ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾವು ತಿನ್ನುವ ಮುನ್ನ ಒಮ್ಮೆ ಯೋಚಿಸಿ

By Staff
|
Google Oneindia Kannada News

Mangoಮಾರುಕಟ್ಟೆಯ ತುಂಬಾ ಹಣ್ಣುಗಳ ರಾಜ ಮಾವಿನದೇ ಕಾರುಬಾರು. ಮಾವಿನ ಸುಗ್ಗಿ ಈ ಬಾರಿ ಪಸಂದಾಗಿದೆ. ಮಲ್ಲಿಕಾ, ಸಿಂಧೂರ, ಬೈಗಾನ್‌ಪಲ್ಲಿ , ಮಲಗೋಬಾ ಹಣ್ಣುಗಳೇ ಕಾಸಿಗೆ ಕೊಸರಿಗೆ ಬಿಕರಿಯಾಗುತ್ತಿರುವಾಗ ನೀಲಂ, ರಸಪುರಿಗಳು ಬೇಡಿಕೆ ಕಳಕೊಂಡಿವೆ. ಅಂದಮಾತ್ರಕ್ಕೆ ಮನಸ್ಸು , ನಾಲಗೆ ತಣಿಯುವಷ್ಟರ ಮಟ್ಟಿಗೆ ಮಾವನ್ನು ಸವಿಯುವಂತಿಲ್ಲ . ಯಾಕೆಂದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಮಾವಿನ ಹಣ್ಣುಗಳು ಆರೋಗ್ಯಕ್ಕೆ ಪೂರಕವಾಗೇನೂ ಇಲ್ಲ .

ಮಾವಿನ ಹಣ್ಣುಗಳು ಆರೋಗ್ಯಕ್ಕೆ ಹಾನಿ ಮಾಡುವ ಕುರಿತು ಪ್ರಸಿದ್ಧ ತೋಟಗಾರಿಕಾ ವಿಜ್ಞಾನಿ ಡಾ. ವಿ. ಸ್ವಾಮಿನಾಥನ್‌ ಎಚ್ಚರಿಕೆ ನೀಡುತ್ತಾರೆ. ಮಾವನ್ನು ಹಣ್ಣು ಮಾಡುವಲ್ಲಿ ವ್ಯಾಪಾರಿಗಳು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕ ಆರೋಗ್ಯಕ್ಕೆ ಹಾನಿಕರ ಎನ್ನುವುದು ಸ್ವಾಮಿನಾಥನ್‌ರ ಸ್ಪಷ್ಟ ಅಭಿಪ್ರಾಯ.

ಕ್ಯಾನ್ಸರ್‌ ಮಾರಿಯೂ ಬರಬಹುದು!
ಬೇಸಗೆ ಪ್ರಾರಂಭವಾಗುವ ಮುನ್ನವೇ ಮಾರುಕಟ್ಟೆಗೆ ಆಗಮಿಸುವ ಮಾವನ್ನು ತಿನ್ನುವ ಮುನ್ನ ಯೋಚಿಸುವುದು ಒಳ್ಳೆಯದೇ. ಸುಗ್ಗಿಗೆ ಮುನ್ನವೇ ಮಾರುಕಟ್ಟೆಗೆ ಬರುವ ಮಾವನ್ನು ಹಣ್ಣು ಮಾಡುವಲ್ಲಿ ವ್ಯಾಪಾರಿಗಳು ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿರುತ್ತಾರೆ. ಮಾವನ್ನು ಬಲವಂತವಾಗಿ ಹಣ್ಣಾಗಿಸುವ ಕ್ಯಾಲ್ಸಿಯಂ ಕಾರ್ಬೈಡ್‌ನ ಅಧಿಕ ಸೇವನೆ ಕ್ಯಾನ್ಸರ್‌ಗೆ ಕಾರಣವಾಗಬಹುದು. ರಾಸಾಯನಿಕ ಬಳಸಿ ಕಳಿತ ಹಣ್ಣುಗಳು ಗ್ಯಾಸ್ಟ್ರೋಎಂಟೆರೈಟಿಸ್‌ ಬಾಧೆಗೂ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ವೆಲ್ಡಿಂಗ್‌ ಹಾಗೂ ಲೋಹಗಳನ್ನು ಕತ್ತರಿಸಲು ಬಳಸುವ ಅಸಿಟಲಿನ್‌ ಅನಿಲವನ್ನು ಉತ್ಪಾದಿಸುವುದು ಇದೇ ಕ್ಯಾಲ್ಸಿಯಂ ಕಾರ್ಬೈಡ್‌ ರಾಸಾಯನಿಕದಿಂದಲೇ ಎನ್ನುವುದು ನಿಮಗೆ ಗೊತ್ತೇ!

