ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರ್‌ ಪುಸ್ತಕಮಾರಾಟ ಇಳಿಮುಖವೇ?

By Staff
|
Google Oneindia Kannada News

* ವಿ-ಶಾಖ . ಎನ್‌

ಬೆಂಗಳೂರು : ಅಮೆರಿಕೆಯಲ್ಲಿನ ಮಾಹಿತಿ ತಂತ್ರಜ್ಞಾನದ ಹಿನ್ನಡೆಯಿಂದ ನಗರದ ಕಂಪ್ಯೂಟರ್‌ ಪುಸ್ತಕಗಳ ಮಾರಾಟ ಇಳಿಮುಖವಾಗಿದೆಯೇ ? ಉತ್ತರ ಮಿಶ್ರವಾಗಿದ್ದರೂ, ಜಾವಾ ಹಾಗೂ ಇ- ಕಾಮರ್ಸ್‌ಗಳ ಪುಸ್ತಕಗಳನ್ನು ಕೇಳುವವರಿಲ್ಲ ಎಂಬುದಂತೂ ಅಕ್ಷರಶಃ ನಿಜ.

ಈ ಅಭಿಪ್ರಾಯವನ್ನು ಖಾತ್ರಿ ಪಡಿಸಿಕೊಳ್ಳಲು ಕನ್ನಡ.ಇಂಡಿಯಾಇನ್ಫೋ ಕೆಲವು ಪುಸ್ತಕ ದುಕಾನುದಾರರನ್ನು ಹಾಗೂ ಮಾಹಿತಿ ತಂತ್ರಜ್ಞಾನ ಕರ್ಮಿಗಳನ್ನು ಮಾತನಾಡಿಸಿದಾಗ, ಕೇಳಿಬಂದದ್ದು...

ಹಿಗಿನ್‌ ಬಾಥಮ್ಸ್‌ನ ಡಾಮ್ನಿಕ್‌ ಮೈಕೆಲ್‌- ಎರಡು ತಿಂಗಳಿಂದ ಕಂಪ್ಯೂಟರ್‌ ಪುಸ್ತಕಗಳನ್ನು ಕೇಳುವವರೇ ಇರಲಿಲ್ಲ. ಶನಿವಾರ ಮತ್ತು ಭಾನುವಾರ (ಜೂನ್‌ 16, 17) ವ್ಯಾಪಾರ ಸ್ವಲ್ಪ ಚೇತರಿಸಿಕೊಂಡಿದೆ. ನಾವು ಮಾರುವ ಪುಸ್ತಕಗಳ ನಾಲ್ಕನೇ ಒಂದು ಭಾಗ ಕಂಪ್ಯೂಟರ್‌ಗೆ ಸಂಬಂಧಿಸಿದ್ದು. ಜಾವಾ ಹಾಗೂ ಇ- ಕಾಮರ್ಸ್‌ ಪುಸ್ತಕಗಳನ್ನು ಕೇಳುವವರೇ ಇಲ್ಲ. ಆದರೆ ಒರ್ಯಾಕಲ್‌, ಡಾಟ್‌ ನೆಟ್‌, ಫ್ಲ್ಯಾಷ್‌, ಸಿ ಪ್ಲಸ್‌ ಪ್ಲಸ್‌ ಮೊದಲಾದ ಪುಸ್ತಕಗಳ ಮಾರಾಟ ಚೆನ್ನಾಗೇ ಇದೆ.
ಸಪ್ನಾದ ದೀಪಕ್‌- ಪ್ರಸ್ತುತ ಎಲ್ಲಾ ಪುಸ್ತಕಗಳ ಮಾರಾಟ ಪ್ರತಿಶತ 20ರಿಂದ 25ರಷ್ಟು ಕಡಿಮೆಯಾಗಿದೆ. ಅದೇನೋ ಅಮೆರಿಕದಲ್ಲಿ ಐಟಿ ಸ್ಲೋಡೌನಂತೆ. ಹೀಗಾಗಿ ಕಳೆದ ಎರಡು ಮೂರು ತಿಂಗಳಿಂದ ಜಾವಾ, ಇ- ಕಾಮರ್ಸ್‌ ಪುಸ್ತಕಗಳ ಮಾರಾಟ ಫುಲ್‌ ಡೌನಾಗಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಸೆಮಿಸ್ಟರ್‌ಗೆ ಓದಲು ಕೊಳ್ಳುವ ಪುಸ್ತಕಗಳೇ ಸದ್ಯಕ್ಕೆ ನಮ್ಮ ಕಂಪ್ಯೂಟರ್‌ ಪುಸ್ತಕಗಳ ಮಾರಾಟ ಸುಮಾರಾಗಿರಲು ಕಾರಣ. ಉಳಿದಂತೆ ವಿಬಿ, ಒರ್ಯಾಕಲ್‌, ಯುನಿಕ್ಸ್‌, ಸಿ- ಶಾಪ್‌ ಪುಸ್ತಕಗಳ ಮಾರಾಟ ಚೆನ್ನಾಗೇ ಇದೆ.

