ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರಂಡಿ@

By Staff
|
Google Oneindia Kannada News

ಬೆಂಗಳೂರು : ಚರಂಡಿಗಳಾಗಿರುವ ರಸ್ತೆಗಳು ಇನ್ನು 3 ವರ್ಷಗಳಲ್ಲಿ ಪಕ್ಕಾ ರಸ್ತೆಗಳಾಗಿ ಪರಿವರ್ತನೆಯಾಗಲಿವೆ ! ಮುಖ್ಯಮಂತ್ರಿ ಕೃಷ್ಣ ಕೊಟ್ಟಿರುವ ಸದ್ಯದ ಭರವಸೆಯಿಂದ ನಾವು- ನೀವು ಹಾಗಂದುಕೊಳ್ಳಬಹುದು.

ನಗರದ ಚರಂಡಿಗಳಲ್ಲಿ ನೀರು ಸರಿಯಾಗಿ ಹರಿದು ಹೋಗಲು 3 ವರ್ಷ ಅವಧಿಯ 100 ಕೋಟಿ ರುಪಾಯಿ ವೆಚ್ಚದ ಯೋಜನೆಯಾಂದನ್ನು ಕೈಗೆತ್ತಿಕೊಳ್ಳುವುದಾಗಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಿಳಿಸಿದ್ದಾರೆ. ಸಂದರ್ಭ- ಸೋಮವಾರ, ನಗರಾಭಿವೃದ್ಧಿ ಕಾರ್ಯಗಳ ಪರಿಶೀಲನೆ. ಸ್ಥಳ- ಮಾಗಡಿ ಕೆಂಪೇಗೌಡ ಕಟ್ಟಿಸಿದ ಅಲಸೂರು ಕೆರೆ ಬಳಿಯ ವೀಕ್ಷಣಾ ಗೋಪುರ.

ಮೊನ್ನೆ ಸುರಿದ ಅನಿರೀಕ್ಷಿತ ಮಳೆಯಿಂದ ರಸ್ತೆಗಳೆಲ್ಲಾ ಕೆರೆಗಳಾಗಿದ್ದು, ಆಪ್ಟಿಕ್‌ ಫೈಬರ್‌ ಎಂಬ ಹನುಮಂತನ ಬಾಲಗಳ ಹುದುಗಿಸಲು ಅಗೆದ ಗುಂಡಿಗಳು ಕೆಸರು ಬಾವಿಗಳಾಗಿದ್ದನ್ನು ನೋಡಿರುವ ಬೆಂಗಳೂರಿಗರ ಅಳಲು ಮುಖ್ಯಮಂತ್ರಿಗಳಿಗೆ ತಟ್ಟಿದೆಯಂತೆ. ಇದಕ್ಕಾಗೇ ಇನ್ನೊಂದು ಹಿಡಿ ಭರವಸೆಗಳನ್ನು ಅವರು ಕೊಟ್ಟಿದ್ದಾರೆ....

