ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಲಿಕಾನ್‌ ಸಿಟಿಗೆ ಇನ್ನೊಂದು ಗರಿ : ಇಲ್ಲೀಗಲ್‌ ಭಕುತಿ ತಾಣಗಳ ನಗರಿ!

By Staff
|
Google Oneindia Kannada News

*ಇಮ್ರಾನ್‌ ಖುರೇಷಿ

ಬೆಂಗಳೂರು : ಭಾರತದ ವಿಜ್ಞಾನ ನಗರಿ, ಸಿಲಿಕಾನ್‌ ಕಣಿವೆ ಎಂಬೆಲ್ಲಾ ಅಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಇಲ್ಲೀಗಲ್‌ ಭಕುತಿ ತಾಣಗಳ ತವರೂ ಹೌದು !

ಜೂನ್‌ 19ರ ಮಂಗಳವಾರ ಬನ್ನೇರುಘಟ್ಟ ರಸ್ತೆಯ ಮೂರು ದೇವಸ್ಥಾನಗಳು ಉರುಳಿವೆ. ಇಂಥಾ ಸಾವಿರಕ್ಕೂ ಹೆಚ್ಚು ದೇವಸ್ಥಾನಗಳು ಫುಟ್‌ಪಾತಿನ ಮೇಲೋ, ರಸ್ತೆಯ ಮೇಲೋ ನೆಲೆಯೂರಿರುವುದು ಪತ್ತೆಯಾಗಿದೆ. ಏಷ್ಯಾದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಎಂಬ ಶಹಬಾಷ್‌ಗಿರಿ ಪಡೆದಿರುವ ಬೆಂಗಳೂರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಭಕುತಿಯೇ ಅಡ್ಡಗಾಲಾಗಿರುವುದು ದುರಂತ.

ರಸ್ತೆಗೆ ಬಂದ ಭಗವಂತ : ಮೊನ್ನೆ ಸಣ್ಣ ಕಲ್ಲು. ನಿನ್ನೆ ಅದಕ್ಕೆ ಚಪ್ಪರ. ಇಂದು ಗೋಪುರದ ಸಮೇತ ನಿರ್ಮಿತವಾದ ದೊಡ್ಡ ದೇವಾಲಯ ! ಹೀಗೇ ಸಾಗಿ ಬಂದ ಹಾದಿಯಲ್ಲಿ ಹುಟ್ಟಿಕೊಂಡ ಮಾರಮ್ಮ, ಈಶ್ವರ, ಗಣೇಶ ಮೂರ್ತಿಗಳು ಅವೆಷ್ಟೋ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಏನಾದರೂ ಯೋಜನೆ ಮಾಡ ಹೊರಟಲ್ಲಿ ಈ ದೇವರುಗಳು ಅಡ್ಡ ಬರುತ್ತಾರೆ. ಬಿಎಂಟಿಸಿ ಬಸ್ಸು ಯಾವುದೋ ಕಣಿವೆಯ ನಡುವೆ ಹಾದು ಹೋಗಬೇಕಾದ ಪ್ರಸಂಗ ಹುಟ್ಟುಹಾಕಿರುವುದೂ ಈ ದೇವರುಗಳೇ. ಯಾರು ಈ ದೇವರನ್ನು ರಸ್ತೆಗೆ ತಂದಿದ್ದು ? ನಗರದ ನಾಗರಿಕರು. ಹೊತ್ತಿಗೆ ಸರಿಯಾಗಿ ಬಸ್ಸು ಬಾರದಿದ್ದರೆ, ಚಾಲಕನ ಅಚಾತುರ್ಯದಿಂದ ದಾರಿಹೋಕ ಸತ್ತರೆ ಕಲ್ಲು ತೂರುವ ಅದೇ ನಾಗರಿಕರು.

ಕೃಷ್ಣ ಸಂಕಲ್ಪ : ಮುಖ್ಯಮಂತ್ರಿ ಕೃಷ್ಣ , ಸೀಟು ಹೋದರೂ ಪರವಾಗಿಲ್ಲ, ದಾರಿಗೆ ಅಡ್ಡ ಬರುವ ದೇವಸ್ಥಾನಗಳನ್ನೆಲ್ಲಾ ಕೆಡವಿ ಎಂದು ಕಡ್ಡಿ ತುಂಡು ಮಾಡಿದಂತೆ ಏಪ್ರಿಲ್‌ 13ರಂದು ಹೇಳಿದ್ದೇ ತಡ, ಕೆಲಸ ಚುರುಕಾಗಿದೆ. ಕೃಷ್ಣ ಅದೃಷ್ಟವೋ ಎಂಬಂತೆ ಜನರೂ ಈವರೆಗೆ ಎಲ್ಲೂ ವಿರೋಧದ ಸೊಲ್ಲೆತ್ತಿಲ್ಲ.

