Get Updates
Get notified of breaking news, exclusive insights, and must-see stories!

ವಿಶೇಷಗಳು ಘಟಿಸದ ದಿನಗಳಲ್ಲಿ ಚುನಾವಣಾ ಕಣದಲ್ಲಿ ಕೃಷ್ಣ

ವಿಶೇಷವಾದ ಘಟನೆಗಳು ಸಂಭವಿಸದಿದ್ದಾಗ್ಯೂ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಸುದ್ದಿಯಲ್ಲಿದ್ದುದು ಈ ವಾರದ ವಿಶೇಷ. ಬಹು ನಿರೀಕ್ಷೆಯ ಮುಖ್ಯಮಂತ್ರಿಗಳ ಅಮೇರಿಕಾ ಪ್ರವಾಸ ಏಕಾಏಕಿ ರದ್ದಾದದ್ದು, ರಾಜ್ಯ ಒಲಂಪಿಕ್‌ ಸಂಸ್ಥೆ ಅಧ್ಯಕ್ಷ ಸ್ಥಾನದ ಹುದ್ದರಿಯಾಗಿ ಚುನಾವಣೆಗೆ ಅವರು ನಾಮಪತ್ರ ಸಲ್ಲಿಸಿದ ವಿಷಯಗಳು ಬೇರೆ ಬೇರೆ ಕಾರಣಗಳಿಗಾಗಿ ಜನರ ಗಮನವನ್ನು ಸೆಳೆದವು.

ಉನ್ನತ ಅಧಿಕಾರಿಗಳ ತಂಡದೊಂದಿಗೆ ಅಮೇರಿಕಾಗೆ ತೆರಳುವ ಕೃಷ್ಣ ಅವರ ಪ್ರವಾಸ ಹಲವು ವದಂತಿಗಳಿಗೆ ಕಾರಣವಾಯಿತು. ಮುಖ್ಯವಾಗಿ- ದೆಹಲಿಯ ಮೇಡಂ ಕೃಷ್ಣ ಅವರ ಪ್ರವಾಸಕ್ಕೆ ಹಸಿರು ನಿಶಾನೆ ತೋರಿಲ್ಲವೆನ್ನುವ ವಿಷಯವನ್ನು ಮಾಧ್ಯಮಗಳು ದಪ್ಪಕ್ಷರಗಳಲ್ಲಿ ಪ್ರಕಟಿಸಿದವು. ಮಾಧ್ಯಮಗಳಲ್ಲಿ ಕೃಷ್ಣ ಅವರು ವಿಪರೀತ ಪ್ರಚಾರ ಪಡೆಯುತ್ತಾರೆನ್ನುವುದು ಹೈಕಮಾಂಡ್‌ ನಿಲುವಿಗೆ ಕಾರಣವೆಂಬುದು ಮಾಧ್ಯಮಗಳ ವಿಶ್ಲೇಷಣೆ. ಕೃಷ್ಣ ಇದನ್ನು ರಬ್ಬಿಷ್‌ ಎಂದು ತಳ್ಳಿ ಹಾಕಿದ್ದು ಸಹಜವಾಗಿಯೇ ಹೆಚ್ಚು ಪ್ರಾಮುಖ್ಯವನ್ನು ಪಡೆಯಲಿಲ್ಲ .

ಪ್ರವಾಸ ಮುಂದೂಡಿಕೆಗೆ ಕೃಷ್ಣ ನೀಡುವ ಕಾರಣಗಳೇ ಬೇರೆ. ರಾಜ್ಯದಲ್ಲಿ ಕಾಮಗಾರಿಗಳ ಪ್ರಗತಿಯನ್ನು ಗಮನಿಸಬೇಕಾಗಿದೆ ಹಾಗೂ ಅವುಗಳಿಗೆ ವೇಗ ನೀಡಬೇಕಾಗಿದೆ. ಅಲ್ಲದೇ, ಇಷ್ಟರಲ್ಲೇ ವಿಶ್ವಬ್ಯಾಂಕ್‌ ರಾಜ್ಯಕ್ಕೆ ನೀಡಲು ಒಪ್ಪಿರುವ ನೆರವಿನ ಮೊದಲ ಕಂತು ಮಂಜೂರಾಗಲಿದೆ. ಈ ಹೊತ್ತಿನಲ್ಲಿ ತಾವು ರಾಜ್ಯದಲ್ಲಿರಬೇಕಾದುದು ಅಗತ್ಯ ಎನ್ನುತ್ತಾರೆ ಕೃಷ್ಣ . ತಮ್ಮ ಪ್ರವಾಸ ರದ್ದಾಗಿಲ್ಲ , ಮುಂದೆ ಹೋಗಿದೆಯಷ್ಟೇ ಎನ್ನುವ ಸಮಜಾಯಿಷಿಯನ್ನೂ ನೀಡುವ ಮೂಲಕ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಅಮೇರಿಕಾ ಪ್ರವಾಸ ಕೈಗೊಳ್ಳುವ ಇಂಗಿತವನ್ನೂ ಅವರು ವ್ಯಕ್ತಪಡಿಸುತ್ತಾರೆ.