  • ಕಳೆದ ವರ್ಷ ಬಿದ್ದ ಭಾರೀ ಮಳೆ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ಮನೆಗಳನ್ನು ತೊಳೆದು ಹಾಳು ಮಾಡಿತು. ಅಲ್ಲಿನ ಕಾಲುವೆ ಗೋಡೆ ಎತ್ತರ ಹೆಚ್ಚಿಸಲಾಗುವುದು.
  • ಅಲಸೂರು ಕೆರೆಗೆ ನುಗ್ಗುತ್ತಿರುವ ಕೊಳಚೆ ನೀರನ್ನು ಪ್ರತ್ಯೇಕಿಸಲು 4 ಕೋಟಿ ರುಪಾಯಿಗಳ ಯೋಜನೆ ಹಮ್ಮಿಕೊಳ್ಳಲಾಗಿದೆ (ಇದಕ್ಕಾಗಿ ಬಿಡಿಎ ಅಧ್ಯಕ್ಷ ಜೈಕರ್‌ ಜರೋಮ್‌ 1 ಕೋಟಿ ರು.ಗಳ ಚೆಕ್ಕನ್ನು ಕೃಷ್ಣ ಅವರಿಗೆ ನೀಡಿದರು. ಈ ಮೊತ್ತಕ್ಕೆ ಪಾಲಿಕೆಯ 2 ಕೋಟಿ ರುಪಾಯಿಯನ್ನೂ ಸೇರಿಸಿ ಯೋಜನೆ ಜಾರಿಗೆ ತರಲಾಗುವುದು).
  • ಕಲಾಸಿಪಾಳ್ಯದ ಬಸ್‌ ನಿಲ್ದಾಣವನ್ನು ಆಧುನೀಕರಣಗೊಳಿಸಿ, ಅಲ್ಲಿರುವ ಬೊಂಬು ಕಬ್ಬಿಣ ಮತ್ತು ತರಕಾರಿ ಸಗಟು ಮಾರುಕಟ್ಟೆಯನ್ನು ನಗರದ ಹೊರವಲಯಕ್ಕೆ ಸ್ಥಳಾಂತರ ಮಾಡುತ್ತೇವೆ. ತರಕಾರಿ ಮಾರುಕಟ್ಟೆಯನ್ನು ಬನಶಂಕರಿಯಲ್ಲಿರುವ ಪಾಲಿಕೆಯ 12 ಎಕರೆ ಜಾಗಕ್ಕೆ, ಬೊಂಬು ಮತ್ತು ಕಬ್ಬಿಣ ಮಾರುಕಟ್ಟೆಯನ್ನು ಹೊಸೂರು ರಸ್ತೆಗೆ ಸ್ಥಳಾಂತರ ಮಾಡುವ ಯೋಚನೆಯಿದೆ.
  • ಮೇಖ್ರಿ ವೃತ್ತದ ರಸ್ತೆ ವಿಭಾಜಕ ಕಾಮಗಾರಿಯನ್ನು ಆಗಸ್ಟ್‌ 15ರೊಳಗೆ ಪೂರೈಸಲು ಪಾಲಿಕೆಗೆ ಸೂಚಿಸಲಾಗಿದೆ.
  • ನಿರ್ಮಾಣ, ನಿರ್ವಹಣೆ ಮತ್ತು ಹಸ್ತಾಂತರ ಯೋಜನೆಯಡಿ ಬೆಂಗಳೂರಲ್ಲಿ 140 ಬಸ್‌ ತಂಗುದಾಣಗಳನ್ನು ನಿರ್ಮಿಸಲಾಗುತ್ತಿದೆ. ಈ ಪೈಕಿ 90 ತಂಗುದಾಣಗಳ ಕಾಮಗಾರಿ ಪೂರ್ಣವಾಗಿದೆ. ಮುಂದೆ ಇದೇ ಯೋಜನೆಯನ್ನು ವಿಸ್ತರಿಸಿ 500 ತಂಗುದಾಣಗಳನ್ನು ನಿರ್ಮಿಸುತ್ತೇವೆ.
ಎಂಟು ತಿಂಗಳ ಹಿಂದೆ ನಗರ ಪ್ರದಕ್ಷಿಣೆ ನಡೆಸಿ, ತಾವು ಕೊಟ್ಟಿದ್ದ ಸಲಹೆಗಳನ್ನು ಮಹಾನಗರ ಪಾಲಿಕೆ, ಬಿಡಿಎ ಹಾಗೂ ಬೆಂಗಳೂರು ಜಲಮಂಡಲಿ ಮತ್ತು ನಗರ ಸಂಚಾರಿ ಪೊಲೀಸರು ಸಮರ್ಪಕವಾಗಿ ಜಾರಿಗೆ ತಂದಿದ್ದಾರೆ. ಅವರ ಕೆಲಸ ತಮಗೆ ಸಮಾಧಾನ ತಂದಿದೆ ಎಂದು ಕೃಷ್ಣ ಹೇಳಿದಾಗ, ನೆರೆದ ಜನರಲ್ಲಿ ಹಲವರು ಯಾವುದಪ್ಪಾ ಆ ಸಲಹೆ ಅಂತ ಸಣ್ಣಗೆ ಮಾತಾಡಿಕೊಂಡು, ಮೆಲ್ಲಗೆ ನಗುತ್ತಿದ್ದರು.

