ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನ ಇಡೀ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಸಂಭವ

By Staff
|
Google Oneindia Kannada News

ನವದೆಹಲಿ : ತಮಿಳುನಾಡಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚಿಸಲು, ಕೇಂದ್ರ ಸಚಿವ ಸಂಪುಟದ ಸಭೆ ಮಂಗಳವಾರ ಸಂಜೆ ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಸಮಾವೇಶಗೊಂಡಿದೆ. ವಿದೇಶಕ್ಕೆ ತೆರಳಿದ್ದ ಗೃಹ ಸಚಿವ ಆಡ್ವಾಣಿ ಅವರ ಆಗಮನ ತಡವಾದ ಕಾರಣ ಸಭೆಯೂ ತಡವಾಗಿ ಆರಂಭವಾಯಿತು.

ತಮಿಳುನಾಡಿನಲ್ಲಿ ನಡೆದ ಘಟನಾವಳಿಗಳಿಗೆ ಸಂಬಂಧಿಸಿದಂತೆ ಅಮೂಲಾಗ್ರವಾಗಿ ನ್ಯಾಯಾಂಗ ತನಿಖೆ ನಡೆಸಲು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ತಮಿಳುನಾಡಿನಲ್ಲಿ 355 ಅಥವಾ 356ನೇ ವಿಧಿಯನ್ವಯ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಕಡಿಮೆ ಎಂದೂ ತಿಳಿದುಬಂದಿದೆ. ಕೇಂದ್ರ ಸಚಿವರೊಂದಿಗೆ ಅನುಚಿತವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಪುಟ ಸಭೆಯಲ್ಲಿ ಒತ್ತಾಯ ಕೇಳಿಬಂದಿದೆ.

ಈ ಮಹತ್ವದ ಸಭೆಯಲ್ಲಿ ಅಟಾರ್ನಿ ಜನರಲ್‌ ಸೋಲಿ ಸ್ವರಾಬ್ಜಿ ಹಾಗೂ ಗೃಹ ಸಚಿವ ಎಲ್‌.ಕೆ. ಆಡ್ವಾಣಿ ಸೇರಿದಂತೆ ಕೇಂದ್ರ ಸಚಿವ ಸಂಪುಟದ ಹಲವು ಸದಸ್ಯರು ಪಾಲ್ಗೊಂಡಿದ್ದಾರೆ. ಈ ಸಭೆಗೂ ಮುನ್ನ ತಮಿಳು ನಾಡಿನ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಲಾಯಿತು.

ಅಡ್ವಾಣಿ ಆಕ್ರೋಶ : ವಿದೇಶ ಪ್ರವಾಸದಿಂದ ಮಂಗಳವಾರ ದೆಹಲಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಎಲ್‌. ಕೆ. ಆಡ್ವಾಣಿ ಅವರು, ತಮಿಳುನಾಡಿನಲ್ಲಿ ನಡೆದ ಘಟನಾವಳಿಗಳ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ಒಂದು ಘಟನೆ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ನಡೆದಿರಲಿಲ್ಲ ಎಂದು ಹೇಳಿದರು.

ಈ ಮಧ್ಯೆ ಲಂಡನ್‌ ಪ್ರವಾಸದಲ್ಲಿದ್ದ ಅಟಾರ್ನಿ ಜನರಲ್‌ ಸೋಲಿ ಸ್ವರಾಬ್ಜಿ ಅವರು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನಿರ್ದೇಶನದ ಮೇರೆಗೆ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ, ದೆಹಲಿಗೆ ಆಗಮಿಸಿದ್ದಾರೆ. ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ಅವರೂ ಪಾಲ್ಗೊಂಡಿದ್ದರು.

ಮದುರೈ ವರದಿ: ಡಿ.ಎಂ.ಕೆ. ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಮೂರು ಸಾವಿರಕ್ಕೂ ಹೆಚ್ಚು ಬಂಧಿತ ಡಿ.ಎಂ. ಕೆ. ಕಾರ್ಯಕರ್ತರು ಮಂಗಳವಾರ ಇಲ್ಲಿ ನ ಕೇಂದ್ರ ಕಾರಾಗೃಹದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಪಿ.ಎಂ.ಕೆ. ನಾಯಕ ಡಾ. ಎಸ್‌. ರಾಮದಾಸ್‌ ಅವರು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕರುಣಾನಿಧ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದು ಕೇವಲ ಮಾನವೀಯತೆಯ ಭೇಟಿ. ಇದಕ್ಕೆ ರಾಜಕೀಯ ಲೇಪ ಹಚ್ಚಬೇಡಿ ಎಂದಷ್ಟೇ ಪತ್ರಕರ್ತರಿಗೆ ತಿಳಿಸಿದರು.

ಕಾಂಗ್ರೆಸ್‌ ವಿರೋಧ : ತಮಿಳುನಾಡು ಸರಕಾರದ ಮೇಲೆ ಕೇಂದ್ರ ಸರಕಾರ ಮಾಡಿರುವ ಅರೋಪಗಳು ನಿಜವೇ ಆಗಿದ್ದರೂ, ರಾಷ್ಟ್ರಪತಿ ಆಳ್ವಿಕೆ ಹೇರುವಷ್ಟು ಬಿಗಡಾಯಿಸಿಲ್ಲ ಎಂದು ಕಾಂಗ್ರೆಸ್‌ ಪಕ್ಷದ ವಕ್ತಾರ ಜೈಪಾಲ ರೆಡ್ಡಿ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದನ್ನು ಕಾಂಗ್ರೆಸ್‌ ವಿರೋಧಿಸುತ್ತದೆ ಎಂದು ಅವರು ಹೇಳಿದ್ದಾರೆ.

ಫ್ಲೈಓವರ್‌: ಈ ಮಧ್ಯೆ ವಿವಾದಿತ ಮೇಲು ಸೇತುವೆ ಹಗರಣಕ್ಕೆ ಸಂಬಂಧಿಸಿದಂತೆ ಪಿರ್ಯಾದಿ ಹಾಗೂ ತನಿಖಾಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಚೆನ್ನೈನ ಪ್ರಧಾನ ಸೆಷನ್ಸ್‌ ನ್ಯಾಯಾಧೀಶರಾದ ಅಶೋಕ್‌ ಕುಮಾರ್‌ ಆದೇಶಿಸಿದ್ದರು.

ಮಾಜಿ ಮುಖ್ಯಮಂತ್ರಿ ಕರುಣಾನಿಧಿ, ಕರುಣಾನಿಧಿ ಅವರು ಪುತ್ರ ಸ್ಟಾಲಿನ್‌ ಸೇರಿದಂತೆ ಒಟ್ಟು 12 ಮಂದಿಯ ವಿರುದ್ಧ ಫ್ಲೈಓವರ್‌ ಹಗರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ಹೂಡಲಾಗಿದೆ. ಮಂಗಳವಾರ ಈ ಪ್ರಕರಣದ ವಿಚಾರಣೆ ಆರಂಭಿಸಿದ ನ್ಯಾಯಾಧೀಶರು, ಪೊಲೀಸರ ವರ್ತನೆಯನ್ನು ಪ್ರಶ್ನಿಸಿದರು ಎಂದು ವರದಿಯಾಗಿದೆ.

(ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X