Get Updates
Get notified of breaking news, exclusive insights, and must-see stories!

ಕರ್ನಾಟಕ ಸರ್ಕಾರದ ವೆಬ್‌ಸೈಟ್‌ ಮಲಗಿದೆ, ಎಬ್ಬಿಸುವರೇ ಕೃಷ್ಣ?

ಬೆಂಗಳೂರು : ಕೃಷ್ಣ ಅವರಿಗೆ ಶುಭಾಶಯಗಳು!! ಸರ್ಕಾರಿ ವೆಬ್‌ಸೈಟ್‌ ಮಲಗಿದೆ. ಕಾರಣ- ಸಿಸ್ಟಂಸ್‌ ಫೇಲ್ಯೂರ್‌ !

http://www.karnatakainformation.org/ ವೆಬ್‌ಸೈಟ್‌ಗೆ ಒಮ್ಮೆ ಭೇಟಿ ಕೊಡಿ. ಈ ಸೈಟಿನಲ್ಲಿ ಬರೆದಿರುವ ಷರಾದ ಅನ್ವಯ ಕರ್ನಾಟಕ ಸರ್ಕಾರ, ರಾಜ್ಯಪಾಲರು, ಮುಖ್ಯಮಂತ್ರಿ, ಶಾಸಕರು, ಮಂತ್ರಿಗಳು, ಕಾರ್ಯದರ್ಶಿಗಳು, ಪೊಲೀಸ್‌ ಸೂಪರಿಂಟೆಂಡೆಂಟ್‌ಗಳು, ನಿರ್ದೇಶಕರು, ಐಎಎಸ್‌ ಅಧಿಕಾರಿಗಳು, ಡಿಸಿಗಳು ಮೊದಲಾದ ಮಾಹಿತಿ ಇಲ್ಲಿ ಲಭ್ಯ. ಹುಡುಕಾಡಿದರೆ ವರ್ಷದ ಹಿಂದೆ ತುಂಬಿಸಿದ ಹಳಸಲು ಮಾಹಿತಿ ಲಭ್ಯ. ಸಿಇಟಿ ಫಲಿತಾಂಶ ಹಾಗೂ ಸುದ್ದಿ ಸಂಸ್ಥೆಗಳಿಗೆ ಸುದ್ದಿ- ಫೋಟೋ ಭರಿಸುವ ಸೌಕರ್ಯವಿದೆ. ಈ ಸುದ್ದಿಗಳು ತಂಗಳು ಅನ್ನೋದು ಈ ಸೈಟಿನ ಇನ್ನೊಂದು ಅಗ್ಗಳಿಕೆ !

ಸತ್ತವರೆಲ್ಲಾ ಇಲ್ಲಿ ಬದುಕಿದ್ದಾರೆ : ಐಟಿ ಹಪಾಹಪಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸರ್ಕಾರದಲ್ಲಿ, ಒಂದು ಸರ್ಕಾರಿ ವೆಬ್‌ಸೈಟಿನ ಸ್ಥಿತಿಯೇ ಇಂತಾದರೆ ಹೇಗೆ ಸ್ವಾಮಿ ? ಈ ಸೈಟಿನಲ್ಲಿ ಎಂಎಲ್‌ಸಿಗಳ ಪಟ್ಟಿ ತುಂಬಿಸಿರುವುದು ಜನವರಿ 21, 2000ದಂದು. ಅದಾದ ನಂತರ ವೆಬ್‌ಸೈಟಿನ ನಿರ್ವಹಣೆಯ ಗೊಡವೆಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿರುವ ಉದಾಹರಣೆ ಸಿಗುವುದಿಲ್ಲ. ಯೇಸುದಾಸನ್‌, ಸಿದ್ಧಲಿಂಗಯ್ಯ, ಸರಿತಾ ಕುಸುಮಾಕರ್‌ ದೇಸಾಯಿ, ಮಹದೇವ್‌ ಬಣಕರ್‌ ಹಾಗೂ ಎಚ್‌.ಎಲ್‌.ನಾಗೇಗೌಡ ಮೇ, 2001ರಂದು ರಿಟೈರ್‌ ಆಗಿದ್ದಾರೆ. ಟಿ.ಕೆಂಪಮ್ಮ, ಸಿ.ನಾರಾಯಣ ರೆಡ್ಡಿ ಹಾಗೂ ಟಿ.ಎಸ್‌.ಮೃತ್ಯುಂಜಯಪ್ಪ ಮೃತರಾಗಿದ್ದಾರೆ. ಆದರೆ ವೆಬ್‌ಸೈಟ್‌ ಪ್ರಕಾರ ಇವರೆಲ್ಲಾ ಇವತ್ತಿಗೂ ಅಧಿಕಾರಾರೂಢರು !