ಬುಕ್‌ ಪ್ಯಾರಡೈಸ್‌ನ ವೆಂಕಟೇಶ್‌- ನಮಗೇನೂ ಐಟಿ ಸ್ಲೋಡೌನಿಂದ ತೊಂದರೆಯಾಗಿಲ್ಲ. ಕಂಪ್ಯೂಟರ್‌ ಪುಸ್ತಕಗಳ ಮಾರಾಟಕ್ಕೆ ಅಂಥಾ ಹೊಡೆತ ಏನೂ ಬಿದ್ದಿಲ್ಲ. ಜಾವಾ ಪುಸ್ತಕಗಳ ಮಾರಾಟದಲ್ಲಿ ಮಾತ್ರ ಪ್ರತಿಶತ 75ರಷ್ಟು ಇಳಿಕೆಯಾಗಿದೆ. ನಾವು ಇನ್ಫೋಸಿಸ್‌, ವಿಪ್ರೋ, ಆಕ್ಸೆಂಟ್‌ ಟೆಕ್ನಾಲಜೀಸ್‌, ಬಿಎಫ್‌ಎಲ್‌ ಮೊದಲಾದ ಸುಮಾರು 100 ಐಟಿ ಕಂಪನಿಗಳಿಗೆ ಪುಸ್ತಕ ಮಾರುತ್ತೇವೆ. ಸುಮಾರು 30 ಪಬ್ಲಿಷರ್‌ಗಳ ಕಂಪ್ಯೂಟರ್‌ ಪುಸ್ತಕಗಳು ನಮ್ಮಲ್ಲುಂಟು. ಸದ್ಯಕ್ಕೆ ವ್ಯಾಪಾರದಲ್ಲಿ ಒಂದು ಹತ್ತು ಪರ್ಸೆಂಟ್‌ ಇಳಿಕೆಯಾಗಿದೆ ಅಷ್ಟೆ.

ನನ್ನ ಗಮನದ ಪ್ರಕಾರ ಕಂಪ್ಯೂಟರ್‌ ತರಪೇತಿ ಸಂಸ್ಥೆಗಳ ಸಂಖ್ಯೆ ಈಗ ಕಡಿಮೆಯಾಗಿದೆ. ಇಲ್ಲ , ವಿದ್ಯಾರ್ಥಿಗಳು ಕೋರ್ಸುಗಳಿಗೆ ಸೇರೋದು ಕಡಿಮೆಯಾಗಿದೆ. ಹೀಗಾಗಿ ಕಲಿಯುವ ಬಯಕೆ ಇರುವ ವಿದ್ಯಾರ್ಥಿಗಳು ಯಾವುದೇ ಕೋರ್ಸಿಗೆ ಸೇರದೆ ಇದ್ದರೂ ಪುಸ್ತಕಗಳನ್ನೇ ಓದಿ ತಿಳಿದುಕೊಳ್ಳುತ್ತಿದ್ದಾರೆ. ಇದು ಪುಸ್ತಕ ಮಾರಾಟಕ್ಕೆ ಸಹಕಾರಿಯಾಗಿದೆ.

