ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ 8 ಜನರಲ್ಲೊಬ್ಬರಿಗೆ ಕಾಡುತ್ತದೆ ಸಕ್ಕರೆ ಕಾಯಿಲೆ

By Staff
|
Google Oneindia Kannada News

* ಇಮ್ರಾನ್‌ ಖುರೇಷಿ

ಬೆಂಗಳೂರು : ಮಧುಮೇಹ (ಸಕ್ಕರೆ ಕಾಯಿಲೆ) ದಿಂದ ನರಳುತ್ತಿರುವ ಮೂವತ್ತು ದಶಲಕ್ಷ ಭಾರತೀಯರಿಗೆ ಪ್ರಾಥಮಿಕ ಮಾಹಿತಿಗಳನ್ನು ಒದಗಿಸುವ ಸೇವೆ ಆರಂಭವಾಗಿದೆ. ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರಲ್ಲಿ ಆರಂಭವಾಗಿರುವ ಈ ಸೇವೆ ಏಷ್ಯಾದಲ್ಲೇ ಪ್ರಪ್ರಥಮ.

ಈ ಮಾಹಿತಿ ಸೇವೆಯಲ್ಲಿ ನುರಿತ ಪಥ್ಯತಜ್ಞರು, ನರ್ಸ್‌ಗಳು ಬೆಳಗ್ಗೆ 7.30ರಿಂದ ಪ್ರತಿದಿನ 12 ಗಂಟೆಗಳ ಕಾಲ ಇಂಗ್ಲಿಷ್‌, ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಗುಜರಾತಿ ಭಾಷೆಗಳಲ್ಲಿ ರೋಗಿಗಳಿಗೆ ಪ್ರಾಥಮಿಕ ಮಾಹಿತಿಗಳನ್ನು ಒದಗಿಸುತ್ತಾರೆ.

ಬೆಂಗಳೂರು ಅಥವಾ ಭಾರತದ ಇನ್ನಾವುದೇ ಪ್ರದೇಶಕ್ಕಿಂತ ಹೆಚ್ಚು ಮಧುಮೇಹಿಗಳಿರುವ ದಕ್ಷಿಣ ಭಾರತದ ಯಾವುದೇ ರಾಜ್ಯದ ರೋಗಿಗಳು ತಮ್ಮ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಈ ಸೇವೆಯ ಉಚಿತ ದೂರವಾಣಿ ಸಂಖ್ಯೆ 1901-338014 ನಿಂದ ಪಡೆಯಬಹುದಾಗಿದೆ. ಬೆಂಗಳೂರಿನಿಂದ ಹೊರಗೆ ಇರುವವರು (ಅಲ್ಲಿ ಕೂಡ ಉಚಿತ ಸೇವೆ ಆರಂಭವಾಗುವವರೆಗೆ ) ಈ ಸಂಖ್ಯೆಗೆ ಎಸ್‌.ಟಿ.ಡಿ ಕೋಡ್‌ 080 ಸೇರಿಸಿ ಮಾಹಿತಿ ಪಡೆಯಬಹುದು.

ಈ ಸೇವೆಯಲ್ಲಿ ರೋಗಿಗಳು, ವೈದ್ಯರಿಂದ ಕೂಡ ಮಧುಮೇಹಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮಾತ್ರ ಪರಿಹಾರ ಕೇಳಬಹುದಾಗಿದೆ. ಇದರಿಂದಾಗಿ ಮಧುಮೇಹದ ಬಗ್ಗೆ ಜನರಲ್ಲಿ ಸುಪ್ತವಾಗಿರುವ ತಪ್ಪುಕಲ್ಪನೆಗಳು ದೂರವಾಗಲಿದೆ. ಈ ರೋಗದ ಬಗ್ಗೆ ಸೂಕ್ತ ಅರಿವು ಮೂಡಿಸದಿದ್ದರೆ, ಮುಂದಿನ ಐದು ವರ್ಷಗಳಲ್ಲಿ ರೋಗದಿಂದ ಕಾಲು ಕಳೆದುಕೊಳ್ಳುವ ಹಾಗೂ ಅಂಧರಾಗುವ ರೋಗಿಗಳ ಸಂಖ್ಯೆ ಒಂದು ದಶಲಕ್ಷವನ್ನೂ ದಾಟುವ ಸಾಧ್ಯತೆ ಇದೆ ಎನ್ನುತ್ತಾರೆ ನೋವೋ ನಾರ್‌ಡಿಸ್ಕ್‌ ಫಾರ್ಮಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನಿಲ್‌ ಕಪೂರ್‌.