ಖಾತೆ ಬದಲಾದರೂ ವೆಬ್‌ಸೈಟು ಬದಲಾಗದು : ಬಾಬುರಾವ್‌ ಚವ್ಹಾಣ್‌ ಯಾವಾಗ ಸಮಾಜ ಕಲ್ಯಾಣ ಸಚಿವರಾದರು; ಅವರು ವಯಸ್ಕರ ಶಿಕ್ಷಣ ಹಾಗೂ ಲೈಬ್ರರಿ ಉಸ್ತುವಾರಿ ವಹಿಸಿರುವ ಸಚಿವರಲ್ವೆ ? ನಫೀಸಾ ಫಸಲ್‌ ಈಗ ವೈದ್ಯಕೀಯ ಶಿಕ್ಷಣದ ಸ್ವತಂತ್ರ ಖಾತೆ ಹೊಂದಿದ್ದಾರೆ. ವೆಬ್‌ಸೈಟ್‌ ಉಲ್ಲೇಖಿಸಿರುವ ಪ್ರಕಾರ ಆರೋಗ್ಯ ಸಚಿವ ಮಲಕರೆಡ್ಡಿ ಅವರ ಖಾತೆಗೆ ಹೊಂದಿಕೊಂಡ ಖಾತೆ ನಫೀಸಾ ಅವರದ್ದು. ಎಂ.ಎಂ.ನಾಣಯ್ಯ ಅವರಿಂದ ಮುಖ್ಯಮಂತ್ರಿ ಕೃಷ್ಣ ಅಬಕಾರಿ ಖಾತೆಯನ್ನು ವಹಿಸಿಕೊಂಡು ತಿಂಗಳುಗಳೇ ಕಳೆದಿವೆಯಾದರೂ, ವೆಬ್‌ಸೈಟಿನಲ್ಲಿ ನಾಣಯ್ಯನವರೇ ಅಬಕಾರಿ ಸಚಿವರು.

ಕರ್ನಾಟಕ ವಿಧಾನಸಭೆಯ ಚುನಾಯಿತ ಪ್ರತಿನಿಧಿಗಳ ಒಟ್ಟು ಸಂಖ್ಯೆ 224. ವೆಬ್‌ಸೈಟ್‌ನಲ್ಲಿರುವುದು 56 ಹೆಸರುಗಳು ಮಾತ್ರ. ವೆಬ್‌ಸೈಟ್‌ ತಿಳಿಸುವಂತೆ ಸರ್ಕಾರ ಕೊನೆ ಟೆಂಡರ್‌ ಇಶ್ಯೂ ಮಾಡಿರುವುದು ಮಾರ್ಚ್‌ 17ರಂದು. ವಾರ್ತಾ ಇಲಾಖೆ ಮಹತ್ತರ ಉದ್ದಿಶ್ಯ ಹೊತ್ತು ಶುರುಮಾಡಿದ್ದ ಈ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲು ಲಾಜಿಸ್ಟಿಕ್‌ ತೊಂದರೆಗಳಿವೆಯೆನ್ನುತ್ತಾರೆ ನಿರ್ವಹಣಾ ಸಿಬ್ಬಂದಿ. ಇಂಡಿಯಾ ನೆಕ್ಸಸ್‌ ಎಂಬ ಖಾಸಗಿ ಕಂಪನಿ ವೆಬ್‌ಸೈಟಿಗೆ ಮಾಹಿತಿ ತುಂಬುವ ಹೊಣೆ ಹೊತ್ತಿದೆ. ಆದರೆ ಈ ಸೈಟು ಗತಿ ಕಾಣುವುದು ಆ ಕಂಪನಿಗೆ ಬಿಡುವಾದಾಗ ಮಾತ್ರ.

