ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಿತಾಬ್‌ ದೇವರಂತೆ!

By Staff
|
Google Oneindia Kannada News

*ಕ್ರಿತ್ತಿವಾಸ್‌ ಮುಖರ್ಜಿ

ಕೋಲ್ಕತ್ತಾ : ಬಾಲಿವುಡ್‌ನ ಮಾಜಿ ಸೂಪರ್‌ಸ್ಟಾರ್‌ ಅಮಿತಾಬ್‌ ಬಚ್ಚನ್‌ಗೆ ದೇಗುಲ ಕಟ್ಟಲು ಅವರ ಕಟ್ಟಾ ಅಭಿಮಾನಿಗಳು ಸಿದ್ಧವಾಗಿದ್ದಾರೆ. ಈ ಮುನ್ನ ಖುಷ್ಬೂ ಎನ್ನುವ ತಮಿಳು ನಟಿಗೆ ಅಭಿಮಾನಿಗಳು ಗುಡಿ ಕಟ್ಟಿದ್ದನ್ನು ಬಿಟ್ಟರೆ, ಇತರ ಸಿನಿಮಾ ನಟ- ನಟಿಯರು ಎಷ್ಟೇ ಜನಪ್ರಿಯತೆ ಗಳಿಸಿದ್ದರೂ ಗುಡಿಯ ಗೌರವಕ್ಕೆ ಪಾತ್ರರಾಗಿರಲಿಲ್ಲ .

59 ವರ್ಷದ ಅಮಿತಾಬ್‌ ಒಪ್ಪಲಿ ಬಿಡಲೀ, ಬಾಲಿವುಡ್‌ ಅವರನ್ನು ಆ್ಯಗ್ರಿ ಯಂಗ್‌ಮ್ಯಾನ್‌ ಇಮೇಜ್‌ನಲ್ಲೇ ಗುರ್ತಿಸುತ್ತದೆ. ಅಂಥಾ ನಟನಿಗೀಗ ಅಭಿಮಾನಿಗಳಿಂದ ಡಂಡಂ ನಲ್ಲಿ ದೇವಾಲಯದ ನಿರ್ಮಾಣ. ಈ ದೇವಾಲಯದಲ್ಲಿ ಸಂಸ್ಕೃತ ಮಂತ್ರಗಳ ಪಠಣ ಇರುವುದಿಲ್ಲ . ಅಮಿತಾಬ್‌ನ ಚಿತ್ರಗಳಿಂದ ಆಯ್ದ ಸಂಭಾಷಣೆಯ ತುಂಡುಗಳನ್ನೇ ಮಂತ್ರದ ರೂಪದಲ್ಲಿ ಪಠಿಸಲಾಗುತ್ತದೆ. ಪ್ರಾರ್ಥನಾ ಸೆಷನ್ನುಗಳಲ್ಲಿ ಸಿನಿಮಾ ಸಂಭಾಷಣೆಯದೇ ಪಠಣ.

ಗುರು ಪೂರ್ಣಿಮೆಯಂದು ಕಾಪಾಡು ‘ಶ್ರೀ ಅಮಿತಾಬ್‌ ಬಚ್ಚನ್‌’

ಗುಡಿಯನ್ನು ಕಟ್ಟುವ ಸಾಹಸಕ್ಕೆ ಮುಂದಾಗಿರುವುದು ‘ಅಮಿತಾಬ್‌ ಬಚ್ಚನ್‌ ಅಭಿಮಾನಿಗಳ ಸಂಘ ’(ಎಬಿಎಫ್‌ಎ). ಅಮಿತಾಬ್‌ರನ್ನು ದೇವರನ್ನಾಗಿಸುವ ಮೊದಲ ಕಾರ್ಯಕ್ರಮ ಜುಲೈ 5 ರಂದು ನಡೆಯಲಿದೆ. ಅಂದು ಗುರುಪೂರ್ಣಿಮಾ. ಹಿಂದೂಗಳ ಪಾಲಿಗೆ ಆ ದಿನ ಮಹತ್ವದ್ದು ಎಂದು ಪ್ರತ್ಯೇಕ ಹೇಳಬೇಕಿಲ್ಲವಷ್ಟೆ .