ಗಂಗಾರಾಮ್ಸ್‌ನ ಪ್ರಕಾಶ್‌- ನಮ್ಮ ವ್ಯಾಪಾರ ಜೋರಾಗಿದೆ. ಯಾವ ಸ್ಲೋಡೌನೂ ಇಲ್ಲ. ಕಳೆದ ವರ್ಷಕ್ಕಿಂತ 15- 20 ಪ್ರತಿಶತ ಹೆಚ್ಚು ಲಾಭ ಗಿಟ್ಟಿದೆ. ಕಂಪ್ಯೂಟರ್‌ ಪುಸ್ತಕಗಳೂ ಚೆನ್ನಾಗೇ ಬಿಕರಿಯಾಗುತ್ತಿವೆ.
(ಸಾಫ್ಟ್‌ವೇರ್‌ನ ಹೊಸ ವರ್ಷನ್‌ ಮಾರುಕಟ್ಟೆಗೆ ಬಂದಾಗ, ಅದಕ್ಕೆ ಸಂಬಂಧಿಸಿದ ಹೊಸ ಪುಸ್ತಕವೂ ಬಿಡುಗಡೆಯಾಗುತ್ತದೆ. ಆಗ ಹಳೆಯ ಪುಸ್ತಕದ ಗತಿ ಏನು ಎಂಬ ಪ್ರಶ್ನೆಗೆ..) ನಾವು ಪಬ್ಲಿಷರ್‌ಗಳ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿರುತ್ತೇವೆ. 50 ಲಕ್ಷ ಪುಸ್ತಕ ಕೊಳ್ತೀವಿ ಅಂತ ಇಟ್ಟುಕೊಳ್ಳಿ. ಇಂತಿಷ್ಟು ದಿನಗಳಲ್ಲಿ ಅವು ಬಿಕರಿಯಾಗದಿದ್ದಲ್ಲಿ ವಾಪಸ್ಸು ಮಾಡುವ ಕರಾರು ಹಾಕುತ್ತೇವೆ. ಕೆಲವು ಪಬ್ಲಿಷರ್‌ಗಳು 25 ಲಕ್ಷ ಪುಸ್ತಕಗಳಿಗಿಂತ ಹೆಚ್ಚು ತೆಗೆದುಕೊಳ್ಳೋಲ್ಲ ಅಂತಾರೆ. ಇನ್ನು ಕೆಲವರು ಪೂರ್ತಿ ಫ್ಲೆಕ್ಸಿಬಲ್‌ ಆಗಿರ್ತಾರೆ. ನಾವು ವಾಪಸ್ಸು ಮಾಡಿದ ಪುಸ್ತಕವನ್ನು ಪಬ್ಲಿಷರ್‌ಗಳು ಪುನಃ ಮುದ್ರಿಸುತ್ತಾರೆ. ರಾಯಲ್ಟಿಯಲ್ಲೂ ಏರಿಳಿಕೆ ಆಗುತ್ತದೆ. ಇವೆಲ್ಲಾ ಕೊಡು- ಕೊಳ್ಳುವಿಕೆಯ ಮೇಲೆ ನಿಂತಿದೆ.

ಐಟಿ ಕ್ಷೇತ್ರದ ಮಂದಿಗೆ ಇವತ್ತು ಕಂಪ್ಯೂಟರ್‌ ಪುಸ್ತಕಗಳು ಬೇಕೆ, ಎಷ್ಟರಮಟ್ಟಿಗೆ ? ಕೇಳಿದಾಗ....

ವಿಪ್ರೋದ ನಾಗೇಂದ್ರ- ದಿನಕ್ಕೊಂದು ಸಾಫ್ಟ್‌ವೇರ್‌ನ ಹೊಸ ವರ್ಶನ್‌ ಬರುತ್ತದೆ. ಹಾಗಂತ ಪ್ರತಿಯಾಂದಕ್ಕೂ ಪುಸ್ತಕ ಕೊಂಡುಕೊಳ್ಳುವ ಅಗತ್ಯವಿಲ್ಲ. ಬೇಸಿಕ್ಸ್‌ ಇರುವಂಥಾ ಪುಸ್ತಕ ಓದಿದರೆ ಸಾಕು. ಅದೇ ಸಾಫ್ಟ್‌ವೇರ್‌ನ ಹೊಸ ವರ್ಶನ್‌ ಬಂದರೆ, ಆನ್‌ಲೈನ್‌ನಲ್ಲೇ ಸಾಕಷ್ಟು ಮಾಹಿತಿ ಲಭ್ಯ. ಒಂದು ವೇಳೆ ಸಿಕ್ಕಾಪಟ್ಟೆ ಬದಲಾವಣೆ ಇದ್ದರೆ ಆಗ ಹೊಸ ಪುಸ್ತಕ ಕೊಂಡುಕೊಳ್ಳಲೇ ಬೇಕು. ಹಾಗಂತ ಹಳೆಯದೇನೂ ವೇಸ್ಟ್‌ ಆಗೋದಿಲ್ಲ. ಕೆಲವು ಬೇಸಿಕ್ಸ್‌ ಸಿಗುವುದು ಆ ಪುಸ್ತಕದಲ್ಲೇ.

