ಕೇಂದ್ರ ಸಚಿವರಾದ ಮಾರನ್, ಬಾಲು ವಿರುದ್ಧದ ಕೇಸ್ ವಾಪಸ್
ಚೆನ್ನೈ : ಪೊಲೀಸರಿಗೆ ತಮ್ಮ ಕರ್ತವ್ಯ ಜಾರಿಮಾಡಲು ಅಡ್ಡಿ ಪಡಿಸಿದ ಆರೋಪದ ಮೇಲೆ ಶನಿವಾರ ಬಂಧಿಸಲಾಗಿದ್ದ ಕೇಂದ್ರ ಸಚಿವರಾದ ಟಿ.ಆರ್. ಬಾಲು ಹಾಗೂ ಮುರಸೋಳಿ ಮಾರನ್ ಅವರ ವಿರುದ್ಧ ದಾಖಲುಮಾಡಿಕೊಳ್ಳಲಾಗಿದ್ದ ಎಲ್ಲ ಮೊಕದ್ದಮೆಗಳನ್ನೂ ಕೈಬಿಡಲಾಗಿದೆ.
ಕೇಂದ್ರ ಸರಕಾರದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳುವ ಸಲುವಾಗಿ ತಮಿಳುನಾಡು ಸರಕಾರ ಕೇಂದ್ರ ಸಚಿವರ ವಿರುದ್ಧ ಹೂಡಲಾಗಿದ್ದ ಮೊಕದ್ದಮೆಗಳನ್ನು ವಾಪಸ್ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸೋಮವಾರ ತಮಿಳುನಾಡು ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ 18ನೇ ಮೆಟ್ರೋಪಾಲಿಟಿನ್ ನ್ಯಾಯಾಲಯ ಕೇಂದ್ರದ ಇಬ್ಬರು ಸಚಿವರನ್ನು ಕೂಡಲೇ ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡುವಂತೆ ಆದೇಶಿಸಿತ್ತು. ನ್ಯಾಯಾಲಯದ ಆದೇಶದಂತೆ ಇಬ್ಬರು ಸಚಿವರನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ, ತಮ್ಮ ವಿರುದ್ಧ ಹೂಡಲಾಗಿರುವ ಎಲ್ಲ ಮೊಕದ್ದಮೆಗಳನ್ನು ವಾಪಸ್ ಪಡೆಯುವವರೆಗೆ ತಾವು ಜೈಲಿನಿಂದ ಹೊರಬರುವುದಿಲ್ಲ ಎಂದು ಕೇಂದ್ರ ಸಚಿವರು ಪಟ್ಟು ಹಿಡಿದಿದ್ದರು. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ವಿಷಮಿಸುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಸಚಿವರಿಬ್ಬರ ವಿರುದ್ಧ ಹೂಡಲಾಗಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆದಿದೆ.
(ಇನ್‌ಫೋ ವಾರ್ತೆ)