ಜುಲೈ 5 ರಂದು ಡಂ ಡಂ ಕ್ಲಬ್‌ನಲ್ಲಿ ಜರುಗುವ ಕಾರ್ಯಕ್ರಮದಲ್ಲಿ ದಿನವಿಡೀ ಪೂಜೆ, ಆರಾಧನೆ. ಸತ್ಯನಾರಾಯಣ ಪೂಜೆಯ ರೀತಿಯಲ್ಲೇ ನಾವು ನಮ್ಮ ದೇವರನ್ನು (ಬಚ್ಚನ್‌) ಪೂಜಿಸುತ್ತೇವೆ ಎನ್ನುತ್ತಾರೆ ಎಬಿಎಫ್‌ಎ ನ ಪಶ್ಚಿಮಬಂಗಾಳದ ಕಾರ್ಯದರ್ಶಿ ಎಸ್‌.ಪಿ. ಕಾಮತ್‌. ಪೂಜೆಯ ಸಮಾರೋಪದಲ್ಲಿ ಆ ಭಾಗದ ಬಡಬಗ್ಗರಿಗೆ ಕ್ಲಬ್‌ ವತಿಯಿಂದ ಸಂತರ್ಪಣೆಯಿದೆ.

ಏಕ ಛತ್ರಿಯಡಿ ಬಚ್ಚನ್‌ ಸಿನಿಮಾ ಸಂಗ್ರಹ
ಕಲ್ಲತ್ತಾದ ಅಭಿಮಾನಿಗಳು ಬಚ್ಚನ್‌ರ ಮ್ಯೂಸಿಯಂ ರೂಪಿಸಲೂ ಉದ್ದೇಶಿಸಿದ್ದಾರೆ. ಬಚ್ಚನ್‌ರ ಎಲ್ಲಾ ಸಿನಿಮಾಗಳು, ಅವರಿಗೆ ಸಂಬಂಧಿಸಿದ ಕಲಾಕೃತಿಗಳು, ಸ್ಮರಣಿಕೆಗಳನ್ನು ಈ ಮ್ಯೂಸಿಯಂ ಸೂರಿನಡಿಯಲ್ಲಿ ತರುವ ಪ್ರಯತ್ನಗಳು ನಡೆಯುತ್ತಿವೆ. ಅಂದಹಾಗೆ, ಬಚ್ಚನ್‌ರ ಹೆಂಡತಿ ಜಯಾ ಬಂಗಾಳಿ ಹೆಣ್ಣು ಮಗಳು. ಆ ಕಾರಣದಿಂದಲೇ ಬಚ್ಚನ್‌ ‘ಬಂಗಾಳದ ಅಳಿಯ’ ಅನ್ನುವ ಅಭಿಮಾನ ಬಂಗಾಳಿಗಳಿಗೆ.

ಜುಲೈ 8 ರಂದು ಥಲಸ್ಸೆಮಿಯಾ (Thalassemia) ರೋಗಿಗಳಿಗಾಗಿ ರಕ್ತದಾನ ಶಿಬಿರವನ್ನು ಎಬಿಎಫ್‌ಎ ನಡೆಸುತ್ತಿದೆ. ಶಿಬಿರದಲ್ಲಿ ರಕ್ತದಾನ ಮಾಡುವ 500 ಮೊದಲಿಗರಿಗೆ, ಜುಲೈ 13 ರಂದು ಬಿಡುಗಡೆಯಾಗುತ್ತಿರುವ ಬಚ್ಚನ್‌ರ ಚಿತ್ರ ‘ಅಕ್ಸ್‌ - ದಿ ರಿಫ್ಲೆಕ್ಷನ್‌’ ಪ್ರೀಮಿಯರ್‌ ಶೋ ಟಿಕೆಟ್‌ಗಳು ಕೊಡುಗೆಯಾಗಿ ಸಿಗಲಿವೆ.

ಒಟ್ಟಿನಲ್ಲಿ ಅಮಿತಾಬ್‌ಗೀಗ ಚಿನ್ನದ ಕಾಲ. ಕಳೆದ ವರ್ಷವಷ್ಟೇ ಲಂಡನ್‌ನ ಮೇಡ ಥೌಸಾಡ್ಸ್‌ನ ಮೇಣದ ಪ್ರತಿಮೆಯ ಗೌರವಕ್ಕೆ ಪಾತ್ರರಾಗಿದ್ದ ಅವರೀಗ- ದೇವರಾಗುತ್ತಿದ್ದಾರೆ. ಅಭಿಮಾನಿಗಳಿಗೆ ಒಳ್ಳೆಯದಾಗಲಿ!

(ಐಎಎನ್‌ಎಸ್‌)

ವಾರ್ತಾ ಸಂಚಯ
ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X