ಕ್ರಿಸ್ಟಲ್‌ ಕಂಪ್ಯೂಟರ್‌ ಇನ್ಸ್‌ಟಿಟ್ಯೂಟ್‌ನ ವಿಜಯಕುಮಾರ್‌- ನಾನು ಇವತ್ತಿಗೂ ಕಂಪ್ಯೂಟರ್‌ ಸಂಬಂಧಿ ಪುಸ್ತಕಗಳನ್ನು ಓದಲೇಬೇಕು. ಕನಿಷ್ಠ 6 ತಿಂಗಳಿಗೊಮ್ಮೆಯಾದರೂ ಪುಸ್ತಕಗಳನ್ನು ಖರೀದಿಸುತ್ತೇನೆ. ಪುಸ್ತಕಗಳ ಮಾರಾಟದಲ್ಲಿ ಇಳಿಕೆ ಆಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಜಾವಾ, ಇ-ಕಾಮರ್ಸ್‌ಗಳು ಈಗ ಚರಿತ್ರೆಯಾಗಿಬಿಟ್ಟಿವೆ. ಜೊತೆಗೆ ಅಮೆರಿಕ ಐಟಿ ಸ್ಲೋಡೌನಿನ ವ್ಯತಿರಿಕ್ತ ಪರಿಣಾಮವೂ ಸಹಜವಾಗೇ ಆಗಿದೆ.

ಐಟಿ ಕಂಪನಿಯಾಂದರ ಸಿಸ್ಟಂ ಅಡ್ಮಿನಿಸ್ಟ್ರೇಟರ್‌ ದಿನೇಶ್‌- ನಾನು ಸಿಸ್ಟಂ ಅಡ್ನಿಸ್ಟ್ರೇಟರ್‌ ಆಗಿರುವುದರಿಂದ ಪದೇಪದೇ ಪುಸ್ತಕ ಕೊಳ್ಳುವ ಅಗತ್ಯವಿಲ್ಲ. ಒಂದು ಸಾಫ್ಟ್‌ವೇರ್‌ ಮಾರುಕಟ್ಟೆಗೆ ಬರುತ್ತದೆ ಅಂತಿಟ್ಟುಕೊಳ್ಳಿ. ಆಗ ಅದರ ಬಗೆಗಿನ ಪುಸ್ತಕ ಕೊಳ್ಳುತ್ತೇನೆ. ಅದರ ಹೊಸ ವರ್ಶನ್‌ ಬಂದಾಗ, ತಕ್ಷಣ ಪುಸ್ತಕ ಕೊಳ್ಳುವ ಅಗತ್ಯವಿಲ್ಲ. ಒಂದಾರು ತಿಂಗಳ ನಂತರ ಎಲ್ಲಾ ಕಾರ್ಪೊರೇಟ್‌ಗಳೂ ಅದೇ ಸಾಫ್ಟ್‌ವೇರನ್ನು ಉಪಯೋಗಿಸಲು ತೊಡಗಿದಾಗ ಪುಸ್ತಕ ಕೊಳ್ಳಲೇಬೇಕು. ಪುಸ್ತಕ ಕೊಳ್ಳುವಿಕೆ ನನ್ನ ಮಟ್ಟಿಗೆ ನಿರಂತರ.

ಎರಡು ತಿಂಗಳ ಹಿಂದೆ ನಾ ಮುಂದು ತಾ ಮುಂದು ಎಂದು ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದ ಜಾವಾ ಹಾಗೂ ಇ- ಕಾಮರ್ಸ್‌ಗೆ ಒದಗಿರುವ ದುರಾವಸ್ಥೆಗೆ ಬೆಂಗಳೂರಿನಲ್ಲಿನ ಪುಸ್ತಕ ಮಾರಾಟವೇ ಕನ್ನಡಿ ಹಿಡಿಯುತ್ತದೆ. ಹಾಗಂತ ಐಟಿ ಕತೆಯೇ ಮುಗಿದಿದೆ ಅನ್ನೋದು ಸುಳ್ಳು. ಬಂದೇ ಬರತಾವ ಕಾಲ ಅನ್ನುವ ಮಂತ್ರ ಪುಸ್ತಕ ಮಾರಾಟ ಮಳಿಗೆಗಳದ್ದು. ಪರಂತು, ಈಗಂತೂ ಕಂಪ್ಯೂಟರ್‌ ಪುಸ್ತಕಗಳ ವ್ಯಾಪಾರಕ್ಕೆ ಕೊಂಚ ಹೊಡೆತ ಬಿದ್ದಿರೋದಂತೂ ನಿಜ.

What do you think about this article?

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X