ಎಸ್ಸೆಸ್ಸೆಲ್ಸಿ ಫಲಿತಾಂಶ ವೆಬ್‌ಸೈಟಿನಲ್ಲಿ ಹೇಗಿತ್ತು : ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಈಗ ಹಾಕ್ತೀವಿ ಆಗ ಹಾಕ್ತೀವಿ ಅಂತ ರಾತ್ರೋ ರಾತ್ರಿ, ಅದೂ ಮೊದಲ ಜಾವ 1 ಗಂಟೆಗೆ ಇದೇ ವೆಬ್‌ಸೈಟಿನಲ್ಲಿ ಪ್ರಕಟಿಸಿದ್ದರು. ಆಮೇಲೆ ಸರ್ವರ್‌ ಭರ್ತಿಯಾಗಿ ಫಲಿತಾಂಶವನ್ನೇ ನೋಡಲಾಗದೆ ನೊಂದ ವಿದ್ಯಾರ್ಥಿಗಳು ಇದೆಂಥಾ ವೆಬ್‌ಸೈಟೂ ರೀ ಅಂತ ಲೇವಡಿಯಾಡಿದ್ದೂ ಉಂಟು. ಈ ದೊಡ್ಡ ವೈಫಲ್ಯ ಮಾಧ್ಯಮಗಳಿಗೆ ಒಳ್ಳೆ ವಸ್ತುವಾಯಿತು; ಇಂಟರ್ನೆಟ್‌ ಮಾಧ್ಯಮ ಅಟ್ಟರ್‌ ಫೇಲ್ಯೂರ್‌ ಅನ್ನಲು.

ಕೆಲಸಕ್ಕೇ ಬಾರದ ಇಂಥಾ ವೆಬ್‌ಸೈಟಾದರೂ ಯಾತಕ್ಕೆ ? ಆಂಗ್ಲ ಪತ್ರಿಕೆಯಾಂದು ಪ್ರಕಟಿಸಿರುವ ಈ ವರದಿ ಕೃಷ್ಣ ಅವರ ಮುಟ್ಟಲಿ. ಒಂದೋ ಈ ವೆಬ್‌ಸೈಟು ಫ್ರೆಷ್‌ ಆಗಲಿ, ಇಲ್ಲ ಮುಚ್ಚಿಹೋಗಲಿ. ಇಡೀ ಇಂಟರ್ನೆಟ್‌ ಮಾಧ್ಯಮಕ್ಕೇ ಕೆಟ್ಟ ಹೆಸರು ತರುವಂಥಾ ಕೆಲಸ ಸರ್ಕಾರದಿಂದಲೇ ಆಗುತ್ತಿರುವುದು ಇನಿತೂ ಸರಿಯಲ್ಲ.

ಕರ್ನಾಟಕ ಸರ್ಕಾರದ ಇನ್ನೊಂದು ವೆಬ್‌ಸೈಟಿದೆ- www.kar.nic.in. ಇದು ಹೇಗಿದೆ ಅಂತ ನೀವೇ ಯಾಕೆ ಬರೆಯಬಾರದು?

(ಇನ್ಫೋ ವಾರ್ತೆ)

What do you think about this article?

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+