ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಚಿಗುರಿದ ಹರಿಹರ ಕಿರ್ಲೋಸ್ಕರ್‌ ಪುನಾರಂಭದ ಕನಸು

By Staff
|
Google Oneindia Kannada News

ದಾವಣಗೆರೆ : ಆರ್ಥಿಕ ಮುಗ್ಗಟ್ಟಿನ ಕಾರಣದ ಮೇಲೆ ಜನವರಿ 1ನೇ ತಾರೀಖಿನಿಂದ ಬೀಗಮುದ್ರೆ ಘೋಷಿಸಿರುವ ಹರಿಹರದ ಮೈಸೂರು ಕಿರ್ಲೋಸ್ಕರ್‌ ಕಾರ್ಖಾನೆಯನ್ನು ಪುನಾರಂಭಿಸುವ ಪ್ರಯತ್ನಕ್ಕೆ ಚಾಲನೆ ದೊರೆತಿದೆ. ಈ ಕಾರ್ಖಾನೆಯ ನೈಜ ಸ್ಥಿತಿಗತಿಯ ಅಧ್ಯಯನಕ್ಕೆ ಸಮಿತಿಯನ್ನು ಕಳುಹಿಸಲು ಆಡಳಿತ ಮಂಡಳಿ ಅನುಮತಿ ನೀಡಿದೆ.

ಬುಧವಾರ ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಶ್ಯಾಂ ಕಿರ್ಲೋಸ್ಕರ್‌ ಮತ್ತು ಅತುಲ್‌ ಕಿರ್ಲೋಸ್ಕರ್‌ ಅವರು ಔಪಚಾರಿಕವಾಗಿ ಅಧ್ಯಯನ ಸಮಿತಿಯ ಆಗಮನಕ್ಕೆ ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿದುಬಂದಿದೆ. ಅಧ್ಯಯನ ತಂಡ ಬಹುತೇಕ ಸೋಮವಾರ ಕಾರ್ಖಾನೆಗೆ ಭೇಟಿ ನೀಡಲಿದ್ದು, ಮೇ 30ರೊಳಗೆ ವರದಿ ನೀಡಲಿದೆ.

ಕಾರ್ಖಾನೆಯ ಪುನಾರಂಭಕ್ಕಾಗಿ ಬೃಹತ್‌ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ಅವರ ಕಚೇರಿಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಹಿಂಡಸಗೇರಿ, ಜಿಲ್ಲಾಧಿಕಾರಿ ಕೆ. ಶಿವರಾಮು, ಕಾರ್ಮಿಕ ಸಂಘಟನೆಯ ಮುಖಂಡರು ಹಾಗೂ ಆಡಳಿತ ಮಂಡಳಿಯ ವರಿಷ್ಠರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಕಾರ್ಮಿಕ ಮುಖಂಡರ ಒತ್ತಡಕ್ಕೆ ಮಣಿದ ಆಡಳಿತ ಮಂಡಳಿ ಅಧ್ಯಯನ ತಂಡ ಕಾರ್ಖಾನೆಗೆ ಭೇಟಿ ನೀಡಲು ಸಮ್ಮತಿಸಿದೆ. ಸಮಿತಿ ವರದಿ ನೀಡಿದ ಬಳಿಕ ಕಾರ್ಖಾನೆಯ ಪುನಾರಂಭದ ಹಣೆಬರಹ ತಿಳಿಯಲಿದೆ. ಈ ಮಧ್ಯೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕಾರ್ಖಾನೆಯ ಪುನಾರಂಭ ಕಷ್ಟ. ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿದರೆ ಮತ್ತು ಹಣಕಾಸು ಸಂಸ್ಥೆಗಳು ಸಾಲ ನೀಡಲು ಒಪ್ಪಿದರೆ ಮಾತ್ರ ಪುನಾರಂಭದ ಯೋಚನೆ ಮಾಡಬಹುದು ಎಂದು ಆಡಳಿತ ಮಂಡಳಿ ಹೇಳಿದೆ ಎಂದು ಗೊತ್ತಾಗಿದೆ.

ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು, ಕಾರ್ಮಿಕ ಹಿತ ಬಲಿಕೊಡದಂತೆ ಕಾರ್ಮಿಕ ನಾಯಕರು ಆಗ್ರಹಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X