ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಗಣಿ ಕಾರ್ಮಿಕರಿಗೆ ಮಾರ್ಚ್‌ ವೇತನ ನೀಡಲು ಆದೇಶ

By Staff
|
Google Oneindia Kannada News

ಬೆಂಗಳೂರು : ಕೋಲಾರ ಚಿನ್ನದ ಗಣಿಯ ಕಾರ್ಮಿಕರಿಗೆ ಮಾರ್ಚ್‌ ತಿಂಗಳ ಸಂಬಳವನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಎಂ.ಎಫ್‌. ಸಲ್ಡಾನ ಹಾಗೂ ಅಗರ್‌ವಾಲ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಸೋಮವಾರ ನೀಡಿದ ಮಧ್ಯಂತರ ಆದೇಶದಲ್ಲಿ ವೇತನ ಬಿಡುಗಡೆ ಮಾಡುವಂತೆ ಸರಕಾರ ಹಾಗೂ ಬಿಜಿಎಂಎಲ್‌ಗೆ ಸೂಚಿಸಿದೆ.

ನೂರಾರು ವರ್ಷಗಳ ಇತಿಹಾಸವುಳ್ಳ ಕೋಲಾರ ಚಿನ್ನದ ಗಣಿಯನ್ನು ಮುಚ್ಚಲು ಕೇಂದ್ರ ಸರಕಾರ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರಕಾರ ಹಾಗೂ ಭಾರತ್‌ ಗೋಲ್ಡ್‌ ಮೈನ್ಸ್‌ ಕಂಪನಿ ಲಿಮಿಟೆಡ್‌ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠವು ಮಾರ್ಚ್‌ ತಿಂಗಳ ವೇತನ ಬಿಡುಗಡೆ ಮಾಡುವಂತೆ ಮಧ್ಯಂತರ ಆದೇಶ ಹೊರಡಿಸಿದೆ.

ಮೇಲ್ಮನವಿಯ ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಲಾಗಿದೆ.

ಆಸ್ಟ್ರೇಲಿಯಾ ಕಂಪನಿಗಳ ಆಸಕ್ತಿ ಈ ಮಧ್ಯೆ ನಷ್ಟದಿಂದ ತತ್ತರಿಸಿ, ಮುಚ್ಚಿ ಹೋಗಿರುವ ಕೋಲಾರ ಚಿನ್ನದ ಗಣಿಯ ಚೂರುಪಾರುಗಳನ್ನು ತೆಗೆದುಕೊಳ್ಳಲು ಆಸ್ಟ್ರೇಲಿಯಾದ ಎರಡು ಕಂಪನಿಗಳು ಮುಂದೆ ಬಂದಿವೆ. ವಿಶ್ವದ ಅತ್ಯಂತ ಆಳದ ಎರಡನೇ ಚಿನ್ನದ ಗಣಿ ಎಂದು ಖ್ಯಾತವಾಗಿರುವ ಭಾರತ್‌ ಗೋಲ್ಡ್‌ ಮೈನ್ಸ್‌ 121 ವರ್ಷಗಳ ಸುದೀರ್ಘ ಸೇವೆಯ ಬಳಿಕ ಈಗ ಕೃಶವಾಗಿ ಹೋಗಿದೆ.

ಕಾರ್ಖಾನೆ ಬಾಗಿಲು ಮುಚ್ಚಿದೆ. ಈ ವಿವಾದ ನ್ಯಾಯಾಲಯದ ಕಟ್ಟೆ ಹತ್ತಿದೆ. ಚಿನ್ನದ ನಿಕ್ಷೇಪ ತಳಭಾಗವನ್ನು ಮುಟ್ಟಿದ್ದು, ಚಿನ್ನದ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗಿಂತ ಉತ್ಪದನಾ ವೆಚ್ಚವೇ ಅಧಿಕವಾಗಿದೆ. ಈಗ ಆಸ್ಟ್ರೇಲಿಯಾದ ಕಂಪನಿಗಳು ಗಣಿಯ ಚೂರು ಪಾರು ಕೊಳ್ಳಲು ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಯಾವ ಭಾಗ ಮಾರಾಟ ಮಾಡಬೇಕೆಂದು ನಿರ್ಧರಿಸಲು, ಮಾರಾಟ ಸಮಿತಿಯಾಂದನ್ನು ರಚಿಸುವ ಸಂಬಂಧ ಬಿ.ಜಿ.ಎಂ.ಎಲ್‌. ವಿಭಾಗೀಯ ಪೀಠದ ಅನುಮತಿ ಕೇಳುವ ಸಿದ್ಧತೆ ನಡೆಸಿದೆ.

