ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಶತಕಗಳ ಬೆಳವಣಿಗೆಯಲ್ಲಿ ಹಣ್ಣಾದಪ. ನಾ. ಹಳ್ಳಿ ‘ಗುರುಗುಂಡ ಬ್ರಹ್ಮೇಶ್ವರ ಮಠ’

By Staff
|
Google Oneindia Kannada News

* ಹ.ಚ.ನಟೇಶ್‌ಬಾಬು

ಮೂರು ಶತಮಾನಗಳ ಪ್ರಾಚೀನತೆ ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ್ದು . ಕರ್ನಾಟಕ ಮಾತ್ರವಲ್ಲದೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿಯೂ ಶ್ರೀಮಠ ಭಕ್ತರನ್ನು ಹೊಂದಿದೆ.

ವಿದ್ಯಾ ಪ್ರಸಾರ, ಧರ್ಮ ಪ್ರಸಾರಗಳಲ್ಲಿ ಸುತ್ತುಮುತ್ತಲ ಪ್ರಸಾರಗಳಲ್ಲಿ ಶ್ರೀಮಠದ ಸಾಧನೆ ಎತ್ತರದ್ದು . ಈ ಹೊತ್ತು ಗ್ರಾಮೀಣರಿಗೆ ಕಂಪ್ಯೂಟರ್‌ ಶಿಕ್ಷಣವೂ ದೊರಕಿಸುವ ಉದ್ದೇಶದಿಂದ ಶ್ರೀಮಠ ಗಣಕಶಾಲೆಯನ್ನು ಸ್ಥಾಪಿಸಿದೆ.

ಇತಿಹಾಸ : 17 ನೇ ಶತಮಾನದ ಕೊನೆಯಭಾಗದಲ್ಲಿ ಸ್ಪಟಿಕ ನಾಯಕ ಎನ್ನುವ ಮಾಂಡಳಿಕನ ಅಧಿಪತ್ಯಕ್ಕೆ ಈ ಪ್ರದೇಶ ಒಳಪಟ್ಟಿತ್ತು ಎನ್ನುವುದರೊಂದಿಗೆ ಮಠದ ಇತಿಹಾಸ ಪ್ರಾರಂಭವಾಗುತ್ತದೆ. ಸ್ಪಟಿಕ ನಾಯಕ ಆಳುತ್ತಿದ್ದುದರಿಂದ ಆ ಪ್ರದೇಶ ಸ್ಪಟಿಕಪುರಿ ಅನ್ನಿಸಿಕೊಂಡಿತು. ಆನಂತರ ಜನರ ನಾಲಗೆಯಲ್ಲಿ ಹೊರಳುತ್ತ ಸ್ಪಟಿಕನಾಯಕನ ಪುರ, ಸ್ಪಟಿಕ ಪುರ, ಪಟ್ಟಿಕನ ಪುರ, ಕೊನೆಗೆ ಪಟ್ಟನಾಯಕನಹಳ್ಳಿಯಾಯಿತು ಎಂದು ನಂಬಲಾಗಿದೆ.

ಮಠದ ಹೆಸರಿಗೆ ಕಾರಣರದ ಗುರುಗುಂಡ ಬ್ರಹ್ಮೇಶ್ವರರು ಜನಿಸಿದ್ದು ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಬೇಗೂರು ಗ್ರಾಮದಲ್ಲಿ . ದತ್ತಾತ್ರೇಯನ ಅನುಗ್ರಹದಿಂದ ಜನಿಸಿದರೆಂದು ಹೇಳಲಾಗುವ ಅವರ ವೃತ್ತಿ ಕುಂಬಾರಿಕೆ. ಹೊಸಕೋಟೆ ತಿಮ್ಮಾರ್ಯರ ಉಪದೇಶ ಹಾಗೂ ನೀಲಗಿರಿ ಸ್ವಾಮಿಗಳ ಆಶೀರ್ವಾದದಿಂದ ಅವಧೂತರಾದರು.

ದೊರೆವರೆಗೆ ತಲುಪಿದ ಗುರು ಮಹಿಮೆ
ಸ್ವಾಮೀಜಿಯವರ ಮಹಿಮೆ ಹಾಗೂ ಪವಾಡ ದೊರೆ ಕೃಷ್ಣರಾಜ ಒಡೆಯರ್‌ವರೆಗೂ ತಲುಪಿತು. ಸ್ವಾಮೀಜಿಗೆ ಅರಮನೆಯ ಆತಿಥ್ಯವೂ ದೊರೆಯಿತು. ಅಲ್ಲಿಂದ ಮುಂದೆ ಕೈವಾರ ನಾರಾಣಪ್ಪನ ಶಿಷ್ಯ ಪೂವಯ್ಯನೊಡಗೂಡಿ ವಿಜಯಪುರಕ್ಕೆ ಬಂದು , ಮಠ ಸ್ಥಾಪಿಸಿ ನೆಲೆ ನಿಲ್ಲುತ್ತಾರೆ.

