ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಮತಕ್ಕೆ ಮಣಿದ ಪವರ್‌ : ನೆಚ್ಚಿನ ಅಧಿಕಾರಿ ಊರಿಗೆ ವಾಪಸ್ಸು

By Staff
|
Google Oneindia Kannada News

ಪಟ್ಟನಾಯಕನಹಳ್ಳಿ : ಇಲ್ಲಿನ ಪೊಲೀಸ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಅವರ ವರ್ಗಾವಣೆಯನ್ನು ವಿರೋಧಿಸಿ ಸುತ್ತಮುತ್ತಲಿನ ಗ್ರಾಮಸ್ಥರು ನಡೆಸಿದ ಪ್ರತಿಭಟನೆಗೆ ಮಣಿದಿರುವ ಪೊಲೀಸ್‌ ಇಲಾಖೆ, ಸಬ್‌ ಇನ್ಸ್‌ಪೆಕ್ಟರ್‌ ಮಹೇಶ್‌ಕುಮಾರ್‌ ಅವರನ್ನು ಪುನಃ ಪಟ್ಟನಾಯಕನಹಳ್ಳಿಗೇ ವರ್ಗಾಯಿಸಿದೆ.

ಎರಡು ತಿಂಗಳ ಹಿಂದಷ್ಟೇ ಗ್ರಾಮಕ್ಕೆ ಆಗಮಿಸಿ, ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಅಪಾರ ಮೆಚ್ಚುಗೆ ಗಳಿಸಿದ್ದ ಮಹೇಶ್‌ಕುಮಾರ್‌ ಮತ್ತೆ ಪ.ನಾ.ಹಳ್ಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು ಎಂದಿನಂತೆ ಕರ್ತವ್ಯದಲ್ಲಿ ತೊಡಗಿದ್ದಾರೆ. ಅವರಿನ್ನೂ ಪ್ರೊಬೇಷನರಿ ಪೀರಿಯೆಡ್‌ನಲ್ಲಿದ್ದಾರೆ ಎನ್ನುವುದು ವಿಶೇಷ .

ಮಹೇಶ್‌ಕುಮಾರ್‌ ಅವರ ವರ್ಗಾವಣೆಯನ್ನು ಮೂರು ದಿನಗಳೊಳಗಾಗಿ ರದ್ದು ಮಾಡಬೇಕು ಹಾಗೂ ಕನಿಷ್ಠ ಮೂರು ವರ್ಷಗಳ ಕಾಲ ಅವರನ್ನು ಬೇರೆಡೆಗೆ ವರ್ಗಾಯಿಸಬಾರದೆಂದು ಪ್ರತಿಭಟನಕಾರರು ಸರ್ಕಾರವನ್ನು ಒತ್ತಾಯಿಸಿದ್ದರು. ಒತ್ತಾಯಕ್ಕೆ ಮಣಿಯದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲು ಸುತ್ತಮುತ್ತಲ ಗ್ರಾಮಸ್ಥರ ಸಭೆ ನಿರ್ಧರಿಸಿತ್ತು . ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಾವಿರಾರು ಸಂಖ್ಯೆಯ ಮಹಿಳೆಯರು- ವರ್ಗಾವಣೆ ರದ್ದಾಗುವವರೆಗೂ ಪ್ರತಿಭಟನೆ ನಿಲ್ಲಿಸದಿರಲು ಹಾಗೂ ಪ್ರತಿಭಟನೆಯನ್ನು ಉಗ್ರಗೊಳಿಸಲು ನಿರ್ಧರಿಸಿದ್ದರು. ಈ ಕಾರಣದಿಂದಾಗಿ ಊರಿನಲ್ಲಿ ಬಿಗು ವಾತಾವರಣ ಉಂಟಾಗಿತ್ತು .

ನಂಜಾವಧೂತ ಸ್ವಾಮಿಗಳ ಮಧ್ಯಸ್ಥಿಕೆ : ಊರಿನಲ್ಲಿ ಉಂಟಾದ ಬಿಗು ವಾತಾವರಣವನ್ನು ತಿಳಿಗೊಳಿಸುವ ಉದ್ದೇಶದಿಂದ ಪ.ನಾ.ಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮಿಗಳು ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸ್‌ ಅಧಿಕಾರಿಗಳು ಜನರ ಒತ್ತಾಯದ ಮೇರೆಗೆ ಪಟ್ಟು ಸಡಿಲಿಸಿ ಮಹೇಶ್‌ಕುಮಾರ್‌ ಅವರ ವರ್ಗಾವಣೆ ವಾಪಸ್ಸಾತಿಗೆ ಒಪ್ಪಿಗೆ ನೀಡುವುದರೊಂದಿಗೆ ಪರಿಸ್ಥಿತಿ ತಿಳಿಗೊಳಿಸಿದರು.

ಮಹೇಶ್‌ಕುಮಾರ್‌ ಅವರ ವಾಪಸ್ಸಾತಿಯಿಂದ ಸಂತೋಷಗೊಂಡಿರುವ ಗ್ರಾಮಸ್ಥರೀಗ ವಿಜಯೋತ್ಸವದ ಮೂಡಿನಲ್ಲಿದ್ದಾರೆ. ಪಿಎಸ್‌ಐ ಮಹೇಶ್‌ಕುಮಾರ್‌ ಅವರಿಗೆ ಠಾಣೆಯ ವ್ಯಾಪ್ತಿಯ ಗ್ರಾಮಸ್ಥರು ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಕಾರ್ಯಕ್ರಮಗಳನ್ನು ಮಹಿಳೆಯರೇ ಹಮ್ಮಿಕೊಂಡಿರುವುದು ವಿಶೇಷ.

