ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀನ್ಸೇ ಸೈ, ಜೀನ್ಸಿಗೇ ಜೈ !

By Staff
|
Google Oneindia Kannada News

ಎಂತು ಬಣ್ಣಿಸಲಿ ನಿನ್ನ -
ಜಗತ್ತನ್ನು ಅರಳು ಕಂಗಳಿಂದ ನೋಡುತ್ತಿರುವ ಎಳೆಯ ಜೀವದಿಂದ ಸಂಜೆ ಬದುಕಿನ ಯಜಮಾನರವರೆಗೆ, ವರ್ಕ್‌ಶಾಪಿನಲ್ಲಿ ಆಯಿಲ್‌- ಗ್ರೀಸ್‌ ಬಳಕೊಳ್ಳುವ ಪೋರನಿಂದ ಎಸಿ ರೂಮಿನಲ್ಲಿ ಕೂತು ಹಲೋ.. ಸ್ಪೀಕಿಂಗ್‌ ಎಂದು ಹಸನಾಗಿ ಮಾತಾಡುವ ಪೋರಿಯವರೆಗೆ, ದಿಲ್ಲಿಯಿಂದ ಹಳ್ಳಿಯವರೆಗೆ- ಎಲ್ಲೆಲ್ಲೂ ಸಂದಿರುವ ಮಹಿಮಾನ್ವಿತ ಏ ಜೀನ್ಸ್‌ , ನಿನಗೆ ಕೋಟಿ ನಮನ. ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೀಯೆ, ಶುಭಾಶಯಗಳು.

ಸರಿಯಾಗಿ 128 ವರ್ಷಗಳ ಹಿಂದೆ- ಅವತ್ತು ಮೇ 20, ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಸದ್ದಿಲ್ಲದೆ ಹುಟ್ಟಿದೆ. ವಾಮನನಂತೆ ಇದ್ದವ ನೋಡ ನೋಡುತ್ತಿದ್ದಂತೆ ತ್ರಿ ವಿಕ್ರಮನಾದೆ. ಆನೆ ನಡೆದದ್ದೇ ದಾರಿ ಅನ್ನುತ್ತಾರಲ್ಲ , ನಿನ್ನ ನಡೆಯೂ ಅಷ್ಟೇ ಶಕ್ತಿಯುತವಾದುದು. ಜಾತಿ, ದೇಶ, ಊರು, ಭಾಷೆ, ಲಿಂಗ, ವಯಸ್ಸು ಎಲ್ಲವೂ ನಿನ್ನಲ್ಲಿ ಲೀನ- ಜೀನ್ಸೈಕ್ಯ!

ನಿನ್ನನ್ನು ಸಮಾಜವಾದಿ ಸಮವಸ್ತ್ರ ಅಂದವರೂ ಉಂಟು. ಸಮಾಜವಾದದ ವಿಕಾಸದಷ್ಟೇ ನಿನ್ನ ನಡೆಯೂ ರೋಚಕ.

1853, ಬದುಕರಸಿಕೊಂಡು ಇಬ್ಬರು ಸೋದರಿಯರೊಂದಿಗೆ ಸ್ಯಾನ್‌ಫ್ರಾನ್ಸಿಸ್ಕೋಗೆ ಬಂದ 24ರ ಉಕ್ಕು ಯೌವ್ವನದ ಲೆವಿಸ್ಟ್ರಾಸ್‌ ನೆಲೆ ನಿಂತದ್ದು , ದರ್ಜಿಗಳಿಗೆ ಬಟ್ಟೆ- ದಾರ ಒದಗಿಸುವ ಉದ್ದಿಮೆಯಲ್ಲಿ . ಯಶಸ್ಸೆನ್ನುವುದು ಕೈ ಬಿಡದಾಯಿತು. 20 ವರ್ಷಗಳಲ್ಲೇ ಯಶಸ್ಸಿನ ಭಾರೀ ಏಣಿ ಹತ್ತಿದ. ಸಗಟು ಮಾರಾಟದಲ್ಲಿ ಹೆಸರು, ಹಣ - ಎರಡೂ ಕೈತುಂಬ.