ಅಮೇರಿಕಾ ಪ್ರವಾಸ ರದ್ಧತಿಯಿಂದ ಯಾರಿಗೆ ನಷ್ಟ ?

ಕೃಷ್ಣ ಅವರ ಅಮೇರಿಕಾ ಪ್ರವಾಸದಿಂದ ದೊಡ್ಡ ಹೊಡೆತ ಬಿದ್ದಿರುವುದು ರಾಜ್ಯದ ಐಟಿ ಉದ್ಯಮಕ್ಕೆ. ಅಮೇರಿಕಾ ಸ್ಲೋಡೌನ್‌ ಕಾರಣದಿಂದ ಕಂಗೆಟ್ಟಿರುವ ಐಟಿ ಉದ್ಯಮಿಗಳು ಕೃಷ್ಣ ಅವರ ಪ್ರವಾಸ ರಾಜ್ಯದ ಮಟ್ಟಿಗೆ ಆಶಾದಾಯಕವಾಗಬಹುದೆಂದು ನಿರೀಕ್ಷಿದ್ದರು. ಕೃಷ್ಣ ಅವರು ಕರೆದ್ಯೊಯಲು ಉದ್ದೇಶಿಸಿದ್ದ ಟೀಮಿನಲ್ಲಿ ಇನ್ಫೋಸಿಸ್‌ ಹಾಗೂ ವಿಫ್ರೋ ದೊರೆಗಳಂತಹ ಘಟಾನುಘಟಿಗಳಿದ್ದರೆನ್ನುವುದು ಗಮನಾರ್ಹ.

ಈಚಿನ ದಿನಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ವಿದೇಶಿ ಬಂಡವಾಳ ರಾಜ್ಯಕ್ಕೆ ಹರಿದು ಬರುತ್ತಿಲ್ಲವೆನ್ನುವುದನ್ನು ನೆನಪಿನಲ್ಲಿಡಬೇಕು. ಕಳೆದ ವರ್ಷ ಬೆಂಗಳೂರಿನಲ್ಲಿ ಜರುಗಿದ ಜಾಗತಿಕ ಬಂಡವಾಳದಾರರ ಸಮ್ಮೇಳನದಿಂದ ರಾಜ್ಯಕ್ಕೆ 3000 ಬಿಲಿಯನ್‌ ಬಂಡವಾಳ ಹರಿದು ಬರುತ್ತದೆಂದು ಸರ್ಕಾರ ಹೇಳಿಕೊಂಡಿತ್ತು . ಹರಿದು ಬಂದದ್ದು ಅತ್ಯಲ್ಪ ಮೊತ್ತ ಮಾತ್ರ. ಅಧಿಕಾರಿಗಳು ಈ ಬಗ್ಗೆ ಅಂಕಿ ಅಂಶಗಳನ್ನು ನೀಡಲು ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲೂ ಬಂಡವಾಳ ಕ್ರೋಢೀಕರಣಕ್ಕೆ ಸಹಾಯವಾಗಬಹುದೆಂದು ನಿರೀಕ್ಷಿಸಿದ್ದ ಅಮೇರಿಕಾ ಪ್ರವಾಸ ರದ್ದಾಗಿರುವುದು ನಿರಾಶೆಯ ವಿಷಯವೇ.

ಈ ನೀರು ವಿವಾದ ಯಾವತ್ತಿಗೂ ತೀರದ ರಗಳೆಯಾ...

ನೆರೆಯ ಆಂಧ್ರದೊಂದಿಗಿನ ನೀರು ವಿವಾದ ಕರ್ನಾಟಕದ ಮಟ್ಟಿಗೆ ಬಗೆಹರಿಯುವ ವಿಷಯ ಅಲ್ಲವೆನಿಸುತ್ತೆ . ರಾಜ್ಯದ ಗಡಿ ಜಿಲ್ಲೆಗಳಲ್ಲಿ ಆಂಧ್ರ ನಿರ್ಮಿಸುತ್ತಿರುವ ಫೀಡರ್‌ ಕಾಲುವೆಗಳು ಕೃಷ್ಣ ಅವರ ನಿದ್ದೆಯನ್ನು ಕಸಿದಿವೆ. ರಾಜ್ಯದ ವಿರೋಧವನ್ನು ನಿರ್ಲಕ್ಷಿಸಿ ಎಗ್ಗಿಲ್ಲದೆ ಕಾಲುವೆ ಕಾಮಗಾರಿ ಮುಂದುವರಿಸುತ್ತಿರುವ ತೆಲುಗು ಜನ, ಸುಪ್ರಿಂಕೋರ್ಟ್‌ ಗುಮ್ಮಕ್ಕೂ ಜಗ್ಗುತ್ತಿಲ್ಲ .