ಇಡೀ ಗಣಿಯನ್ನು ಕೊಳ್ಳಲು ಯಾರೂ ಮುಂದೆ ಬಂದಿಲ್ಲ. ಆದರೆ, ಕರ್ನಾಟಕ ಗಡಿಯಿಂದ ಸ್ಪಲ್ಪವೇ ದೂರದಲ್ಲಿರುವ ಆಂಧ್ರಪ್ರದೇಶದ ಚಿಕ್ಕರಗುಂಟಾ ಮೊದಲಾದ ಭಾಗಗಳನ್ನು ಕೊಳ್ಳಲು ಕೆಲವು ಕಂಪನಿಗಳು ಆಸಕ್ತಿ ತೋರಿಸಿವೆ. ಈ ಪ್ರದೇಶದಲ್ಲಿ ಸುಮಾರು 2 ಮಿಲಿಯನ್‌ ಚಿನ್ನದ ನಿಕ್ಷೇಪ ಇದ್ದು, ಆರು ಟನ್‌ಗಳಷ್ಟು ಚಿನ್ನವನ್ನು ಉತ್ಪಾದಿಸಬಹುದಾಗಿದೆ ಎನ್ನುತ್ತಾರೆ ಬಿ.ಜಿ.ಎಂ.ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್‌.ಡಿ. ಪ್ರಸಾದ್‌.

ಆದಾಗ್ಯೂ ಸದ್ಯದ ಪರಿಸ್ಥಿತಿಯಲ್ಲಿ ಬಿ.ಜಿ.ಎಂ.ಎಲ್‌. ಈ ಚಿನ್ನವನ್ನು ಹೊರತೆಗೆಯುವ ಸ್ಥಿತಿಯಲ್ಲಿ ಇಲ್ಲ. ಈಗ ಎಲ್ಲ ಪ್ರಯತ್ನಗಳೂ ಮುಗಿದಿವೆ. 4000 ಕಾರ್ಮಿಕರ ಭವಿಷ್ಯ ಅತಂತ್ರಸ್ಥಿತಿಯಲ್ಲಿದೆ. ಗಣಿ ಮುಚ್ಚುವ ಸುತ್ತೋಲೆ ಹೊರಡಿಸಿದ್ದಾಗಿದೆ. ಈ ಮಧ್ಯೆ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠವು ಮುಂದುವರಿದ ಸ್ವಯಂ ನಿವೃತ್ತಿ ಯೋಜನೆ ಹಾಗೂ ಗಣಿ ಮುಚ್ಚುವ ಸುತ್ತೋಲೆ ಆದೇಶವನ್ನು ರದ್ದುಗೊಳಿಸಿ ತೀರ್ಪಿತ್ತಿದೆ. ಇದನ್ನು ಪ್ರಶ್ನಿಸಿ ಆಡಳಿತ ಮಂಡಳಿ ಮೇಲ್ಮನವಿ ಸಲ್ಲಿಸಿದೆ.

ಗಣಿಯ ಮೇಲೆ ಸಾಕಷ್ಟು ಸಾಲದ ಹೊರೆಯೂ ಇದೆ. ಗಣಿಯು ವಿದ್ಯುತ್‌ ಮಂಡಳಿಗೆ 720 ದಶಲಕ್ಷ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿಗೆ 55 ದಶಲಕ್ಷ, ಕರ್ನಾಟಕ ಸರಕಾರಕ್ಕೆ 25 ದಶಲಕ್ಷ ಗೌರವಧನ, ನೀರು ಸರಬರಾಜು ಮಂಡಳಿಗೆ 30 ದಶಲಕ್ಷ ರುಪಾಯಿ ಬಾಕಿ ಕೊಡಬೇಕಾಗಿದೆ. ಆದರೆ, 12 ಸಾವಿರ ಎಕರೆ ಭೂಮಿ, ಯಂತ್ರೋಪಕರಣಗಳೂ ಸೇರಿದಂತೆ ಕಾರ್ಖಾನೆಯ ಒಟ್ಟು ಆಸ್ತಿಯ ಮೌಲ್ಯ ನೂರು ಕೋಟಿ ರುಪಾಯಿಗಳು ಎನ್ನುತ್ತಾರೆ ಪ್ರಸಾದ್‌.

(ಐ.ಎ.ಎನ್‌.ಎಸ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X