ಫ್ಲ್ಯಾಷ್‌ಬ್ಯಾಕ್‌ : ಮೂವತ್ತು ವರ್ಷಗಳ ಹಿಂದೆ ನಗರದ ಹೊರ ವಲಯಗಳ ಅಲ್ಲಲ್ಲಿ ದೊಡ್ಡ ಅರಳಿಮರ. ಅರಳಿಮರದಿಂದ ನಾಲೈದು ಗಜ ದೂರದಲ್ಲೊಂದು ದೇವಸ್ಥಾನ. ಇಂಥಾ ತಾಣವೇ ಬಸ್‌ ಸ್ಟಾಪೂ ಆಗಿತ್ತು. ಬಸ್ಸಿಗೆ ಕಾಯುವ ಮಂದಿ ದೇವರಿಗೆ ನಮಿಸಿಯೇ ಸಿಟಿ ಹಾದಿ ಹತ್ತುತ್ತಿದ್ದುದು. ಪ್ರದಕ್ಷಿಣೆ ಹಾಕಿ ಬರುವ ಪರಿಸ್ಥಿತಿಯಿದ್ದರೂ ಬಸ್ಸಿನ ಚಾಲಕ ಅದಕ್ಕೆ ಒಗ್ಗಿ ಹೋಗಿದ್ದ. ಅಧಿಕಾರಿಗಳಿಗೆ ದೇವಸ್ಥಾನ ಒಡೆದರೆ ಮನೆ ಮುರಿಯುತ್ತದೆ ಅನ್ನೋ ಭಯ. ಇವತ್ತು ನಗರದ ಅದೇ ಗರ್ಭದಲ್ಲಿನ ಮಕ್ಕಳ ಸಂಖ್ಯೆ ವಿಪರೀತವಾಗಿದೆ. ಒಂದು ಫ್ಲೈಓವರ್‌ ಕಟ್ಟೋಣ, ಬಸ್‌ಸ್ಟ್ಯಾಂಡ್‌ ಮಾಡೋಣ ಅಂತ ಸರ್ಕಾರ ಅಂದುಕೊಂಡರೆ ಅಲ್ಲೊಬ್ಬ ದೇವರು ಅಡ್ಡವಿರುತ್ತಾನೆ. ಈ ಅಡ್ಡ ದೇವರ ಕಾಟ ಜನರಿಗೂ ಅರ್ಥವಾಗಿರುವಂತಿದೆ.

ದೇವಸ್ಥಾನ ಒಡೆಯೋದಾ? ಈಗ ಭಯವಿಲ್ಲ : ಅಧಿಕಾರಿಗಳಿಗೆ ದೇವರು ಹೊಡೆದಾನು ಅನ್ನುವ ಅಂಜಿಕೆ ಇಲ್ಲ. ಅಲ್ರೀ, ದೇವರನ್ನ ದಾರಿಗೆ ಅಡ್ಡವಾಗಿ ಕೂರಿಸಿರೋದ್ರಿಂದ ಕಷ್ಟ ಆಗ್ತಿರೋದು ಜನಕ್ಕೆ. ಜನಕ್ಕೆ ಕಷ್ಟವಾಗೋದು ದೇವರಿಗೆ ಇಷ್ಟವೇ ? ದೇವರ ತಾಣಗಳನ್ನೂ ಇಲ್ಲೀಗಲ್‌ ಆಗಿಸಿದ ಜನಕ್ಕೆ ಭಯ- ಭಕ್ತಿ ಇರಬೇಕು. ಜನರಿಗೆ ಒಳ್ಳೇದು ಮಾಡಿದರೆ ಯಾವ ದೇವ್ರೂ ಏನೂ ಮಾಡಲ್ಲ ಅನ್ನುತ್ತಾರೆ ಬಿಡಿಎಯ ಅಧಿಕಾರಿ.

ದಿನಪತ್ರಿಕೆಯ ನೆರವು : ರಾಜ್ಯದ ಅತಿ ಹಳೆಯ ದಿನಪತ್ರಿಕೆಯಾಂದು ಓದುಗರಿಗೆ ಕರೆ ಕೊಟ್ಟಿದೆ- ನಿಮಗೆ ಗೊತ್ತಿರುವ ಅಕ್ರಮವಾಗಿ ಕಟ್ಟಿರುವ ದೇವಸ್ಥಾನಗಳ ಬಗ್ಗೆ ಮಾಹಿತಿ ಕೊಡಿ ಎಂದು. ಜನರಿಂದ ಪತ್ರಗಳು ಹರಿದು ಬರುತ್ತಿವೆ. ಇವಕ್ಕೆ ಓಗೊಟ್ಟು ವರದಿಗಾರರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದು, ಅಕ್ರಮ ಮೂರ್ತಿಗಳ ನೆಲಸಮ ಮಾಡಿ, ಬೆಂಗಳೂರಿನ ಪ್ರಗತಿಗೆ ಚಾಲನೆ ನೀಡುವಲ್ಲಿ ನಿರತರಾಗಿದ್ದಾರೆ. ಎಲ್ಲಾ ಅಧಿಕಾರಿಗಳು, ಜನರು ಚುರುಕಾಗಬೇಕಷ್ಟೆ. ಆಗ ವಿಗತಿಗೆ ಪೂರ್ಣವಿರಾಮ ಸಿಗಲಿದೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X