ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸನ್‌ ಟಿವಿ ಕೇಳಿಸಿದ ದನಿ ಕರುಣಾನಿಧಿಯದ್ದಲ್ಲ- ಜಯಲಲಿತಾ

By Staff
|
Google Oneindia Kannada News

ಚೆನ್ನೈ : ಕೇಂದ್ರ ವಾಣಿಜ್ಯ ಸಚಿವ ಮುರಸೋಳಿ ಮಾರನ್‌ ಅವರ ಮಗ ಕಲಾನಿಧಿ ಮಾರನ್‌ ಒಡೆತನದ ಟಿವಿ ಚಾನೆಲ್‌ ‘ಸನ್‌ ಟಿವಿ’ಯ ನಗರದ ಕಚೇರಿ ಮೇಲೆ ತಮಿಳುನಾಡು ಪೊಲೀಸರು ಭಾನುವಾರ ರಾತ್ರಿ ದಾಳಿ ನಡೆಸಿದ್ದಾರೆ.

ನಂಬಲರ್ಹ ಮೂಲಗಳ ಪ್ರಕಾರ ಡಿಎಂಕೆ ನಾಯಕ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಬಂಧನದ ಘಟನೆಯನ್ನು ಚಿತ್ರೀಕರಿಸಿರುವ ವಿಷಯದ ಹಿನ್ನೆಲೆಯಲ್ಲಿ ಪೊಲೀಸರು ಈ ದಾಳಿ ನಡೆಸಿದ್ದಾರೆ. ಚಾನೆಲ್‌ನ ಸುದ್ದಿ ಪ್ರಸಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದೂ ಮೂಲಗಳು ತಿಳಿಸಿವೆ.

ಸನ್‌ ಟಿವಿ ಕೆಸೆಟ್ಟು ಫೇಕ್‌- ಜಯಲಲಿತಾ

ಕರುಣಾನಿಧಿ ಬಂಧನ ಕುರಿತಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಹೇಳಿಕೆಯಾಂದನ್ನು ಪ್ರಕಟಿಸಿದ್ದು, ಸನ್‌ ಟಿವಿ ತೋರಿಸಿರುವ ಕೆಸೆಟ್ಟಿನಲ್ಲಿರುವುದು ಹುಸಿ ಎಂದಿದ್ದಾರೆ.

ಆ ಚಾನೆಲ್ಲಿನಲ್ಲಿ ಪ್ರಸಾರವಾಗುವ ಕೂಗಾಟದ ದನಿ ಕರುಣಾನಿಧಿ ಅವರದ್ದಲ್ಲ. ಮಾರನ್‌ ತುಟಿ ಚಲನೆಗೂ, ಮಾತಿಗೂ ಹೊಂದಾಣಿಕೆಯೇ ಇಲ್ಲ. ಇದು ಬೋಗಸ್‌ ಕೆಸೆಟ್‌. ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ. 1996ರಲ್ಲಿ ನನ್ನನ್ನು ಬಂಧಿಸಿದ್ದಾಗ ಯಾವುದೇ ಟಂಗಾಟುಂಗಿ ಯಾಕಾಗಿರಲಿಲ್ಲ ? ಪೊಲೀಸರೊಟ್ಟಿಗೆ ಸಹಕರಿಸಿದರೆ, ಬಂಧನ ಕಾರ್ಯ ಶಾಂತ ರೀತಿಯಿಂದಲೇ ನಡೆಯುತ್ತದೆ. ಇಲ್ಲವಾದರೆ ಇಂಥಾ ಅವಘಡಗಳಾಗುತ್ತವೆ ಎಂದು ಜಯಲಲಿತಾ ತಿಳಿಸಿದ್ದಾರೆ.

ಇನ್ನೊಂದು ವಿಡಿಯೋ ಕೆಸೆಟ್‌ : ಈ ನಡುವೆ ಕರುಣಾನಿಧಿ, ಮಾರನ್‌ ಹಾಗೂ ಮತ್ತೊಬ್ಬ ಕೇಂದ್ರ ಸಚಿವ ಟಿ.ಆರ್‌.ಬಾಲು ಅವರ ಬಂಧನ ಕುರಿತಂತೆ ಖುದ್ದು ತಮಿಳುನಾಡು ರಾಜ್ಯ ಪೊಲೀಸರು ವಿಡಿಯೋ ಕೆಸೆಟ್ಟೊಂದನ್ನು ಬಿಡುಗಡೆ ಮಾಡಿದ್ದಾರೆ. ಚೆನ್ನೈ ಪೊಲೀಸ್‌ ಕಮಿಷನರ್‌ ಕೆ.ಮುತ್ತುಕಾರುಪ್ಪನ್‌ ಸುದ್ದಿಗಾರರಿಗೆ ಕೆಸೆಟ್ಟಿನ ತಿರುಳನ್ನು ಪ್ರದರ್ಶಿಸಿದರು. ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಯಾರನ್ನೇ ಆಗಲಿ, ಅವರು ಕೇಂದ್ರ ಸಚಿವರಾಗಿರಬಹುದು ಅಥವಾ ಯಾವುದೇ ರಾಜಕಾರಣಿಯಾಗಿರಬಹುದು- ಅಂಥವರನ್ನು ಪೊಲೀಸರು ಬಂಧಿಸಬಹುದು. ಆದರೆ ಲೋಕಸಭಾ ಸ್ಪೀಕರ್‌ಗೆ ವಿಷಯ ತಿಳಿಸಬೇಕಷ್ಟೆ . ಕೇಂದ್ರ ಸಚಿವರಾದ ಬಾಲು ಹಾಗೂ ಮುರಸೋಳಿ ಮಾರನ್‌ ಅವರು ಪೊಲೀಸರ ಕರ್ತವ್ಯಕ್ಕೆ ಅಡ್ಡಗಾಲಾದ್ದರಿಂದ ಅವರ ವಿಷಯದಲ್ಲಿ ಕಟುವಾಗಿ ವರ್ತಿಸಬೇಕಾಯಿತು ಎಂದು ಮುತ್ತುಕಾರುಪ್ಪನ್‌ ಹೇಳಿದರು.

