ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ರಾಜ್ಯಪಾಲರ ಎತ್ತಂಗಡಿ: ಕೇಂದ್ರ ಸಂಪುಟ ತೀರ್ಮಾನ

By Staff
|
Google Oneindia Kannada News

ಚೆನ್ನೈ : ಡಿ.ಎಂ.ಕೆ. ನಾಯಕರ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಬೆಂಬಲಿಸಿ ವರದಿ ಸಲ್ಲಿಸಿರುವ ತಮಿಳುನಾಡು ರಾಜ್ಯಪಾಲರಾದ ಫಾತಿಮಾ ಬೀವಿ ಅವರನ್ನು ವಾಪಸ್‌ ಕರೆಸಿಕೊಳ್ಳಲು ಕೇಂದ್ರ ಸಚಿವ ಸಂಪುಟ ಭಾನುವಾರ ನಿರ್ಧರಿಸಿದೆ.

ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಕೇಂದ್ರದ ಇಬ್ಬರು ಸಚಿವರ ಬಂಧನದ ನಂತರದ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಭಾನುವಾರ ದೆಹಲಿಯಲ್ಲಿ ಕರೆಯಲಾಗಿದ್ದ ಸಚಿವ ಸಂಪುಟದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪೊಲೀಸರ ಕಾರ್ಯಾಚರಣೆಯನ್ನು ಬೆಂಬಲಿಸಿರುವ ಫಾತಿಮಾ ಬೀವಿ ಅವರ ನಿರ್ಧಾರದ ಬಗ್ಗೆ ಕೇಂದ್ರ ಸರಕಾರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. ಫಾತಿಮಾ ಬೀವಿ ಅವರು ಭಾನುವಾರ ಬೆಳಗ್ಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಮೂರು ಪುಟಗಳ ವರದಿಯಲ್ಲಿ ಪೊಲೀಸರ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಫಾತಿಮಾ ಅವರನ್ನು ಎತ್ತಂಗಡಿ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಜಾರ್ಜ್‌ ಕಾರ್ಯಕ್ರಮ ರದ್ದು: ಫಾತಿಮಾ ಬೀವಿ ಅವರನ್ನು ವಾಪಸ್‌ ಕರೆಸಿಕೊಳ್ಳಲು ಸಂಪುಟದ ಸಭೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ನಿಯೋಗದೊಂದಿಗೆ ತಮಿಳುನಾಡಿಗೆ ತೆರಳಿರುವ ಎನ್‌.ಡಿ.ಎ. ಸಂಚಾಲಕ ಜಾರ್ಜ್‌ ಫರ್ನಾಂಡಿಸ್‌ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸುವ ತಮ್ಮ ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾರೆ.

ಜೈಲಿನಲ್ಲಿ ಕರುಣಾನಿಧಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಾರ್ಜ್‌ ಫರ್ನಾಂಡಿಸ್‌ ಅವರು, ತಾವು ಕರುಣಾನಿಧಿ ಅವರೊಂದಿಗೆ ಯಾವುದೇ ರಾಜಕೀಯ ವಿಷಯ ಚರ್ಚಿಸಲಿಲ್ಲ. ಅವರ ಆರೋಗ್ಯ ವಿಚಾರಿಸಿ, ಅವರನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎಂಬ ಅಂಶಗಳ ಬಗ್ಗೆ ಮಾತ್ರ ಮಾತುಕತೆ ನಡೆಸಿದ್ದಾಗಿ ತಿಳಿಸಿದರು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X