ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಗೆ ಇ ಮೇಲ್‌ ದೂರುಗಳ ಮಹಾಪೂರ

By Staff
|
Google Oneindia Kannada News

ಬೆಂಗಳೂರು : ದಿನ ನಿತ್ಯವೂ ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರಿಗೆ ಅಂಚೆಯ ಮೂಲಕ ಹಾಗೂ ಕೊರಿಯರ್‌ ಮೂಲಕ ನೂರಾರು ಪತ್ರಗಳು ಬರುತ್ತವೆ. ಅದೆಲ್ಲಕ್ಕಿಂತಲೂ ಮಿಗಿಲಾಗಿ ದಿನವೊಂದಕ್ಕೆ ಸುಮಾರು 300ಕ್ಕೂ ಹೆಚ್ಚು ಇ-ಮೇಲ್‌ಗಳು ಬರುತ್ತವೆ.

ನಿತ್ಯ ಬರುವ ಹತ್ತಾರು ಮೇಲ್‌ಗಳಿಗೆ ಉತ್ತರ ಕೊಡುವುದೇ ಕಷ್ಟವಾಗಿರುವಾಗ, ರಾಜ್ಯದ ಎಲ್ಲ ಸಮಸ್ಯೆಗಳನ್ನೂ ನಿಭಾಯಿಸುವ ಕೃಷ್ಣ ಬಿಡುವು ಮಾಡಿಕೊಂಡು ಕೆಲವು ಇ ಮೇಲ್‌ಗಳಿಗೆ ಉತ್ತರಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳಿಗೆ ಬರುವ 300 ಇ -ಮೇಲ್‌ಗಳಲ್ಲಿ ಪ್ರತಿಶತ 90ರಷ್ಟು ದೂರುಗಳನ್ನೇ ಹೊತ್ತು ತರುತ್ತವೆ.

ಉಳಿದ 10ರಷ್ಟು ಮೇಲ್‌ಗಳಲ್ಲಿ ಕೃಷ್ಣರಿಗೆ ಶಹಭಾಷ್‌ಗಿರಿ, ದೇಶ ವಿದೇಶಗಳಿಂದ ಶುಭಾಶಯ ಪತ್ರ, ರಂಜನೆ ಎಲ್ಲವೂ ದೊರಕುತ್ತದೆ. ಪುಟ್ಟ ಬಾಲಕನೊಬ್ಬ ಮುಖ್ಯಮಂತ್ರಿಗಳ ಸ್ನೇಹ ಬಯಸಿ ಪತ್ರ ಬರೆದರೆ, ನಿರುದ್ಯೋಗಿ ಯುವಕ ತನ್ನ ಬಯೋಡೇಟಾ ಕಳಿಸಿ, ತಮಗೊಂದು ಉದ್ಯೋಗ ಕೊಡಿಸಿ ಎಂದೂ ಪ್ರಾರ್ಥಿಸುತ್ತಾನೆ, ತಮ್ಮ ಕೌಟುಂಬಿಕ ಸಮಸ್ಯೆಗಳನ್ನೇಲ್ಲಾ ವಿವರಿಸುವ ಮಗದೊಬ್ಬ ತನ್ನನ್ನು ಇಂತಹ ಊರಿಗೆ ಟ್ರಾನ್ಸ್‌ವರ್‌ ಮಾಡಿ ಎಂದು ಕೋರುತ್ತಾನೆ. ಭ್ರಷ್ಟಾಚಾರ ಸಂಬಂಧದ ದೂರುಗಳ ಮೇಲ್‌ಗಳ ಸಂಖ್ಯೆಗೂ ಕಡಿಮೆ ಏನಿಲ್ಲ.