ಮುಂದಿನದು ಗುರುಗುಂಡ ಬ್ರಹ್ಮೇಶ್ವರರ ಪ್ರಿಯಶಿಷ್ಯ ನಂಜಾವಧೂತರ (ಬೆಂಗಳೂರು ಜಿಲ್ಲೆ ಒರ್ಟಳ್ಳಿಯಲ್ಲಿ ಜನನ) ಮಹಾತ್ಮೆ. ನಂದಿಬೆಟ್ಟದಲ್ಲಿ ಸಾಧುಸಂತರ ದರ್ಶನ ಮಾಡಿ ಒಂದೇ ಇರುಳಲ್ಲಿ ‘ಗುಂಡು ಕಲ್ಯಾಣ’ ನಿರ್ಮಿಸಿದರೆನ್ನುವ ಪ್ರತೀತಿ ಇವರದು. ಗುಂಡ ಬ್ರಹ್ಮರ ಶಿಷ್ಯರಾಗಿ ಸೇವೆ ಸಲ್ಲಿಸುತ್ತಿದ್ದ ನಂಜಾವಧೂತರು ತಮ್ಮ ಶಿಷ್ಯ ನರಸಾರ್ಯರೊಡನೆ ಧರ್ಮ ಪ್ರಚಾರಕ್ಕಾಗಿ ಹಂಪೆಗೆ ತೆರಳಿದರು. ಅಲ್ಲಿಂದ ಕೊರಟಗೆರೆ ತಾಲ್ಲೂಕು ಸಿದ್ಧರಬೆಟ್ಟದಲ್ಲಿ ತಪಸ್ಸು ಮಾಡಿ ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸಿದರಂತೆ.

ನಂಜಾವಧೂತರಿಗೆ ಕರಡಿಯಿಂದ ಬೋಧನೆ
ಆಂಧ್ರ ಪ್ರದೇಶದ ಈಗಿನ ಶಿವರ ಗ್ರಾಮದ ಸನಿಹ ಕಾಡಿನಲ್ಲಿ ಕರಡಿಯಾಂದು ಪ್ರಯಾಣದ ಸಂದರ್ಭದಲ್ಲಿ ನಂಜಾವಧೂತರನ್ನು ಅಡ್ಡಗಟ್ಟುತ್ತದೆ. ಕರಡಿಗೆ ಅಂಜದ ನಂಜಾವಧೂತರು- ‘ದೈವವಾದರೆ ಮುದ್ದಿಸಲಿ, ಇಲ್ಲವಾದರೆ ಕೊಲ್ಲಲಿ’ ಎಂದು ಧ್ಯಾನಾಸಕ್ತರಾದರಂತೆ. ಆ ಸಂದರ್ಭದಲ್ಲಿ ಮೈಲಾರಲಿಂಗ ರೂಪದಲ್ಲಿ ಪ್ರತ್ಯಕ್ಷವಾಗಿ ಧರ್ಮೋದ್ಧಾರ ಮಾಡಬೇಕಾಗಿರುವ ಸ್ಥಳದ ಬಗ್ಗೆ ಸೂಚನೆ ನೀಡುತ್ತದೆ. ಇದೇ ಸಂದರ್ಭದಲ್ಲಿ ಶಿಷ್ಯನನ್ನು ಹುಡುಕುತ್ತಾ ಬಂದ ಗುಂಡ ಬ್ರಹ್ಮೇಶ್ವರರು ಶಿಷ್ಯನನ್ನು ಕೂಡಿಕೊಳ್ಳುತ್ತಾರೆ. ಇಬ್ಬರೂ ಸೇರುವುದು ಪಟ್ಟನಾಯಕನಹಳ್ಳಿಯನ್ನು .

