ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌.ಎಂ. ಕೃಷ್ಣ, ನಿಯೋಗಕ್ಕೆ ತಪ್ಪಿದ ಅಮೆರಿಕಾ ವಿಮಾನಯಾನ

By Staff
|
Google Oneindia Kannada News

ಬೆಂಗಳೂರು : ಮಾಹಿತಿ ತಂತ್ರಜ್ಞಾನದ ದಿಗ್ಗಜರು ಹಾಗೂ ಕೈಗಾರಿಕಾ ವಲಯದ ಅತಿರಥ ಮಹಾರಥರ ನಿಯೋಗದೊಂದಿಗೆ ಹತ್ತು ದಿನಗಳ ಕಾಲದ ಅಮೆರಿಕಾ ಪ್ರವಾಸಕ್ಕೆ ಸಜ್ಜಾಗುತ್ತಿದ್ದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ದಿಢೀರನೆ ಆ ಕಾರ್ಯಕ್ರಮವನ್ನೇ ರದ್ದು ಪಡಿಸಿದ್ದಾರೆ.

ಇನ್‌ಫೋಸಿಸ್‌ನ ಅಧ್ಯಕ್ಷ ನಾರಾಯಣಮೂರ್ತಿ, ವಿಪ್ರೋದ ಅಜೀಮ್‌ ಪ್ರೇಮ್‌ಜೀ, ಜೀವತಂತ್ರಜ್ಞಾನ ಕ್ಷೇತ್ರದ ಪರಿಣತ ಡಾ. ಕಿರಣ್‌ ಮಜುಂದಾರ್‌ ಸೇರಿದಂತೆ ಹಲವು ಗಣ್ಯರ ನಿಯೋಗದೊಂದಿಗೆ ಜೂನ್‌ 16ರಿಂದ 10 ದಿನಗಳ ಕಾಲ ಮುಖ್ಯಮಂತ್ರಿ ಪ್ರವಾಸ ಕೈಗೊಳ್ಳಬೇಕಿತ್ತು. ಈ ಸಂಬಂಧ ಎಲ್ಲ ಗಣ್ಯರಿಗೂ ಅಧಿಕೃತ ಆಹ್ವಾನವೂ ಹೋಗಿತ್ತು. ಪ್ರವಾಸ ಪ್ರಕ್ರಿಯೆಗಳೆಲ್ಲವೂ ಬಹುತೇಕ ಅಂತಿಮ ಹಂತದಲ್ಲಿದ್ದವು.

ಈ ಹಂತದಲ್ಲಿ ಮುಖ್ಯಮಂತ್ರಿಗಳು ಪ್ರವಾಸ ರದ್ದುಗೊಳಿಸಿರುವುದು ಭಾರಿ ಕುತೂಹಲ ಮೂಡಿಸಿದೆ. ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ರಾಜ್ಯದ ರಸ್ತೆ, ಸೇತುವೆ, ವಿದ್ಯುಚ್ಛಕ್ತಿಯೇ ಮೊದಲಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸುತ್ತಿರುವುದೇ ಈ ಪ್ರವಾಸ ರದ್ದಿಗೆ ಕಾರಣವೆಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.

ಅಮೆರಿಕದ ಸಾಫ್ಟ್‌ವೇರ್‌ ವಲಯದಲ್ಲಿ ಹಾಗೂ ಆರ್ಥಿಕವಲಯದಲ್ಲಿನ ಮಂದಗತಿಯ ಹಿನ್ನೆಲೆಯಲ್ಲಿ ಈ ಸನ್ನಿವೇಶವನ್ನು ಕರ್ನಾಟಕದ ಹಿತಕ್ಕೆ ಬಳಸಿಕೊಳ್ಳುವುದು ಈ ಪ್ರವಾಸದ ಉದ್ದೇಶವಾಗಿತ್ತು. ರಾಜ್ಯಕ್ಕೆ ದೊರಕಬೇಕಿರುವ ಆರ್ಥಿಕ ನೆರವಿನ ಬಗ್ಗೆ ವಿಶ್ವಬ್ಯಾಂಕ್‌ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಕಾರ್ಯಕ್ರಮವೂ ಇತ್ತು. ಆದರೆ, ಬೆಂಗಳೂರಿನಲ್ಲಿ ಅಕ್ಟೋಬರ್‌ ಒಳಗೆ ಮಿನಿ ಫ್ಲೈಓವರ್‌ಗಳ ನಿರ್ಮಾಣ, ಗ್ರೇಡ್‌ ಸಪರೇಟರ್ಸ್‌ ಹಾಗೂ ವಿದ್ಯುತ್‌ ವಲಯದ ಸುಧಾರಣೆಯ ಹಿನ್ನೆಲೆಯಲ್ಲಿ ಈ ಪ್ರವಾಸ ರದ್ದು ಮಾಡುವುದು ಅನಿವಾರ್ಯವಾಯಿತು ಎಂದು ಕೃಷ್ಣ ಹೇಳಿದ್ದಾರೆ.

ಮೂಲಭೂತ ಸೌಕರ್ಯಗಳ ಯೋಜನೆ ಕಾರ್ಯಗತವಾದ ಬಳಿಕ ಅಂದರೆ ನಾಲ್ಕು ತಿಂಗಳ ನಂತರ ಮತ್ತೆ ಇದೇ ನಿಯೋಗದೊಂದಿಗೆ ಅಮೆರಿಕಾ ಪ್ರವಾಸ ಕೈಗೊಳ್ಳುವ ಉದ್ದೇಶಿತ ಯೋಜನೆಗೆ ಪುನರ್ಚಾಲನೆ ನೀಡುವ ಇಂಗೀತವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X