ಸ್ಮಾರಕ ರಕ್ಷಣೆಗೆ ಸರ್ಕಾರದ ಜೊತೆ ಕೈಜೋಡಿಸಿದ ಧರ್ಮೋತ್ಥಾನ ಟ್ರಸ್ಟ್
ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ಸ್ಮಾರಕಗಳನ್ನು ರಕ್ಷಿಸುವ ಮತ್ತು ಜೀರ್ಣೋದ್ಧಾರ ಮಾಡುವ ದೃಷ್ಟಿಯಿಂದ ಸರಕಾರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ಜತೆ ಒಪ್ಪಂದ ಮಾಡಿಕೊಂಡಿದೆ.
ರಾಜ್ಯದಲ್ಲಿ ಒಟ್ಟು 750 ಸ್ಮಾರಕಗಳನ್ನು ಗುರುತಿಸಲಾಗಿದ್ದು, ಇವುಗಳ ಜೀರ್ಣೋದ್ಧಾರದ ಯೋಜನೆಯನ್ನು ಧರ್ಮೋತ್ಥಾನ ಟ್ರಸ್ಟ್ ನಿರ್ವಹಿಸಲಿದೆ. ಸ್ಥಳೀಯರ ನೆರವಿನೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ರಾಜ್ಯ ಸರಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ಟ್ರಸ್ಟ್ ಈಗಾಗಲೇ ಜೀರ್ಣೋದ್ಧಾರ ಕೆಲಸವನ್ನು ಆರಂಭಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ತಿಳಿಸಿದ್ದಾರೆ.
ಸ್ಮಾರಕಗಳನ್ನು ಜೋಪಾನ ಮಾಡಲು ಸರಕಾರದ ಬಳಿ ಹಣಕಾಸಿನ ಕೊರತೆ ಇರುವುದರಿಂದ ಟ್ರಸ್ಟ್‌ನ ಸಹಯೋಗದೊಂದಿಗೆ ಈ ಕಾರ್ಯಕ್ರಮ ಕೈಗೊತ್ತಿಕೊಳ್ಳಲು ನಿರ್ಧರಿಸಲಾಗಿದೆ. ಒಪ್ಪಂದದ ಪ್ರಕಾರ ಸ್ಮಾರಕ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಶೇ 50, ಧರ್ಮೋತ್ಥಾನ ಟ್ರಸ್ಟ್ ಶೇ 40 ಮತ್ತು ಸ್ಮಾರಕಗಳಿರುವ ಪ್ರದೇಶದ ಸ್ಥಳೀಯರು ಶೇ 10ರಷ್ಟು ಹಣ ನೀಡಬೇಕು. ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ನೇಮಿಸಲಾಗುವ ಸಮಿತಿ ಈ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳಲಿದೆ.
(ಇನ್ಫೋ ವಾರ್ತೆ)