ಆದರೆ, ಸಾಮಾನ್ಯವಾಗಿ ಮುಖ್ಯಮಂತ್ರಿಗಳ ಮೇಲ್‌ ಬಾಕ್ಸ್‌ಗೆ ಬರುವ ಪತ್ರಗಳು ಹೊತ್ತು ತರುವ ಸುದ್ದಿ ಏನು ಗೊತ್ತೆ? ಸಾರ್‌ ನಮ್ಮ ಮನೆ ಬಳಿ ಮೋರಿ ಕಟ್ಟಿಕೊಂಡು ದುರ್ನಾಥ ಬೀರುತ್ತಿದೆ. ಕಂಪ್ಲೆಂಟ್‌ ಕೊಟ್ಟರೂ ಪ್ರಯೋಜನ ಆಗಿಲ್ಲ?, ನಮ್ಮ ಏರಿಯಾಗೇ ನೀರೇ ಬರೋಲ್ಲ, ಕರೆಂಟ್‌ ಹೋದರಂತೂ ಗಂಟೆ ಗಟ್ಟಲೆ ವಾಪಸ್‌ ಬರಲ್ಲ, ನಮ್ಮ ಬಡಾವಣೆ ರಸ್ತೆಗಳೆಲ್ಲ ಕಿತ್ತು ಹೋಗಿವೆ. ಎಲ್ಲೆಲ್ಲೂ ಹಳ್ಳಕೊಳ್ಳಗಳೇ, ನಮ್ಮ ಏರಿಯಾದ ರಸ್ತೆ ದೀಪಗಳು ಉರಿದು ವಾರವೇ ಆಯ್ತು, ಬಸ್‌ ಬಂದು ತಿಂಗಳಾಯ್ತು, ಇಲ್ಲಿ ಪುಂಡ ಪೋಕರಿಗಳ ಕಾಟ... ಇತ್ಯಾದಿ ಇತ್ಯಾದಿ.

ವಿದೇಶಿ ಕಂಪನಿಯಾಂದರ ಮುಖ್ಯಸ್ಥರು ಮುಖ್ಯಮಂತ್ರಿಗಳಿಗೆ ಇ ಮೇಲ್‌ ನೀಡಿದ ಕೆಲವೇ ಗಂಟೆಗಳ ಅವಧಿಯಲ್ಲೇ ಅವರಿಗೆ ಉತ್ತರ ದೊರೆತಿದೆಯಂತೆ. ಆದರೆ, ಈ ಎಲ್ಲ ಮೇಲ್‌ಗಳನ್ನೂ ಮುಖ್ಯಮಂತ್ರಿಗಳೇ ಓದುವುದಿಲ್ಲ. ಎಲ್ಲಕ್ಕೂ ಅವರೇ ಉತ್ತರ ನೀಡುವುದಿಲ್ಲ. ಆದಾಗ್ಯೂ ಕೃಷ್ಣ ಅವರು ಪ್ರತಿದಿನ ಬೆಳಗ್ಗೆ ಕಂಪ್ಯೂಟರ್‌ ಮುಂದೆ ಕುಳಿತು, ಆಯ್ದ ಪತ್ರಗಳಿಗೆ ಸ್ವತಃ ಉತ್ತರ ನೀಡುತ್ತಾರೆ.

ಈ ಎಲ್ಲ ಇ ಮೇಲ್‌ಗಳನ್ನು ಚೆಕ್‌ ಮಾಡಿ, ಉತ್ತರಿಸಲು ಮತ್ತು ಪರಿಹಾರ ದೊರಕಿಸಲು ಮಮತಾ ಎಂಬ ಅಧಿಕಾರಿಯೇ ಇದ್ದಾರೆ. ಜನರಿಂದ ಬರುವ ದೂರು ದುಮ್ಮಾನಗಳನ್ನು ಪ್ರತಿನಿತ್ಯ ನೋಡಿ, ಓದುವ ಅವರು, ಆ ಮೇಲ್‌ಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ, ಕ್ರಮ ಕೈಗೊಳ್ಳಲು ಸೂಚಿಸುತ್ತಾರೆ. ಕೆಲವು ದಿನಗಳು ಕಳೆದ ಬಳಿಕ ಆ ಕೆಲಸ ಆಗಿದೆಯೇ ಇಲ್ಲವೇ ಎಂಬುದನ್ನೂ ಪರಿಶೀಲಿಸುತ್ತಾರೆ.

