ ಪ್ರಯೋಗಿಸುವುದು. ಇದನ್ನುಳಿದರೆ- ಜಯಲಲಿತಾ ಸರ್ಕಾರಕ್ಕೆ ಎಚ್ಚರಿಕೆ ನೀಡುವುದು ಹಾಗೂ ಕೇಂದ್ರ ಸಚಿವರ ಬಿಡುಗಡೆಗೆ ಆದೇಶ ನೀಡುವುದು. ಅಂದರೆ, ಶಿಕ್ಷೆ ನೀಡುವುದನ್ನು ಅಥವಾ ಕ್ಷಮಿಸುವುದನ್ನು ಬಿಟ್ಟರೆ ಪ್ರಧಾನಿಗೆ ಬೇರೆ ಕ್ರಮ ಉಳಿದಿಲ್ಲ .

ವಾಜಪೇಯಿ ಅವರದ್ದು ಧರ್ಮ ಸಂಕಟ. ಮುಷರ್ರಫ್‌ ಭೇಟಿ ಸನ್ನಿಹಿತವಾಗುತ್ತಿರುವ ಹೊತ್ತಿನಲ್ಲಿ ಅವರು ಇಂತಹದೊಂದು ಬಿಕ್ಕಟ್ಟನ್ನು ಇಷ್ಟಪಡುವುದಾದರೂ ಹೇಗೆ? ಜಾರ್ಜ್‌ ನೇತೃತ್ವದ ಸತ್ಯಶೋಧಕ ಸಮಿತಿ ಶಿಫಾರಸ್ಸಿನಂತೆ ಅವರು ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ವಿಧಿಸಿದರೆಂದುಕೊಳ್ಳುವ. ಆಗ-

  • ರಾಜ್ಯಸಭೆಯಲ್ಲಿ ಬಹುಮತ ಹೊಂದಿಲ್ಲದ ‘ಎನ್‌ಡಿಎ’ ವಿರೋಧ ಪಕ್ಷಗಳ ಅಸಹಕಾರದಿಂದ ಮುಜುಗರ ಎದುರಿಸಬೇಕಾಗಬಹುದು.
  • ಪ್ರಜಾಪ್ರಭುತ್ವ ವಿರೋಧಿ ಎನ್ನುವ ಆರೋಪವನ್ನು ವಿರೋಧ ಪಕ್ಷಗಳು ಪ್ರಧಾನಿ ತಲೆಗೆ ಕಟ್ಟಬಹುದು. ಈಗಾಗಲೇ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರದಂತೆ ಅಣ್ಣಾಡಿಎಂಕೆ ಹಾಗೂ ಕಾಂಗ್ರೆಸ್‌ ಪಕ್ಷಗಳು ಕೇಂದ್ರ ಸರ್ಕಾರವನ್ನು ಎಚ್ಚರಿಸಿವೆ. ಹಲವು ಕಮ್ಯುನಿಸ್ಟ್‌ ನಾಯಕರು ಮಾತ್ರವಲ್ಲದೆ- ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಪ್ರಧಾನಿಯ ಮಾಜಿ ಸಖ ರಾಮಕೃಷ್ಣ ಹೆಗಡೆ ಕೂಡ ರಾಷ್ಟ್ರಪತಿ ಆಡಳಿತ ಹೇರಿಕೆಗೆ ವಿರೋಧ ಸೂಚಿಸಿದ್ದಾರೆ.
  • ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ಪ್ರಧಾನಿ ವಿರೋಧ ಪಕ್ಷಗಳ ವಿರೋಧವನ್ನು ಕಟ್ಟಿಕೊಂಡಲ್ಲಿ , ಆ ವಿರೋಧ ಮುಷರ್ರಫ್‌ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಿಗೆ ತಲೆನೋವಾಗಿ ಪರಿಣಮಿಸಬಹುದು.
  • ರಾಷ್ಟ್ರಪತಿ ಆಡಳಿತದ ಕುರಿತು ಕೇಂದ್ರ ಸಂಪುಟ ಶಿಫಾರಸ್ಸು ಮಾಡಿದರೆ, ಅದನ್ನು ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ಒಪ್ಪುತ್ತಾರೆಂದು ಖಚಿತವಾಗಿ ಹೇಳುವುದು ಕಷ್ಟ . ಈ ಮುನ್ನ ಬಿಹಾರ ಪ್ರಕರಣದ ಪಾಠವನ್ನು ವಾಜಪೇಯಿ ಮರೆತಿರಲಿಕ್ಕಿಲ್ಲ . ಪ್ರಜಾಪ್ರಭುತ್ವ ವಿರೋಧಿ ಅನಿಸಿದ ಸಂದರ್ಭದಲ್ಲಿ ಪ್ರಶ್ನಿಸಲು ನಾರಾಯಣನ್‌ ಹಿಂಜರಿಯದಿರುವುದು ಈಗಾಗಲೇ ಹಲವಾರು ಸಂದರ್ಭಗಳಲ್ಲಿ ರುಜುವಾತಾಗಿದೆ.
ಸುಮ್ಮನಿದ್ದರೂ ಅಪವಾದ ತಪ್ಪಿದ್ದಲ್ಲ
ರಾಷ್ಟ್ರಪತಿ ಆಡಳಿತ ಹೇರದೆ ಹೋದಲ್ಲಿಯೂ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಮುಜುಗರ ಎದುರಿಸುವುದು ಖಚಿತ. ಇಬ್ಬರು ಕೇಂದ್ರ ಸಚಿವರನ್ನು ಬಂಧಿಸಿರುವಾಗ, ಪ್ರಧಾನಿ ಕಠಿಣ ಕ್ರಮ ಕೈಗೊಳ್ಳದಿದ್ದಲ್ಲಿ ಅದನ್ನು ಅವರ ದೌರ್ಬಲ್ಯವೆಂದು ಭಾವಿಸಲೂ ಸಾಧ್ಯವಿದೆ. ಈ ವಿಷಯವನ್ನೇ ಅನುಕೂಲಕ್ಕೆ ತಕ್ಕಂತೆ ವಿರೋಧ ಪಕ್ಷಗಳು ಬಳಸಿಕೊಳ್ಳಲೂಬಹುದು. ಇದೆಲ್ಲಕ್ಕಿಂತ ಮುಖ್ಯವಾಗಿ ಜಯಲಲಿತಾ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ವಾಜಪೇಯಿ ಹಾಗೂ ಕರುಣಾನಿಧಿ ಮೈತ್ರಿ ಅಬಾಧಿತವಾಗಿ ಉಳಿಯುವುದು ಅನುಮಾನ.

ತಮಿಳುನಾಡಿನ ವಿದ್ಯಮಾನಗಳು ಈ ಹೊತ್ತು ದೇಶದ ಸಮಸ್ಯೆಯಾಗಿ ಉಳಿದಿಲ್ಲ . ಈ ಹೊತ್ತಿನ ಪ್ರತಿಯಾಂದು ಕದಲಿಕೆಗಳೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಕೊನೆಗುಳಿಯುವುದು ಮತ್ತದೇ ಪ್ರಶ್ನೆ , ವಾಜಪೇಯಿ ಏನು ಮಾಡುತ್ತಾರೆ?

ವಾರ್ತಾ ಸಂಚಯ
ಅಡ್ವಾಣಿ ನಿರೀಕ್ಷೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರಕ್ಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X