ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್‌ ಅಧಿಕಾರಿಯ ವರ್ಗಾವಣೆ ವಿರೋಧಿಸಿದ್ದಕ್ಕೆ ಲಾಠಿಯೇಟು

By Staff
|
Google Oneindia Kannada News

ಪಟ್ಟನಾಯಕನಹಳ್ಳಿ : ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಈ ಊರು ಮೊದಲ ಬಾರಿಗೆ ಸುದ್ದಿಗೆ ಬಿದ್ದಿದೆ, ಅದೂ ಎರಡು ತಿಂಗಳ ಹಿಂದಷ್ಟೇ ಊರಿಗೆ ಬಂದ ಸರ್ಕಾರಿ ಅಧಿಕಾರಿಯಾಬ್ಬರ ಮೂಲಕ.

ತಾಲ್ಲೂಕು ಕೇಂದ್ರ ಶಿರಾಕ್ಕೆ 18 ಕಿಮೀ ದೂರದಲ್ಲಿರುವ ಪಟ್ಟನಾಯಕನಹಳ್ಳಿ, ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಮೂಲಕವೇ ತನ್ನ ಅಸ್ತಿತ್ವನ್ನು ಕಂಡುಕೊಂಡಿರುವ ಸಣ್ಣ ಪಟ್ಟಣ. ಹತ್ತಾರು ಹಳ್ಳಿಗಳಿಗೆ ಕೊಂಡಿಯಂತಿರುವ ಈ ಊರು ಚುನಾವಣೆಯ ಹೊರತಾಗಿ ಯಾವತ್ತೂ ದೊಡ್ಡದೊಂದು ಘರ್ಷಣೆಯನ್ನಾಗಲೀ, ಕ್ರಿಯೆಯನ್ನಾಗಲೀ ಕಂಡದ್ದೇ ಇಲ್ಲ . ಅಂಥಾ ಊರಿನಲ್ಲಿ ಬಿರುಗಾಳಿಯೆಬ್ಬಿಸಿದ ಕೀರ್ತಿ ಪ್ರೊಬೇಷನರಿಯಲ್ಲಿರುವ ಸಬ್‌ ಇನ್ಸ್‌ಪೆಕ್ಟರ್‌ ಮಹೇಶ್‌ಕುಮಾರ್‌ ಅವರದ್ದು . ಅವರನ್ನು ವರ್ಗಾಯಿಸಿದ್ದೇ ಊರು ಒಟ್ಟಾಗಿ ಸೆಟೆದೇಳಲು ಕಾರಣವಾಯಿತು.

ಎರಡು ತಿಂಗಳ ಹಿಂದಷ್ಟೇ ಊರಿಗೆ ಬಂದ ಮಹೇಶ್‌ಕುಮಾರ್‌ ಅವರ ವರ್ಗಾವಣೆಯನ್ನು ವಿರೋಧಿಸಿ, ಪಟ್ಟನಾಯಕನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸುಮಾರು 4 ಸಾವಿರ ಮಂದಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು, ಮೌನ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ದೊಡ್ಡದಿತ್ತು . ಯಾಕೆಂದರೆ, ಮಹೇಶ್‌ಕುಮಾರ್‌ ಎನ್ನುವ ಪೊಲೀಸ್‌ ಇನ್ಸ್‌ಪೆಕ್ಟರ್‌ ಊರಿಗೆ ಕಾಲಿಟ್ಟದ್ದೇ ತಡ - ಹೆಣ್ಣು ಮಕ್ಕಳು ನೆಮ್ಮದಿಯ ದಿನಗಳನ್ನು ಕಾಣತೊಡಗಿದ್ದರು. ಊರಿಗೆ ಹೊಸದೊಂದು ರಂಗು ಬಂದಿತ್ತು .