ಈ ನಡುವೆ ಆಂಧ್ರದ ವಿರುದ್ಧ ಕೃಷ್ಣ ಸರ್ಕಾರ ಮೆದು ಭಾವನೆ ಅನುಸರಿಸುತ್ತಿದೆಯೆಂಬ ಭಾವನೆ ವ್ಯಾಪಕವಾಗುತ್ತಿದೆ. ಆಂಧ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸುವಲ್ಲಿ ಕೃಷ್ಣ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎನ್ನುವ ಟೀಕೆಗಳೂ ಕೇಳಿಬರುತ್ತಿವೆ. ಕೇಂದ್ರ ಸರ್ಕಾರದ ಅತ್ಯಂತ ದೊಡ್ಡ ಮಿತ್ರ ಪಕ್ಷವಾಗಿರುವ ತೆಲುಗು ದೇಶಂ ಸರ್ಕಾರ ನ್ಯಾಯಾಲಯ ಹಾಗೂ ಬಚಾವತ್‌ ಆಯೋಗದ ತೀರ್ಪುಗಳನ್ನು ಗಾಳಿಗೆ ತೂರುತ್ತಿರುವ ಕುರಿತು ರಾಜಕೀಯ ತಂತ್ರಜ್ಞರೇ ಸಣ್ಣ ದನಿಯಲ್ಲಿ ಮಾತನಾಡುತ್ತಿದ್ದಾರೆ.

ಕೃಷ್ಣ ಸರ್ಕಾರ ಮಾತ್ರವಲ್ಲದೆ ರಾಜ್ಯದ ಸಂಸದರೂ ಕೂಡ ರಾಜ್ಯದ ಹಿತ ಕಾಪಾಡುವಲ್ಲಿ ವಿಫಲವಾಗುತ್ತಿರುವುದು ಆತಂಕದ ವಿಷಯ. ಅವರು ಒಟ್ಟಾಗಿ ವಾಜಪೇಯಿ ಸರ್ಕಾರದ ಮೇಲೆ ಒತ್ತಡ ತಂದಿರುವ ಉದಾಹರಣೆಯೇ ಇಲ್ಲ . ಕೇಂದ್ರ ಸರ್ಕಾರ ಆಂಧ್ರದ ಕಾಮಗಾರಿಗಳನ್ನು ತಡೆಯದಿದ್ದರೆ, ಅದು ಗಣತಂತ್ರ ವ್ಯವಸ್ಥೆಗೆ ಅಪಾಯ ತರುವ ಸಾಧ್ಯತೆಯ ಕುರಿತು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಆತಂಕ ವ್ಯಕ್ತಪಡಿಸುತ್ತಾರೆ.

ಇನ್ನೊಂದು ಚುನಾವಣೆ, ಒಲಂಪಿಕ್‌ ಹೋರಾಟ !

ನೂರೆಂಟು ಸಮಸ್ಯೆಗಳ ನಡುವೆಯೂ ಕೃಷ್ಣ ಅವರು ಮತ್ತೊಂದು ಚುನಾವಣೆಗೆ ಸಿದ್ಧರಾಗಿದ್ದಾರೆ. ರಾಜ್ಯ ಒಲಂಪಿಕ್‌ ಸಂಸ್ಥೆ ಅಧ್ಯಕ್ಷ ಸ್ಥಾನವನ್ನು ಬಯಸಿ ಅವರು ಜೂನ್‌ 10 ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ನಿರ್ಗಮಿಸುತ್ತಿರುವ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಜಯ್‌ ಕುಮಾರ್‌ ಸರ್‌ನಾಯಕ್‌ ಹಾಗೂ ಅಥ್ಲೆಟಿಕ್‌ ಅಸೋಸಿಯೇಷನ್‌ನ ರತನ್‌ಸಿಂಗ್‌ ಸ್ಪರ್ಧೆಯಲ್ಲಿರುವುದು ಗಮನಾರ್ಹ. ಕೃಷ್ಣ ಗೆಲ್ಲುತ್ತಾರಾ? ಅಭಿಮಾನಿಗಳ ಪ್ರಕಾರ, ಇದು ಮೂರ್ಖ ಪ್ರಶ್ನೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+