ಸಮೀಕ್ಷೆಗಳ ರೀತ್ಯ ಬೆಂಗಳೂರಿನ ವಯಸ್ಕರಲ್ಲಿ ಶೇಕಡಾ 12.8ರಷ್ಟು ಮಂದಿ ಮಧುಮೇಹದಿಂದ ನರಳುತ್ತಿದ್ದಾರೆ ಅಥವಾ ಪ್ರತಿ 8ನೇ ವ್ಯಕ್ತಿ ಮಧುಮೇಹಿಯಾಗಿರುತ್ತಾನೆ. ದೆಹಲಿ ಹಾಗೂ ಮುಂಬಯಿಯಲ್ಲಿ ಶೇ. 11ರಷ್ಟು, ಚೆನ್ನೈನಲ್ಲಿ ಶೇಕಡಾ 13.9ರಷ್ಟು, ಪ್ರತಿಶತ 16ರಷ್ಟು ಹೈದರಾಬಾದ್‌ನಲ್ಲಿ ಮಧುಮೇಹಿಗಳಿದ್ದು, ಭಾರತದ ಒಟ್ಟಾರೆ ಸರಾಸರಿ 13.2ರಷ್ಟು . ಈ ಅಂಕಿಅಂಶಗಳು ಕಾಯಿಲೆಯ ತೀವ್ರತೆಯನ್ನು ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ಈ ಮಾಹಿತಿ ಸೇವೆ ಆರಂಭಿಸಲಾಯಿತು ಎಂದು ಅವರು ಹೇಳಿದರು.

ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ ಈ ಕಾಯಿಲೆಯ ತೀವ್ರತೆ ಹೆಚ್ಚಾಗಿದೆ. ಇದಕ್ಕೆ ಹಲವು ಕಾರಣಗಳಿದ್ದು, ತ್ವರಿತಗತಿಯಲ್ಲಿ ಬೆಳೆಯುತ್ತಿರುವ ನಗರೀಕರಣವೂ ಒಂದಾಗಿದೆ. ಇತ್ತೀಚಿನ ದಿನಗಳಲ್ಲಂತೂ ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಹೈದರಾಬಾದ್‌ನಂತಹ ನಗರದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗಲು ರಕ್ತಸಂಬಂಧದ ಮದುವೆಗಳೂ ಕಾರಣವಾಗಿವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ಕಪೂರ್‌ ತಿಳಿಸಿದ್ದಾರೆ. ನಗರ ಪ್ರದೇಶಗಳ ಜೀವನ ಕ್ರಮ, ಹೆಚ್ಚಿನ ಒತ್ತಡ, ರಕ್ತದ ಒತ್ತಡ ಮತ್ತು ಕಾಯಿಲೆಯ ಬಗ್ಗೆ ಮಾಹಿತಿಯ ಅರಿವು ಇಲ್ಲದಿರುವುದೂ ರೋಗಗ್ರಸ್ತರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ.

ರೋಗವನ್ನು ಪತ್ತೆಹಚ್ಚುವಲ್ಲಿ ಆಗುತ್ತಿರುವ ವಿಳಂಬ, ಚಿಕಿತ್ಸೆಯಲ್ಲಿನ ಕೊರತೆಯಿಂದ ರೋಗ ನಿಯಂತ್ರಣ ಕಷ್ಟವಾಗಿದೆ. ರೋಗಿ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಈ ಹಿನ್ನೆಲೆಯಲ್ಲಿ ಇನ್‌ಫೋಲೈನ್‌ ಸೇವೆ ರೋಗಿಗಳಿಗೆ ಸೂಕ್ತ ಮಾಹಿತಿ ನೀಡಲಿದೆ ಎಂಬುದು ಅವರ ಅನಿಸಿಕೆ.

ಭಾರತದಲ್ಲಿ ಮಧುಮೇಹ ಇರುವ ಮದುವೆಯಾದ ಹೆಣ್ಣು ಮಕ್ಕಳು, ತಮ್ಮ ಗಂಡನ ಮನೆಯವರಿಗೆ ಕಾಯಿಲೆ ಬಗ್ಗೆ ಗೊತ್ತಾದರೆ, ತಮ್ಮ ವೈವಾಹಿಕ ಸಂಬಂಧವೇ ಕಡಿದು ಹೋದೀತು ಎಂಬ ಭಯದಿಂದ ಕಾಯಿಲೆಯನ್ನೇ ಮುಚ್ಚಿಡುತ್ತಾರೆ. ಇನ್‌ಸುಲಿನ್‌ ಕೂಡ ತೆಗೆದುಕೊಳ್ಳುವುದಿಲ್ಲ ಇಂತಹ ಪ್ರಕರಣಗಳಲ್ಲಿ ವ್ಯಾಧಿ ಉಲ್ಬಣಿಸುತ್ತದೆ ಎನ್ನುವ ಕಪೂರ್‌ ಸಂಸಾರ ಗುಟ್ಟು ವ್ಯಾಧಿ ರಟ್ಟು ಎಂಬ ಗಾದೆಯನ್ನು ನೆನಪಿಸುತ್ತಾರೆ.

(ಐ.ಎ.ಎನ್‌.ಎಸ್‌.)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X