ಪಟ್ಟನಾಯಕನಹಳ್ಳಿಯ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಆಶ್ರಯ ಪಡೆಯುವ ಗುರುಶಿಷ್ಯರು ಮಹಾರಾಜರಿಂದ ಭೂಮಿ ಪಡೆಯುತ್ತಾರ. ಸುತ್ತಮುತ್ತಲ ಹಳ್ಳಿಯ ಜನರಲ್ಲಿ ಭಿಕ್ಷೆ ಬೇಡಿ ಮಠವನ್ನು ಕಟ್ಟುತ್ತಾರೆ. ಆನಂತರ ನಿನ್ನ ನೆರಳಾಗಿ ನಿಂತು ಕಾಯುತ್ತೇನೆ ಎಂದು ಆಶೀರ್ವದಿಸಿ ವಿಜಯಪುರಕ್ಕೆ ವಾಪಸ್ಸಾಗುತ್ತಾರೆ.

ಶ್ರೀಮಠ ಆಕರ್ಷಕ ದ್ರಾವಿಡ ವಾಸ್ತುಶೈಲಿಯ ವಿಶಾಲ ದೇಗುಲವನ್ನು ಹೊಂದಿದೆ. ಗರ್ಭಗುಡಿಯಲ್ಲಿನ ಎಂಟು ಅಡಿ ಎತ್ತರದ ಲಿಂಗ, ಭಾರೀ ನಗಾರಿ, ಗಂಧ ತೇಯುವ ಕಲ್ಲು , ಅಮೃತಶಿಲೆಯ ದತ್ತಾತ್ರೇಯ ಮೂರ್ತಿ ಇಲ್ಲಿನ ಆಕರ್ಷಣೆ. ದೇವಾಲಯಕ್ಕೆ ಬಳಸಿದ ಎಲ್ಲ ಕಲ್ಲುಗಳು ಮದ್ದಕ್ಕನಹಳ್ಳಿಯ ಗ್ರಾನೈಟ್‌ ಗಣಿಯಿಂದ ಬಂದಿವೆ. ಪ್ರತಿ ವರ್ಷ ಪುಷ್ಯಮಾಸ ಶುದ್ಧ ಪೌರ್ಣಿಮೆ ದಿನದಿಂದ ಆರಂಭವಾಗುವ ಜಾತ್ರೆ 18 ದಿನಗಳವರೆಗೆ ನಡೆಯುತ್ತದೆ.

ಚಂದ್ರಕಾಂತ ಶಿಲೆಯಲ್ಲಿ ರೂಪಿಸಿರುವ ನಾಲ್ಕು ಚಕ್ರಗಳ 30 ಅಡಿ ಎತ್ತರದ ಕಲ್ಲುಗಾಲಿ ತೇರು ರಾಜ್ಯದ ಅಪರೂಪದ ಹಾಗೂ ವಿಶಿಷ್ಟ ರಥಗಳಲ್ಲೊಂದು. ಗುರುಗಳ ನೆನಪಿಗಾಗಿ ನಂಜಾವಧೂತರು ಈ ರಥ ನಿರ್ಮಿಸಿದರಂತೆ.

ಸ್ತ್ರೀಯರಿಗೆ ಪ್ರವೇಶವಿಲ್ಲ -ಜಾತ್ರೆಯ ಕಾಲದಲ್ಲಿ 9 ದಿನಗಳ ಹೊರತಾಗಿ ಉಳಿದಂತೆ ಸ್ತ್ರೀಯರಿಗೆ ಮಠಕ್ಕೆ ಪ್ರವೇಶವಿಲ್ಲ .
ಸಾರಿಗೆ - ಬೆಂಗಳೂರಿನಿಂದ ಶಿರಾಕ್ಕೆ 124 ಕಿಮೀ ಪ್ರಯಾಣ. ಅಲ್ಲಿಂದ ಪಟ್ಟನಾಯಕನಹಳ್ಳಿಗೆ 18 ಕಿಮೀ ದೂರ. ಬಸ್ಸಿನಲ್ಲಿಯೇ ಹೋಗಬೇಕು. ಮಠದಲ್ಲಿ ಉಚಿತ ಊಟ, ವಸತಿಯ ವ್ಯವಸ್ಥೆಯಿದೆ. ಶಿರಾದಲ್ಲಿ ಖಾಸಗಿ ವಸತಿ ಗೃಹಗಳಿವೆ. ಮಠದ ಪೀಠಕ್ಕೆ ಹೂ ತಂದ ಅವಧೂತರು
ಶ್ರೀ ನಂಜಾವಧೂತ, ರಂಗಾವಧೂತ, ಶ್ರೀರಂಗಾವಧೂತ, ಮುದ್ದ ರಂಗಾವಧೂತ, ಪರಮ ಹಂಸಾಧೂತ, ಗುರುಕುಮಾರಾವಧೂತ, ನಂಜಾವಧೂತ (ಹಾಲಿ ಸ್ವಾಮೀಜಿ)

ವಾರ್ತಾ ಸಂಚಯ
ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X