ಮುಖ್ಯಮಂತ್ರಿ ಉತ್ಸವದಿಂದ ಟ್ರಾಫಿಕ್‌ ಜಾಂ

ಮುಖ್ಯಮಂತ್ರಿಗಳು ನಗರೋತ್ಸವ ಹೊರಡಬೇಕಾಗಿದ್ದುದು ಬೆಳಗ್ಗೆ 9.30ಕ್ಕೆ. ಮೀಟಿಂಗ್‌ನಿಂದ ಅವರ ಕಾರ್ಯಕ್ರಮವನ್ನು 10 ಗಂಟೆಗೆ ಮುಂದೂಡಲಾಯಿತು. ಕಚೇರಿಗೆ ಹೋಗುವ ಮಂದಿ ಇದರಿಂದ ಸಿಕ್ಕಾಪಟ್ಟೆ ತೊಂದರೆ ಅನುಭವಿಸಿದರು. ಮುಖ್ಯಮಂತ್ರಿ ವಾಹನಕ್ಕೆ ಸುಗಮ ಸಂಚಾರದ ಅನುಕೂಲ ಮಾಡಿಕೊಡಲು ಉಳಿದ ವಾಹನಗಳನ್ನು ನಿಂತಲ್ಲೇ ನಿಲ್ಲಿಸಲಾಗಿತ್ತು. ಹಾರ್ನ್‌ಗಳು ಎಡಬಿಡದೆ ಹೊಡೆದುಕೊಳ್ಳುತ್ತಿದ್ದವು. ಸುಮಾರು 1 ತಾಸಿಗೂ ಹೆಚ್ಚು ಕಾಲ ನಾಗರಿಕರು ತೊಂದರೆ ಅನುಭವಿಸಿದರು.

ತೊಂದರೆ ಉಂಟಾಗಿದ್ದು ಈ ಜಾಗೆಗಳಲ್ಲಿ- ಸ್ಯಾಂಕಿ ರಸ್ತೆ, ಕಾವೇರಿ ಜಂಕ್ಷನ್‌, ಟಾಟಾ ಇನ್ಸ್‌ಟಿಟ್ಯೂಟ್‌, ಭಾಷ್ಯಂ ವೃತ್ತ, ಶೇಷಾದ್ರಿಪುರ ಮುಖ್ಯರಸ್ತೆ, ಮೇಖ್ರಿ ವೃತ್ತ, ನೃಪತುಂಗ ರಸ್ತೆ, ಹಡ್ಸನ್‌ ವೃತ್ತ, ಕೆ.ಆರ್‌.ಮಾರುಕಟ್ಟೆ, ಬ್ಯೂಗಲ್‌ ರಾಕ್‌, ಬುಲ್‌ ಟೆಂಪಲ್‌ ರಸ್ತೆ, ಬೆಂಗಳೂರು ಡೇರಿ ವೃತ್ತ, ಕಿಮ್ಕೋ ಲಿಂಕ್‌ ರಸ್ತೆ, ಕೆಂಪಾಂಬುಧಿ ಕೆರೆ, ಟ್ರಿನಿಟಿ ವೃತ್ತ, ಅಲಸೂರು ಕೆರೆ.

ಈ ಟ್ರಾಫಿಕ್‌ ಜಾಂ ಭರಾಟೆಯಲ್ಲಿ ಪತ್ರಕರ್ತರನ್ನು ಹೊತ್ತೊಯ್ಯ್ತುತಿದ್ದ ವ್ಯಾನು ಇದ್ದಕ್ಕಿದ್ದಂತೆ ನಿಂತ ಪರಿಣಾಮ ಕಾರೊಂದು ಹಿಂದಿನಿಂದ ಗುದ್ದಿತು. ಕಾರು ಹಾಳಾದ್ದದಲ್ಲದೆ, ಕೆಲವು ಪತ್ರಕರ್ತರಿಗೂ ಸಣ್ಣಪುಟ್ಟ ಗಾಯಗಳಾಗಿವೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X