ಇ -ಮೇಲ್‌ಗಳ ಪ್ರತಿಯನ್ನು ತೆಗೆದು, ಅದನ್ನು ಮುಖ್ಯಮಂತ್ರಿಗಳಿಗೂ ರವಾನಿಸುತ್ತಾರೆ. ಕೃಷ್ಣ ಅವರು, ಕೆಲವು ಪತ್ರಗಳ ಮೇಲೆ ಆದೇಶ ಹಾಗೂ ಷರಾ ಬರೆಯುತ್ತಾರೆ. ಅದನ್ನು ಇ ಮೇಲ್‌ ಉಸ್ತುವಾರಿ ಅಧಿಕಾರಿಗಳು ಮೇಲ್‌ ನೀಡಿದವರಿಗೆ ಉತ್ತರ ರೂಪದಲ್ಲಿ ತಿಳಿಸುತ್ತಾರೆ.

ಇ - ಆಡಳಿತ : ಶಾಸಕರು, ಸಂಸದರೂ ಅಷ್ಟೇಕೆ ಹಲವು ಇಲಾಖೆಯ ಅಧಿಕಾರಿಗಳೂ ಮುಖ್ಯಮಂತ್ರಿಗಳಿಗೆ ಇ-ಮೇಲ್‌ ನೀಡುವ ಪರಿಪಾಠ ಬೆಳಸಿಕೊಂಡಿದ್ದಾರೆ. ಇದು ಇ -ಆಡಳಿತದ ಪ್ರಥಮ ಹೆಜ್ಜೆ ಎಂದರೂ ತಪ್ಪಲ್ಲ ಬಿಡಿ. ಕೇವಲ ನಗರಗಳಿಂದಷ್ಟೇ ಅಲ್ಲ ಗ್ರಾಮಾಂತರ ಪ್ರದೇಶಗಳಿಂದಲೂ ಮುಖ್ಯಮಂತ್ರಿಗಳಿಗೆ ಇ-ಮೇಲ್‌ಗಳು ಬರುತ್ತವೆ. ಈ ಎಲ್ಲ ಮೇಲ್‌ಗಳನ್ನೂ ಪ್ರತ್ಯೇಕ ಫೈಲ್‌ಗಳಲ್ಲಿ ಇಡಲಾಗುತ್ತದೆ. ಸಂಬಂಧಿತ ಇಲಾಖೆಗೆ ಕಳುಹಿಸಲಾಗುತ್ತದೆ. ಆನಂತರ ಕ್ರಮ ಕೈಗೊಳ್ಳಲಾಗಿದೆಯೋ ಇಲ್ಲವೋ ಎಂಬುದನ್ನೂ ಪರಿಶೀಲಿಸಲಾಗುತ್ತದೆ.

ಮಕ್ಕಳು ಕಳುಹಿಸುವ ತಮಾಷೆಯ ಮೇಲ್‌ಗಳಿಗೆ ಕೂಡ ಗಂಭೀರವಾದ ಉತ್ತರಗಳನ್ನೇ ಬರೆಯುತ್ತಾರಂತೆ. ಕೆಲವು ಕೆಲಸಗಳು ಆಗಲು ಸಮಯಾವಕಾಶ ಬೇಕಾಗುವುದರಿಂದ ಉತ್ತರ ನೀಡುವುದು ತಡವಾಗುತ್ತದಂತೆ. ಸರಕಾರಕ್ಕೆ ತಾವು ಬರೆಯುವ ದೂರಿಗೆ ಉತ್ತರ ಬರುವುದಿಲ್ಲ ಎಂಬುದು ಜನಸಾಮಾನ್ಯರ ಅಭಿಪ್ರಾಯ. ಈ ಅಭಿಪ್ರಾಯವನ್ನು ಹೋಗಲಾಡಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಈ ಇಲಾಖೆಯ ಅಧಿಕಾರಿಗಳು.

ನೀವೂ ನಿಮ್ಮ ದೂರು ದುಮ್ಮಾನ, ಅಭಿನಂದನೆಗಳನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಬಹುದು. ನಿಜವಾಗಿಯೂ ನಿಮಗೆ ಅವರಿಂದ ಉತ್ತರ ಬಂದಿತೇ? ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತೇ? ಎಂಬುದನ್ನು ನಮಗೂ ತಿಳಿಸಿ.

ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಇ-ಮೇಲ್‌ ವಿಳಾಸ ಇಲ್ಲಿದೆ :

[email protected]

[email protected]

[email protected]

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X