ಲೆವಿಸ್ಟ್ರಾಸ್‌ ಗ್ರಾಹಕರಲ್ಲಿ ಲಾಟ್‌ವಿಯಾ ಮೂಲದ ಡೆವಿಸ್‌ ಮೊದಲಿಗ. ಡೆವಿಸ್‌ ಹತ್ತಿರ ಬಟ್ಟೆ ಹೊಲಿಸುವ ಗಿರಾಕಿಗಳಲ್ಲಿ ಒಬ್ಬ ದಢೂತಿ, ಆತನ ಪ್ಯಾಂಟಿನ ಜೇಬೋ ಸದಾ ಅಭದ್ರ. ಹೊಲೆದಷ್ಟೂ ಹರಿದುಹೋಗುವ ಪೈಕಿಯದು. ಈ ಜೇಬು ಡೆವಿಸ್‌ಗೆ ತಲೆ ನೋವಾಯಿತು. ಅಂಥ ಒತ್ತಡದಲ್ಲೇ ಅಲ್ಲವೇ ಅದ್ಭುತ ಐಡಿಯಾಗಳು ಹೊಳೆಯುವುದು. ಡೇವಿಸ್‌ಗೂ ಥಟ್ಟಂತ ಹೊಳೆದೇ ಬಿಟ್ಟಿತು ಒಂದು ಯೋಚನೆ- ಜೇಬಿನ ತುದಿಗಳಿಗೆ ತಾಮ್ರದ ಬಟನ್‌ ಹಾಕಿದರೆ ?! ಹಾಕಿಯೂ ಬಿಟ್ಟ , ಸೈ ಅನ್ನಿಸಿಕೊಂಡ.

ಚಾಣಾಕ್ಷ ಡೆವಿಸ್‌ ತನ್ನ ಅನನ್ಯ ಯೋಚನೆಗೆ ಪೇಟೆಂಟ್‌ ಪಡೆಯಲು ನಿರ್ಧರಿಸಿದ. 68 ಡಾಲರ್‌ ಬೇಕಿತ್ತು ಪೇಟೆಂಟ್‌ ಪಡೆಯಲು. ದುರದೃಷ್ಟವಶಾತ್‌ ಅವನ ಬಳಿ ಅಷ್ಟು ಹಣ ಇರಲಿಲ್ಲ. ತಕ್ಷಣ ನೆನಪಿಗೆ ಬಂದದ್ದು- ಲೆವಿಸ್ಟ್ರಾಸ್‌. ಆತನೋ ಪಕ್ಕಾ ವ್ಯಾಪಾರಿ. ಡೆವಿಸ್‌ ಐಡಿಯಾವನ್ನೇ ಪ್ರೊಡಕ್ಟ್‌ ಪ್ರಮೋಟರ್‌ ಆಗಿಸಿದ. ಇಂತು ಹುಟ್ಟಿದ್ದು ನೀನು, 1873 ರ ಮೇ 20ರಂದು.

ಜೀನ್ಸ್‌ ತಯಾರಿಕೆಗೇ ಪೇಟೆಂಟ್‌ ಪಡೆದ ಲೆವಿ ಜೀನ್ಸನ್ನು ತಯಾರಿಸಿದ, ಮಾರಿದ, ಇತಿಹಾಸದಲ್ಲಿ ಜೀವಂತನಾದ. 68 ಡಾಲರ್‌ ಹೊಂದಿಸಲಾರದ ಬಡಪಾಯಿ ಡೆವಿಸ್‌ ಕಳೆದುಹೋದ.