ಇದೇ ಮೊದಲ ಬಾರಿಗೆ ಮುಚ್ಚಿದ ಬಾಗಿಲುಗಳ ಮರೆಯಲ್ಲಿ , ಹೊಂಗೆ ಮರದಡಿಯ ನೆರಳಿನಲ್ಲಿ ನಡೆಯುತ್ತಿದ್ದ ಮಟ್ಕಾ- ಇಸ್ಪೀಟು ಜೂಜು ಸಂಪೂರ್ಣವಾಗಿ ಕೊನೆಗೊಂಡಿತ್ತು . ಕುಡುಕರಿಗೆ ಕಡಿವಾಣ ಬಿದ್ದಿತ್ತು . ಕಾಮಣ್ಣರು ಬಾಲ ಕಳೆದುಕೊಂಡಿದ್ದರು. ಇದರಿಂದಾಗಿ, ಗಂಡಂದಿರ- ಮನೆ ಮಕ್ಕಳ ಸಂಪಾದನೆ ನೇರ ಮನೆಯ ದಾರಿ ಹಿಡಿಯಿತು. ಹೆಣ್ಣು ಮಕ್ಕಳು ನೆಮ್ಮದಿಯಿಂದರಲು ಇನ್ನೇನು ಬೇಕು. ಇಂಥಾ ಅಧಿಕಾರಿಯನ್ನು ಇನ್ನೊಂದೂರಿಗೆ ಬಿಟ್ಟು ಕೊಡಲಿಕ್ಕೆ ಜನ ಹೇಗೆ ಒಪ್ಪಿಯಾರು ?

ಮೌನ ಮೆರವಣಿಗೆಯ ನಂತರ, ಠಾಣೆಯ ಮುಂದೆ ಜಮಾಯಿಸಿದ ಜನ ಠಾಣೆಗೆ ಬೀಗ ಜಡಿದರು. ಡಿಎಸ್‌ಪಿ ಕೃಷ್ಣಂರಾಜು, ಹಾಗೂ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಪಿ.ಸಿ. ಗಣಪತಿ ಅವರು ಸ್ಥಳಕ್ಕೆ ಧಾವಿಸಿದರಾದರೂ, ಭಾವೋದ್ರಿಕ್ತ ಜನರ ಮನವೊಲಿಸುವಲ್ಲಿ ವಿಫಲರಾದರು. ತಹಸಿಲ್ದಾರ್‌ ಬರುವವರೆಗೂ ಡಿಎಸ್ಪಿ ಸೇರಿದಂತೆ ಎಲ್ಲ ಪೊಲೀಸರು ಠಾಣೆಯಾಳಗೇ ಬಂಧಿಗಳಾಗಿರಬೇಕಾಯಿತು. ವರ್ಗಾವಣೆ ನಿರ್ಣಯ ಸರ್ಕಾರದ್ದಾಗಿರುವುದರಿಂದ ತಾವು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ತಹಸಿಲ್ದಾರ್‌ ಜನತೆಯನ್ನು ಸಮಾಧಾನ ಪಡಿಸಿದರು.

ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋದದ್ದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಆರ್‌.ಹಿತೇಂದ್ರ ಸ್ಥಳಕ್ಕೆ ಧಾವಿಸಿದಾಗ. ಜನತೆಯ ಪ್ರಶ್ನೆಗೆ ಪೊಲೀಸ್‌ ಅಧೀಕ್ಷಕರು ಉತ್ತರಿಸಲು ವಿಫಲರಾದಾಗ, ಅವರೊಂದಿಗಿದ್ದ ಸಶಸ್ತ್ರ ಮೀಸಲು ಪಡೆಯ ಪೊಲೀಸರು ನೆರೆದಿದ್ದ ಜನರ ಮೇಲೆ ಲಾಠಿ ಪ್ರಹಾರ ನಡೆಸಿದರು. ಲಾಠಿ ಪ್ರಹಾರದಲ್ಲಿ ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ.

ಪೊಲೀಸ್‌ ಅಧಿಕಾರಿಗಳ ವರ್ತನೆಯ ವಿರುದ್ಧ ರೊಚ್ಚಿಗೆದ್ದಿರುವ ಸಾರ್ವಜನಿಕರು, ಮಹೇಶ್‌ಕುಮಾರ್‌ ಅವರನ್ನು ಪಟ್ಟನಾಯಕನಹಳ್ಳಿಯಲ್ಲಿಯೇ ಉಳಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ತಹಸಿಲ್ದಾರ್‌ ಅವರಿಗೆ ಸಲ್ಲಿಸಿರುವ ಮನವಿಪತ್ರದಲ್ಲಿ - ಮೂರು ದಿನಗಳೊಳಗಾಗಿ ಮಹೇಶ್‌ಕುಮಾರ್‌ ಅವರನ್ನು ಪಟ್ಟನಾಯಕನಹಳ್ಳಿಗೆ ವಾಪಸ್ಸು ವರ್ಗಾಯಿಸಬೇಕು ಹಾಗೂ ಕನಿಷ್ಠ ಮೂರು ವರ್ಷಗಳ ಕಾಲ ಅವರನ್ನು ಬೇರೆಡೆಗೆ ವರ್ಗಾಯಿಸಬಾರದೆಂದು ಒತ್ತಾಯಿಸಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X