ಕ್ಯಾಲ್ಸಿಯಂ ಕಾರ್ಬೈಡ್‌ ಬಳಕೆಯಿಂದ ಹಣ್ಣಾದ ಮಾವನ್ನು ಗುರ್ತಿಸುವುದು ಸುಲಭ. ಮೇಲ್ನೋಟಕ್ಕೆ ಹಣ್ಣು ಮಾಗಿದಂತೆ ಕಂಡರೂ, ತಿರುಳು ಗಟ್ಟಿಯಾಗಿಯೇ ಇರುತ್ತದೆ. ಹಣ್ಣಿನ ವಾಸನೆ ಕೂಡ ಅಸಹಜ. ಹಣ್ಣಿನ ಹೊರಪದರದಲ್ಲಿ ಲೇಪಿತವಾಗಿರುವ ಬಿಳಿ ಪದರವನ್ನು ಬರಿಗಣ್ಣಿಂದಲೇ ಕಾಣಬಹುದು. ಕೆಲವು ಹಣ್ಣುಗಳು ಅಸ್ವಾಭಾವಿಕ ಹಸುರು ಪ್ಯಾಚ್‌ ಕೂಡಿದ ಕಡು ಹಳದಿ ಬಣ್ಣ ಹೊಂದಿರುತ್ತವೆ.

ಹೊಗೆ ಹಾಕಿ ಹಣ್ಣು ಮಾಡುವುದು ಒಳ್ಳೆಯ ಸಂಪ್ರದಾಯ
ತೋಟಗಾರಿಕಾ ತಜ್ಞರ ಪ್ರಕಾರ ಹಣ್ಣನ್ನು ಮಾಗಿಸಲು ಬಳಸುವ ಸಾಂಪ್ರದಾಯಿಕ ವಿಧಾನಗಳು ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲಕರ. ಆದರೆ, ಹೊಗೆ ಹಾಕುವ ಮೂಲಕ ಹಣ್ಣು ಮಾಡುವಂತಹ ಸಾಂಪ್ರದಾಯಿಕ ಕ್ರಮಗಳು ಹೆಚ್ಚು ಕಾಲವನ್ನು ಬೇಡುತ್ತವೆ. ಇದರಿಂದಾಗಿಯೇ ವ್ಯಾಪಾರಿಗಳು ಕೃತಕ ವಿಧಾನಕ್ಕೇ ಮೊರೆ ಹೋಗುತ್ತಾರೆ. ನಿಮ್ಮ ಆರೋಗ್ಯದ ಬಗ್ಗೆ ಯೋಚಿಸುವ ಜವಾಬ್ದಾರಿ ವ್ಯಾಪಾರಿಗಳದಲ್ಲವಾದ್ದರಿಂದ, ಮಾವು ತಿನ್ನುವ ಮುನ್ನ ಆರೋಗ್ಯದ ಬಗೆಗೊಮ್ಮೆ ಯೋಚಿಸಿ. ಸಹಜವಾಗಿ ಹಣ್ಣಾದ ಮಾವು ಮಾರುಕಟ್ಟೆಗೆ ಬರುವವರೆಗೂ ಕಾಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ನೆನಪಿಡಿ- ಹೊಳೆಯುವ ಲೋಹವೆಲ್ಲ ಬಂಗಾರವಲ್ಲ. ಅಂತೆಯೇ ಮಾಗಿದಂತೆ ಹಳದಿಯಾಗಿ ಕಣ್ಕುಕ್ಕುವ ಮಾವೆಲ್ಲ ತಿನ್ನಲು ಯೋಗ್ಯವಲ್ಲ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X