ಅಮೆರಿಕದ ಗಣಿ ಕಾರ್ಮಿಕರು ಹಾಕುತ್ತಿದ್ದ ನೀಲಿ ಬಟ್ಟೆಯೂ ವಾಸ್ತವದಲ್ಲಿ ನೀನೇ (ಜೀನ್ಸೆ). ನಿನಗಿನ್ನೂ ಜೀನ್ಸೆಂದು ನಾಮಕರಣವಾಗಿರಲಿಲ್ಲ ; ವ್ಯೇಸ್ಟ್‌ ಓವಲ್‌ ಅನ್ನುತ್ತಿದ್ದರು. 5 ಜೇಬುಗಳಿದ್ದ ಕಾರಣ ಅದು ಫೈವ್‌ ಪಾಕೆಟ್‌ ವಂಡರ್‌ ಆಗಿತ್ತು . ಡೆನಿಮ್‌ನಂಥ ನೀಲಿ ಬಣ್ಣದ ತುಟ್ಟಿ ಜೀನ್ಸ್‌ನಿಂದ ಹಿಡಿದು ಕಂದು ಬಣ್ಣದ ಅಗ್ಗ ಬೆಲೆಯ ಡಕ್‌ ಎಂಬ ಬಟ್ಟೆಯೂ ಬಳೆಕೆಯಲ್ಲಿತ್ತು. ಆದರೆ ಲೋಹದ ಗುಂಡಿಗಳ ಫೈವ್‌ ಪಾಕೆಟ್‌ ವಂಡರನ್ನು ಪರಿಪೂರ್ಣ ಜೀನ್ಸ್‌ ಆಗಿಸಿದ್ದು ಲೆವಿ (ವಾಸ್ತವದಲ್ಲಿ ಡೆವಿಸ್‌).

ಲಂಗ- ಕುಪ್ಪಸ/ದಾವಣಿ, ಸೀರೆಗಳ ಉಟ್ಟ ಬೆರಳೆಣಿಕೆಯ ಹೆಣ್ಣು ಮಕ್ಕಳು ಕಾಲೇಜು ಮೆಟ್ಟಿಲು ಹತ್ತುತ್ತಿದ್ದ ಕಾಲ ಅದು. ಜೀನ್ಸನ್ನೇ ಧರಿಸದ ಮಂದಿಯ ಎಣಿಸಬಹುದಾದ ಕಾಲವಿದು. ಏನೆಲ್ಲಾ ಮಾಡಿಬಿಟ್ಟೆ ನೀನು. ಅಮ್ಮಣ್ಣಿ ಕಾಲೇಜಿನ ಸುಕನ್ಯಾಗೆ ಜೀನ್ಸ್‌ ನೆಚ್ಚು. ಯಾಕಮ್ಮಾ ಅಂದರೆ, ನಾನು ಕೈನೆಟಿಕ್‌ ಹೋಂಡಾದಲ್ಲೇ ಓಡಾಡೋದು. ವೆಹಿಕಲ್‌ ಓಡಿಸೋಕೆ ಚೂಡಿದಾರ್‌ ಆರಾಮಲ್ಲ. ನೀವು ಹೇಗೇ ನೋಡಿ, ಜೀನ್ಸೇ ಕಂಫರ್ಟಬಲ್‌ ಅಂತಾರೆ . ಆಕೆಯ ದನಿಗೆ ಗೆಳೆಯ- ಗೆಳತಿಯರ ಹಿಂಡಿನ ಒಕ್ಕೊರಲೂ ಉಂಟು.

