ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪಾರಪೇಟೆ ಪೊಲೀಸರ ಸಾಹಸ : ಪಾರಾದ ಅಪಹೃತ ಬಾಲಕ

By Staff
|
Google Oneindia Kannada News

ಬೆಂಗಳೂರು: ವರ್ತಕನ ಮಗನನ್ನು ಅಪಹರಿಸಿದ ಅಪಹರಣಕಾರಣನನ್ನು ಸಿನಿಮೀಯ ರೀತಿಯಲ್ಲಿ ಬೆನ್ನತ್ತಿ ಗುಂಡು ಹಾರಿಸಿರುವ ನಗರದ ಉಪ್ಪಾರಪೇಟೆ ಪೊಲೀಸರು, ಮೂವರು ಅಪಹರಣಕಾರರನ್ನು ಬಂಧಿಸುವುದರೊಂದಿಗೆ ಅಪಹೃತ ವಿದ್ಯಾರ್ಥಿಯನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ.

ಗಾಂಧಿನಗರದಲ್ಲಿ ಕಚೇರಿ ಹೊಂದಿರುವ ಶ್ರೀಮಂತ ಉದ್ಯಮಿ ಗುಲಾಬ್‌ಚಂದ್‌ ಪಗಾರಿಯಾ ಅವರ ಪುತ್ರ ಪ್ರಶಾಂತ ಪಗಾರಿಯಾ (16) ನನ್ನು ಭಾನುವಾರ ಅಪಹರಿಸಿದ್ದ ಅಪಹರಣಕಾರರು 10 ಲಕ್ಷ ರುಪಾಯಿಗಳ ಒತ್ತೆ ಹಣಕ್ಕೆ ಒತ್ತಾಯ ಸಲ್ಲಿಸಿದ್ದರು. ಅಪ್ಪನ ಕಚೇರಿಗೆ ಬಂದಿದ್ದ ಬಾಲಕನನ್ನು ವಾಪಸ್ಸು ಮನೆಗೆ ತೆರಳುವಾಗ ಅಪಹರಿಸಲಾಗಿತ್ತು .

ಅಪಹರಣಕಾರರು ಒತ್ತೆ ಹಣಕ್ಕೆ ಬೇಡಿಕೆ ಸಲ್ಲಿಸಿದಾಗ ಜಾಗೃತರಾದ ಗುಲಾಬ್‌ಚಂದ್‌ ಉಪ್ಪಾರಪೇಟೆ ಪೊಲೀಸರಿಗೆ ದೂರು ಸಲ್ಲಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ನಾಲ್ಕು ಪ್ರತ್ಯೇಕ ತಂಡ ರಚಿಸಿ ಮಂಡ್ಯ ಹಾಗೂ ಮೈಸೂರುಗಳಲ್ಲೂ ಕಾರ್ಯಾಚರಣೆ ಕೈಗೊಂಡರು. ಈ ಸಂದರ್ಭದಲ್ಲಿ ಬಾಲಕನ ಪೋಷಕರನ್ನು ಮತ್ತೆ ಸಂಪರ್ಕಿಸಿದ ಅಪಹರಣಕಾರರು ಹಣವನ್ನು ತೆಗೆದುಕೊಂಡು ಇಸ್ಕಾನ್‌ ದೇವಾಲಯದ ಬಳಿಗೆ ಬಾಲಕನ ತಾಯಿ ಏಕಾಂಗಿಯಾಗಿ ಬರುವಂತೆ ಸೂಚಿಸಿದರು. ಈ ಮಾಹಿತಿಯನ್ನಾಧರಿಸಿ ಪೊಲೀಸರು ಜಾಲ ರಚಿಸಿದರು.

ಮೊದಲಿಗೆ ತಮ್ಮಲ್ಲಿನ ಚೂರಿ, ಬಡಿಗೆ ಮುಂತಾದ ಆಯುಧಗಳಿಂದ ಅಪಹರಣಕಾರರು ಪ್ರತಿರೋಧ ತೋರಿಸಿದರೂ, ಪೊಲೀಸರು ಗುಂಡು ಹಾರಿಸಿದಾಗ ಮೆತ್ತಗಾಗಿದ್ದಾರೆ. ಕಾರ್ಯಾಚರಣೆಯಲ್ಲಿ ರಾಮಕೃಷ್ಣ , ಆರ್‌. ರಮೇಶ್‌ ಹಾಗೂ ಗೋಪಿ ಎನ್ನುವ ಮೂವರನ್ನು ಬಂಧಿಸಲಾಗಿದ್ದು , ಮತ್ತೊಬ್ಬ ಆರೋಪಿ ಶಿವ ತಲೆ ತಪ್ಪಿಸಿಕೊಂಡಿದ್ದಾನೆ.

ಪಶ್ಚಿಮ ವಿಭಾಗದ ಡಿಸಿಪಿ ಯು. ನಿಸಾರ್‌ ಅಹ್ಮದ್‌ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಜಿ.ಎ. ಬಾವಾ, ಪೊಲೀಸ್‌ ಇನ್ಸ್‌ಪೆಕ್ಟರ್‌ ಹೆಚ್‌.ಜೆ. ಮರಿಸ್ವಾಮಿಗೌಡ, ನಗರ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳಾದ ಎಸ್‌.ಕೆ. ಉಮೇಶ್‌, ವಾಲಿಬಾಷಾ, ಎಸ್‌.ರೇವಣ್ಣ , ಎಸ್‌.ವೈ. ಹಾದಿಮನಿ, ಪಿಎಸ್‌ಐ ಕೆ. ನಂಜುಂಡೇಗೌಡ, ಮುಖ್ಯ ಕಾನ್ಸ್‌ಟೇಬಲ್‌ಗಳಾದ ನಾಗರಾಜ್‌, ಲಕ್ಕಣ್ಣ, ಮುನಿರಾಜು, ಪುಟ್ಟಲಿಂಗಯ್ಯ ಹಾಗೂ ಕಾನ್ಸ್‌ಟೇಬಲ್‌ಗಳಾದ ಶಿವಕುಮಾರ್‌, ಶ್ರೀನಿವಾಸ್‌ ಮತ್ತು ಚಾಲಕರಾದ ರವಿ, ಹನುಮಯ್ಯ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X