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಹಾಗೂ ಆಕೆಯ ಸಹಯೋಗಿಗಳ ಮಾಲೀಕತ್ವದ ಜಯಾ ಟಿವಿಯಲ್ಲಿ ಭಾನುವಾರ ಸಂಜೆಯಿಂದ ಪೊಲೀಸರು ಬಿಡುಗಡೆ ಮಾಡಿರುವ ಕೆಸೆಟ್ಟು ಪದೇಪದೇ ಪ್ರಸಾರವಾಗುತ್ತಿದೆ.

ಕೆಸೆಟ್ಟಿನಲ್ಲಿ ಏನಿದೆ ?

ಪೊಲೀಸರು ಕರುಣಾನಿಧಿ ಮನೆಯ ಒಳಗೆ ಹೋಗಿ, ಅವರ ಕೋಣೆಯ ಬಾಗಿಲು ಬಡಿಯುತ್ತಾರೆ. ಖುದ್ದು ಕರುಣಾನಿಧಿ ಬಾಗಿಲು ತೆರೆಯುತ್ತಾರೆ. ಪೊಲೀಸರೊಂದಿಗೆ ಸಹಕರಿಸುವುದಾಗಿ ಹೇಳಿ, ಬಟ್ಟೆ ಬದಲಿಸಲು ಇನ್ನೊಂದು ಕೊಠಡಿಗೆ ಹೋಗಲು ಅನುಮತಿ ಕೋರುತ್ತಾರೆ. ಪೊಲೀಸರ ಒಪ್ಪಿಗೆ ಸಿಗುತ್ತದೆ. ನಂತರ ಮಾರನ್‌ ಕೋಣೆಗೆ ಹೊಕ್ಕುತ್ತಾರೆ. ಕರುಣಾನಿಧಿ ಅವರ ಜೊತೆ ಮಸುಕಾದ ವ್ಯಕ್ತಿಯಾಬ್ಬ ಮಾತಾಡುತ್ತಿರುತ್ತಾರೆ. ಅವೇಳೆಯಲ್ಲಿ ಬಂದದ್ದೇಕೆ ಎಂದು ಕರುಣಾನಿಧಿ ಪತ್ನಿ ಪೊಲೀಸರನ್ನು ಕೇಳುತ್ತಾರೆ.

ವಾರಂಟ್‌ ಇದೆಯಾ? ಮಾರನ್‌ ಕೇಳುತ್ತಾರೆ. ಪೊಲೀಸರು ಕ್ರುದ್ಧರಾಗುತ್ತಾರೆ. ಇದ್ದಕ್ಕಿದ್ದಂತೆ ಯಾವುದೋ ಅಪರಿಚಿತ ವ್ಯಕ್ತಿ ಕರುಣಾನಿಧಿ ಅವರನ್ನು ಎಳೆಯುವ ದೃಶ್ಯ ಕಾಣುತ್ತದೆ. ಸ್ವಲ್ಪ ಹೊತ್ತಿನ ನಂತರ ತಮಿಳುನಾಡು ವಿಧಾನಸಭೆಯ ಉಪ ಸಭಾಪತಿ ಪರಿತಿ ಇಳಾಂವಳುತಿ ಹಾಗೂ ಟಿ.ಆರ್‌.ಬಾಲು ಕಾಣಿಸಿಕೊಳ್ಳುತ್ತಾರೆ. ಸ್ವಲ್ಪ ಹೊತ್ತು ವಾದ. ಪೊಲೀಸರು ದೈಹಿಕವಾಗಿ ಬಾಲು, ಮಾರನ್‌, ಕರುಣಾನಿಧಿ ಎಲ್ಲರನ್ನೂ ದಂಡಿಸುತ್ತಾರೆ....

ಒಟ್ಟಿನಲ್ಲಿ ತಮಿಳುನಾಡಿನಲ್ಲಿ ಈ ಹೊತ್ತು ರಾಜಕೀಯ ಹಾಗೂ ಚಾನೆಲ್‌ಗಳ ಬಿಚ್ಚು ಸಮರ ನಡೆದಿದೆ.

(ಏಜೆನ್ಸೀಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X