ಅಂದಮಾತ್ರಕ್ಕೆ, ನಿನ್ನನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ, ವಿರೋಧವಿಲ್ಲದೆ ಅಪ್ಪಿಕೊಂಡಿದ್ದಾರೆ ಎಂದರ್ಥವಲ್ಲ. ಬೆಂಗಳೂರಿನ ಮಹಿಳಾ ಕಾಲೇಜೊಂದರಲ್ಲಿ ಜೀನ್ಸನ್ನು ಬ್ಯಾನ್‌ ಮಾಡಿದ ಪ್ರಕರಣ ದೊಡ್ಡದಾಗಿ ಸುದ್ದಿಯಾಗಿರಲಿಲ್ಲವೇ. ಆದರೆ, ವಿದ್ಯಾರ್ಥಿನಿಯರು ರೊಚ್ಚಿಗೆದ್ದರು. ನಾವು, ನಮ್ಮಿಷ್ಟ ಅಂದರು. ಜೀನ್ಸಿಗೇ ಜೈಕಾರ ಕೂಗಿದರು. ವೇದಿಕೆ ಹತ್ತಿದರು. ಚರ್ಚೆ ಮಾಡಿದರು. ನಮ್ಮ ಸಂಸ್ಕೃತಿ, ಕುಂಕುಮ, ಸೀರೆ ಅಂತಾನೂ ಕೆಲ ಮಂದಿ ದನಿಯೆತ್ತಿದರು. ಆದರೆ, ಜಯ ಸಿಕ್ಕಿದ್ದು ನಿನ್ನ ಬಣಕ್ಕೇ. ಮನೇಲಿ ಗೌರಮ್ಮನ ಥರಾ ಕೂರೋಕೆ ನಮ್ಮಿಂದಾಗೊಲ್ಲ . ಗಂಡಸರ ಥರಾನೇ ನಾವೂ ಓಡಾಡಬೇಕು, ಕೆಲಸ ಮಾಡಬೇಕು, ಕಷ್ಟ ಪಡಬೇಕು. ಜೀನ್ಸ್‌ ಹಾಕೋದರಲ್ಲಿ ಏನು ತಪ್ಪು ? ಹಾಗೆ ನೋಡಿದರೆ, ಸೀರೆಯಷ್ಟು ಸೆಕ್ಸಿ ಬಟ್ಟೆ ಬೇರಾವುದಿದೆ ಅಂತ ಬಲವಾಗಿ ಸಮರ್ಥಿಸಿಕೊಂಡರು. ಜೀನ್ಸ್‌ ತೊಟ್ಟು ಬೀಗಿದರು.

ಅಮೇರಿಕಾದ್ದು ಮತ್ತೊಂದು ಕಥೆ. ದೇಶದ ಒಗ್ಗಟ್ಟಿನ ಪ್ರತೀಕ ಯಾವುದು- ಅಂತ ಅಮೆರಿಕೆಯ ಶಾಲೆಯಲ್ಲಿ ವಿದ್ಯಾರ್ಥಿಗೆ ಮೇಷ್ಟ್ರು ಕೇಳಿದರಂತೆ. ಹುಡುಗ ಹಿಂದೂಮುಂದೂ ಯೋಚಿಸದೆ ಹೇಳೇಬಿಟ್ಟ - ಜೀನ್ಸ್‌. ಆಗ ನಿನಗಾದ ಖುಷಿಯೆಷ್ಟು ?

ನಿನಗೀಗ 128. ಎದುರಾಳಿಗಳೇ ಇಲ್ಲ . ಜೀನ್ಸೇ ಸೈ, ಜೀನ್ಸಿಗೇ ಜೈ ಎನ್ನುವ ಮಾತೇ ವಸ್ತ್ರ ಜಗತ್ತಿನಲ್ಲೆಲ್ಲ . ಮುಂದೊಂದು ದಿನ ನೀನಿಲ್ಲದ ಮನೆಯಿಲ್ಲ ಅನ್ನುವಂತಾದರೂ ಅಚ್ಚರಿಯಿಲ್ಲ . ಜಗತ್ತಿಗೆ ಸಮವಸ್ತ್ರ ತೊಡಿಸುವ ಆ ದಿನ ಯಾವತ್ತು ಬರುತ್ತೆ ? ನೀನೇ ಹೇಳಬೇಕು. ಹುಟ್ಟುಹಬ್ಬದ ಖುಷಿಯಲ್ಲಿರುವ ನಿನಗೆ ಇನ್ನೊಮ್ಮೆ ಶುಭಾಶಯ. ಪ್ರಯಾಣ ಮುಂದುವರಿಯಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X