ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನ ವಿರೋಧದ ಭಯದಲ್ಲಿ ನೇಪಾಳದ ನೂತನ ದೊರೆ

By Staff
|
Google Oneindia Kannada News

ಕಠ್ಮಂಡು : ಗುಂಡೇಟಿನಿಂದ ಗಾಯಗೊಂಡು ಜೀವನ್ಮರಣದ ನಡುವೆ ತುಯ್ದಾಡುತ್ತಿದ್ದ ನೇಪಾಳದ ನೂತನ ದೊರೆ ದೀಪೇಂದ್ರ ಸೋಮವಾರ ಬೆಳಗ್ಗೆ ನಿಧನರಾಗಿದ್ದು , ಅವರ ಜಾಗೆಯಲ್ಲಿ ದೀಪೇಂದ್ರ ಅವರ ಚಿಕ್ಕಪ್ಪ (ಹತ್ಯೆಗೊಳಗಾದ ದೊರೆ ಬೀರೇಂದ್ರ ಸೋದರ) ಜ್ಞಾನೇಂದ್ರ ಅವರನ್ನು ನೂತನ ದೊರೆಯನ್ನಾಗಿ ಹೆಸರಿಸಲಾಗಿದೆ.

ಸೋಮವಾರ ಮುಂಜಾನೆ 3.45 ರ ಸುಮಾರಿಗೆ ದೀಪೇಂದ್ರ ನಿಧನರಾದರು ಎಂದು ನೇಪಾಳ ರೇಡಿಯಾ ವರದಿ ಮಾಡಿದೆ. ‘ದಿ ಕಿಂಗ್‌ ಈಸ್‌ ಡೆಡ್‌, ಲಾಂಗ್‌ ಲೀವ್‌ ದಿ ಕಿಂಗ್‌’ ಎನ್ನುವ ಅಧಿಕೃತ ಘೋಷಣೆಯಾಂದಿಗೆ ದೀಪೇಂದ್ರ ಅವರ ಮರಣ ವಾರ್ತೆಯನ್ನು ಬಿತ್ತರಿಸಲಾಯಿತು. ಕೇವಲ ಎರಡು ದಿನಗಳ ಹಿಂದೆಯಷ್ಟೇ ದೀಪೇಂದ್ರ ಅವರನ್ನು ನೇಪಾಳದ ದೊರೆಯನ್ನಾಗಿ ಘೋಷಿಸಲಾಗಿತ್ತು .

ಶುಕ್ರವಾರ ರಾತ್ರಿ ನಡೆದ ದುರಂತದಲ್ಲಿ ಹೆತ್ತವರಾದ ದೊರೆ ಬೀರೇಂದ್ರ ಹಾಗೂ ಮಹಾರಾಣಿ ಐಶ್ವರ್ಯಾ ಸೇರಿದಂತೆ ರಾಜಕುಟುಂಬದ ಸದಸ್ಯರನ್ನು ರಾಜಕುಮಾರ ದೀಪೇಂದ್ರ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಸ್ವತಃ ಗುಂಡು ಹಾರಿಸಿಕೊಂಡು ಗಾಯಗೊಂಡಿದ್ದ ದೀಪೇಂದ್ರ ಅವರನ್ನು ನೇಪಾಳ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಗಿತ್ತು .

ಜನ ವಿರೋಧದ ಅಂಜಿಕೆಯಲ್ಲಿ ಜನಪ್ರಿಯರಲ್ಲ ದ ಜ್ಞಾನೇಂದ್ರ

ಎರಡು ದಿನಗಳ ಹಿಂದೆ ಹಂಗಾಮಿ ದೊರೆಯಾಗಿ ನೇಮಕಗೊಂಡು, ಪ್ರಸ್ತುತ ದೀಪೇಂದ್ರ ಮರಣದಿಂದ ದೊರೆ ಸ್ಥಾನಕ್ಕೆ ಹೆಸರಿಸಲಾಗಿರುವ ಜ್ಞಾನೇಂದ್ರ(53) ನೇಪಾಳಿಯರ ಮನಸ್ಸನ್ನು ಗೆದ್ದ ನಾಯಕರೇನೂ ಅಲ್ಲ . ಆ ಕಾರಣದಿಂದಾಗಿಯೇ ಜ್ಞಾನೇಂದ್ರ ಅವರ ಆಯ್ಕೆಗೆ ಜನತೆಯ ಪ್ರತಿಭಟನೆ ಎದುರಾಗಬಹುದೆನ್ನುವ ಆತಂಕ ಆಡಳಿತ ವ್ಯವಸ್ಥೆಯನ್ನು ಕಾಡುತ್ತಿದೆ.

ಜ್ಞಾನೇಂದ್ರ ಅವರು ದೊರೆಯಾಗುವುದರಿಂದ 1990 ರ ದಿನಗಳು ಮರಳಬಹುದೆನ್ನುವ ಶಂಕೆ ಜನತೆಯಲ್ಲಿದೆ. ಕಠ್ಮಂಡುವಿನ ಹಳೆಯ ಅರಮನೆಯ ಸಮೀಪ ಭಾರೀ ಜನ ಸಂದಣಿ ಸೇರಿದ್ದು , ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸೇನೆ ಕಟ್ಟೆಚ್ಚರ ವಹಿಸಿದೆ. ಜ್ಞಾನೇಂದ್ರ ಅವರ ಏಕೈಕ ಪುತ್ರ ರಾಜಕುಮಾರ ಪರಸ್‌ ಷಾ ಕೂಡ ತಮ್ಮ ಒರಟು ನಡಾವಳಿಯಿಂದ ಜನ ವಿರೋಧ ಗಳಿಸಿದ್ದಾರೆ. ಕಳೆದ ವರ್ಷ ರಸ್ತೆ ಅಪಘಾತವೊಂದಕ್ಕೆ ಕಾರಣರಾಗಿದ್ದ ಷಾ, ಕನಿಷ್ಠ 5 ಮಂದಿಯ ಮರಣಕ್ಕೆ ಕಾರಣರಾಗಿದ್ದರು.

ನೇಪಾಳದ ಸದ್ಯದ ಪರಿಸ್ಥಿತಿಯ ಬಗ್ಗೆ ಚಾಲಕನೊಬ್ಬ ಹೇಳುವ ಮಾತು- ‘ದೊರೆ ಬೀರೇಂದ್ರ ಅವರ ಹತ್ಯೆಯಾಂದಿಗೆ ದೇಶದ ಕಥೆ ಮುಗಿಯಿತು. ಜ್ಞಾನೇಂದ್ರ ದಯಾಮಯಿ ಮನುಷ್ಯನಲ್ಲ’

(ಎಎಫ್‌ಪಿ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X