ಮಹೇಶ್‌ಕುಮಾರ್‌ ಅವರ ಜನಪ್ರಿಯತೆಯ ಗುಟ್ಟಾದರೂ ಏನು ?

ಎರಡು ತಿಂಗಳಲ್ಲೇ ನೂರಾರು ಕಥೆಗಳಿಗೆ ಮಹೇಶ್‌ಕುಮಾರ್‌ ಕಾರಣರಾಗಿದ್ದಾರೆ. ಕಾಮಣ್ಣ- ಕುಡುಕರಿಗೆ ಕಡಿವಾಣ, ಇಸ್ಪೀಟ್‌- ಮಟ್ಕಾ ಬಂದ್‌ ಮುಂತಾದ ಜನಪ್ರಿಯ ಕಾರ್ಯಗಳ ಜೊತೆಗೇ ಕೆಲವು ವಿಶಿಷ್ಟ ಸಾಹಸಗಳೂ ಅವರ ಹೆಸರಲ್ಲುಂಟು. ಒಂದೆರಡು ಓದಿ-

  • ಸರಿ ರಾತ್ರಿಯ ಹೊತ್ತು ಗಸ್ತಿನಲ್ಲಿದ್ದ ಮಹೇಶ್‌ಕುಮಾರ್‌ ಅವರಿಗೆ ಎದುರಾದದ್ದು ನಿರ್ಜನವಾದ ಮೈದಾನದಲ್ಲಿ ಓಡಾಡುತ್ತಿದ್ದ ಹೆಂಗಸು. ವಿಚಾರಿಸಿದಾಗ ತಿಳಿದದ್ದು - ಆಕೆಯ ಗಂಡ ಕುಡುಕ. ಸಂಪಾದನೆಯೆಲ್ಲ ಮದ್ಯದಂಗಡಿ ಪಾಲು. ದಿನ ರಾತ್ರಿ ಜಗಳ, ಹೆಂಡತಿಗೆ ಹೊಡೆತ. ಆ ರಾತ್ರಿಯೂ ಗಂಡನಿಂದ ಏಟು ತಿಂದ ಹೆಣ್ಣು ಬೇಸರದಿಂದ ಮನೆಯಿಂದ ಹೊರ ಬಂದಿದ್ದಳು.
    ಕಥೆ ಕೇಳಿದ ಪಿಎಸ್‌ಐ ಆ ಹೆಣ್ಣಿಗೆ ಧೈರ್ಯ ತುಂಬಿ ಮನೆಗೆ ಕಳಿಸಿದರು. ಜೊತೆಯಲ್ಲಿ ತಮ್ಮ ಲಾಠಿಯನ್ನೂ ಆಕೆಗೆ ಕೊಟ್ಟು , ಅದನ್ನು ಬೆಳಗ್ಗೆ ಗಂಡನೊಂದಿಗೆ ಠಾಣೆಗೆ ಕಳುಹಿಸುವಂತೆ ಹೇಳಿದರು. ಬೆಳಗ್ಗೆ ಆ ಹೆಣ್ಣಿನ ಗಂಡು ಠಾಣೆಗೆ ಬಂದು ಲಾಠಿ ಕೊಟ್ಟು ಹೋದ. ಆ ಕ್ಷಣದಿಂದ ಗಂಡ- ಹೆಂಡತಿ ಜಗಳ ಆಡಿಲ್ಲವಂತೆ. ಆತ ಕುಡಿಯುವುದನ್ನೂ ನಿಲ್ಲಿಸಿದ್ದಾನೆ.
  • ಇತ್ತೀಚೆಗಷ್ಟೇ ನಡೆದ ಪ್ರಕರಣದಲ್ಲಿ - ಖಚಿತ ಮಾಹಿತಿಯ ಮೇರೆಗೆ ಅಕ್ರಮ ಶ್ರೀಗಂಧ ಸಾಗಿಸುತ್ತಿದ್ದ ಮಾರುತಿ ಕಾರೊಂದನ್ನು ಬೆನ್ನತ್ತಿ 2.10 ಲಕ್ಷ ರುಪಾಯಿ ಮೌಲ್ಯದ ಸುಮಾರು ಎರಡು ಕ್ವಿಂಟಾಲ್‌ ತೂಕದ ಶ್ರೀಗಂಧವನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳರು ಪರಾರಿಯಾಗಿದ್ದಾರೆ. ಈ ರೀತಿ ಎರಡು ತಿಂಗಳಲ್ಲಿ ಶ್ರೀಗಂಧವನ್ನು ವಶಪಡಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ.
ಬಾಲಂಗೋಚಿ : ಮಹೇಶ್‌ಕುಮಾರ್‌ರಂತಹ ಪ್ರಾಮಾಣಿಕ, ದಕ್ಷ ಅಧಿಕಾರಿಗಳು ನಮ್ಮ ನಿಮ್ಮೂರಿನಲ್ಲೂ ಇದ್ದರೆಷ್ಟು ಚೆನ್ನವಲ್ಲವೇ ? ಇರುವಂತಾಗಿದ್ದರೆ, ಈ ಸುದ್ದಿಯನ್ನು ನೀವು ಓದಬೇಕಾಗಿರಲಿಲ್ಲ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X